ಶಾಸಕರ ರಾಜೀನಾಮೆ ತಿರಸ್ಕರಿಸಲು ರೈತ ಸಂಘ ಆಗ್ರಹ
ಮೈಸೂರು

ಶಾಸಕರ ರಾಜೀನಾಮೆ ತಿರಸ್ಕರಿಸಲು ರೈತ ಸಂಘ ಆಗ್ರಹ

July 10, 2019

ಮೈಸೂರು,ಜು.9(ವೈಡಿಎಸ್)-ಕಾರಣವಿಲ್ಲದೆ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ತಿರಸ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.

ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಶಾಸಕರು ರಾಜೀನಾಮೆ ನೀಡಬೇಕಾದರೆ ಮತದಾರರ ಒಪ್ಪಿಗೆ ಮತ್ತು ಸಕಾರಣ ನೀಡಬೇಕು. ಆದರೆ, ರಾಜೀನಾಮೆ ಸಲ್ಲಿಸಿರುವ ಶಾಸಕರು ಸಕಾರಣ ನೀಡಿಲ್ಲ. ಅಧಿಕಾರದ ಆಸೆಯಿಂದ ಮಾರಾಟದ ಸರಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು. ಹಾಗಾಗಿ ಮತದಾರರು, ಶಾಸಕರ ರಾಜೀನಾಮೆ ಅಂಗೀಕರಿಸದಂತೆ ವಿಧಾನಸಭಾಧ್ಯಕ್ಷರಿಗೆ ಆಕ್ಷೇಪಣೆ ಸಲ್ಲಿಸಬೇಕು. ಜತೆಗೆ ಮರು ಚುನಾವಣಾ ದುಂದುವೆಚ್ಚದ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು. ಈ ಕುರಿತು ರೈತ ಸಂಘದಿಂದಲೂ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯಪಾಲರು ಶಾಸಕರ ರಾಜೀನಾಮೆ ವಿಷಯದಲ್ಲಿ ಮಧ್ಯಪ್ರವೇಶಿಸಬಾರದಿತ್ತು ಮತ್ತು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆಯಬಾರದಿತ್ತು. ಇದನ್ನು ಗಮನಿಸಿದರೆ ರಾಜ್ಯಪಾಲರು ಒಂದು ಪಕ್ಷದ ಹಿತ ನೋಡುತ್ತಿದ್ದಾರೆಂದು ಅನ್ನಿಸುತ್ತದೆ. ರಾಜ್ಯದಲ್ಲಿ ಬರ ಇದ್ದು, ಜನ- ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದಾರೆ. ಹಾಗಾಗಿ ಬಾಂಬೆ, ಗೋವಾದಲ್ಲಿರುವ ಶಾಸಕರು ಕೂಡಲೇ ರಾಜ್ಯಕ್ಕೆ ಮರಳಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಎಂದು ಮನವಿ ಮಾಡಿದ ಅವರು, ಶಾಸಕರು ರಾಜೀನಾಮೆ ಸಲ್ಲಿಸುವ ಮೂಲಕ ಮತದಾರರನ್ನು ಅವಮಾನಿಸಿದ್ದಾರೆ. ಕರ್ನಾಟಕ ರಾಜಕಾರಣಕ್ಕೆ ಒಂದು ಸಂಸ್ಕøತಿ, ಮೌಲ್ಯವಿತ್ತು. ಈಗ ತಲೆ ತಗ್ಗಿಸುವಂತಾಗಿದೆ ಎಂದರು.

ಬೃಹತ್ ಸಮಾವೇಶ: 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಜು.21ರಂದು ರೈತರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಈ ವೇಳೆ ಸಮ್ಮಿಶ್ರ ಸರ್ಕಾರದ ವೈಫಲ್ಯ, ಬರಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ, ವಿರೋಧ ಪಕ್ಷದ ದಿವಾಳಿತನವನ್ನು ಬಯಲಿಗೆಳೆಯುವ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಲು ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಶ್ವ ಸಂಸ್ಥೆ ಸಿದ್ಧಪಡಿಸಿರುವ ರೈತರ ಹಕ್ಕುಗಳನ್ನು ಭಾರತದಲ್ಲಿ ಜಾರಿಗೆ ತರಬೇಕು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ವಿಷಯಯವನ್ನು ಖಾಸಗಿ ಮಸೂದೆಯಾಗಿ ಮಂಡಿಸುವಂತೆ ಕೋರಿದ್ದು, ಈ ಮಸೂದೆಯನ್ನು ಬೆಂಬಲಿಸುವಂತೆ ಎಲ್ಲ ಸಂಸದರಿಗೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಮುಖಂಡರಾದ ಎಂ.ಮಂಜು ನಾಥಗೌಡ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪ್ರಕಾಶ್ ಹೆಜ್ಜಿಗೆ, ಸಿದ್ದರಾಜು, ಎಂ.ಎಸ್.ಅಶ್ವತ್ಥನಾರಾಯಣ ರಾಜೇ ಅರಸ್, ಈ.ರಾಜು ಮತ್ತಿತರರು ಭಾಗವಹಿಸಿದ್ದರು.

Translate »