ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ
ಮೈಸೂರು

ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ

August 25, 2018

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ.ವರೆಗಿನ ಬೆಳೆ ಹಾಗೂ ಚಾಲ್ತಿ ಸಾಲವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಇದರಿಂದಾಗಿ 30,163 ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗಲಿದ್ದು, 22 ಲಕ್ಷ ರೈತರು ಈ ಸಾಲ ಮನ್ನಾ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು. 2018-19ನೇ ಸಾಲಿನಲ್ಲಿ ಬ್ಯಾಂಕ್‍ಗಳಿಗೆ 8656 ಕೋಟಿ ರೂ. ಪಾವತಿಸಲಾಗುತ್ತದೆ. ನಂತರ ಮುಂದಿನ ಸಾಲುಗಳಲ್ಲಿ ಕ್ರಮವಾಗಿ 7876 ಮತ್ತು 7131 ಕೋಟಿ ರೂ.ಗಳನ್ನು ಬಡ್ಡಿ ಸಮೇತ ಬ್ಯಾಂಕ್ ಗಳಿಗೆ ಪಾವತಿಸಲಾಗುತ್ತದೆ ಎಂದು ಹೇಳಿದರು. ರೈತರ ಸಾಲ ಮನ್ನಾ ಮಾಡಲು ಆರಂಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಒಪ್ಪಿದ್ದವು. ನಂತರ ಕ್ಯಾತೆ ತೆಗೆದಿವೆ.

ಆದರೂಸರ್ಕಾರ ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸರ್ಕಾರದ ಗ್ಯಾರಂಟಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು. ನಮ್ಮ ಸರ್ಕಾರವು ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಈಗಾಗಲೇ ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾ ಆಗಿ ಹಣವೂ ಬಿಡುಗಡೆ ಆಗಿದೆ. ಈ ಪ್ರಯೋಜನವು ಮಧ್ಯವರ್ತಿಗಳ ಪಾಲಾಗದೇ ರೈತರಿಗೆ ನೇರವಾಗಿ ತಲುಪಬೇಕು. ಅವರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಬೇಕು ಎಂಬ ಉದ್ದೇಶದಿಂದ ಸಾಲ ಮನ್ನಾ ಸಂಬಂಧಪಟ್ಟ ವ್ಯವಹಾರಗಳನ್ನು ನಿರ್ವಹಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಮ್ಮ ಸರ್ಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂಬ ಊಹಾಪೋಹ ಸುದ್ದಿಗಳ ಬಗ್ಗೆ ನಾವು ವಿಚಲಿತನಾಗುವುದಿಲ್ಲ. ಸರ್ಕಾರವು 5 ವರ್ಷಗಳ ಕಾಲ ಇದ್ದೇ ಇರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಉಂಟಾಗಿರುವ ಹಾನಿಗೆ 2000 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ಸಂಪುಟ ಸಭೆ ನಿರ್ಧರಿಸಿದೆ. ಅಲ್ಲದೇ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಮತ್ತು ಅಡಿಕೆ ನಷ್ಟವಾಗಿರುವುದರ ಬಗ್ಗೆ ಕಾಫಿ ಬೋರ್ಡ್ ಮತ್ತು ಇತರೆ ಇಲಾಖೆಗಳು ಸಮೀಕ್ಷೆ ನಡೆಸುತ್ತಿವೆ. ಆದರೆ ಸಮೀಕ್ಷಾ ವರದಿ ಬಂದ ನಂತರ ಅದನ್ನು ತಾವೇ ಖುದ್ದಾಗಿ ಪ್ರಧಾನಮಂತ್ರಿಗಳಿಗೆ ತಲುಪಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

Translate »