ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

July 10, 2019

ಮೈಸೂರು,ಜು.9(ಪಿಎಂ)-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಮಂಗಳವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕಾಲೇಜಿನ ಕೃಷ್ಣರಾಜ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಹಪಠ್ಯ ಚಟುವಟಿಕೆಗಳ ಉದ್ಘಾಟಿಸಿದ ಶಾಸಕ ಎಲ್. ನಾಗೇಂದ್ರ, ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳು ಗುರು-ಹಿರಿಯರ ಮಾರ್ಗದರ್ಶನದಲ್ಲಿ ಸಾಧನೆಯ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಸ್ತು, ಬದ್ಧತೆ ಇದ್ದಲ್ಲಿ ಸಾಧನೆ ಹಾದಿ ಕ್ರಮಿಸುವುದು ಸುಲಭ ಸಾಧ್ಯ. ಪ್ರಸ್ತುತ ಬಹುತೇಕ ಯುವಜನರನ್ನು ಮೊಬೈಲ್ ಫೋನ್ ವ್ಯಾಮೋಹ ಆವರಿಸಿದ್ದು, ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಕೆಗೆ ಆದ್ಯತೆ ನೀಡಿದರೆ ಮಾತ್ರವೇ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿ ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಕಲಾ ವಿಭಾಗದ 6, ವಿಜ್ಞಾನ ವಿಭಾಗದ 6 ಹಾಗೂ ವಾಣಿಜ್ಯ ವಿಭಾಗದ 8 ಮಂದಿ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ನಗದಿನೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎನ್.ರತ್ನ, ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ಎಂ.ದೇವಿಪ್ರಸಾದ್, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಹೆಚ್.ಡಿ.ಕಮಲಾಮೂರ್ತಿ, ಜನಪದ ಕಲಾವಿದ ಅಮ್ಮ ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಆರ್.ಸಿದ್ದರಾಜು, ಉಪ ಪ್ರಾಂಶುಪಾಲ ಡಾ.ಡಿ.ಮಹೇಶ್ ಮತ್ತಿತರರು ಹಾಜರಿದ್ದರು.

Translate »