ರೈತಸ್ನೇಹಿ ಕಾಯ್ದೆ: ಸಚಿವ ಸೋಮಶೇಖರ್ ಸ್ಪಷ್ಟನೆ
ಮೈಸೂರು

ರೈತಸ್ನೇಹಿ ಕಾಯ್ದೆ: ಸಚಿವ ಸೋಮಶೇಖರ್ ಸ್ಪಷ್ಟನೆ

December 9, 2020

ಎಪಿಎಂಸಿ ಮುಚ್ಚುವುದಿಲ್ಲ, ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ಸಚಿವರ ಭರವಸೆ

ಮೈಸೂರು, ಡಿ.8(ವೈಡಿಎಸ್)- ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಪ್ರಯೋಜನಗಳು ಇವೆಯೇ ಹೊರತು ಯಾವುದೇ ತೊಂದರೆ ಇಲ್ಲ. ಇಂತಹ ಒಂದು ಐತಿಹಾಸಿಕ ಕೃಷಿ ಕಾಯಿದೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ. ಇದೊಂದು ರೈತಸ್ನೇಹಿ ಕಾಯ್ದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಈಗಲೂ ನಡೆದಿದ್ದು, ಹಾಗೇ ಮುಂದುವರೆಯಲಿದೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಮುಂದುವರಿಯುತ್ತದೆ. ಇವುಗಳನ್ನು ಮುಚ್ಚುವುದಿಲ್ಲ ಎಂದು ರೈತರಿಗೆ ಸರ್ಕಾರ ಭರವಸೆ ನೀಡುತ್ತದೆ ಎಂದಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಗೂ ಪೂರ್ವದಲ್ಲಿ ಕಾಯ್ದೆ ಕಲಂ8(2) ಉಲ್ಲಂಘಿಸಿದರೆ ಕಲಂ 117ರಡಿ ದಂಡ ಅಥವಾ ಶಿಕ್ಷೆಗೆ ಗುರಿಪಡಿಸುವ ಅವಕಾಶವಿತ್ತು. ಪ್ರಾಂಗಣದ ಹೊರಗಡೆ ಲೈಸೆನ್ಸ್ ಇಲ್ಲದೆ ಮಾರಾಟ ಮಾಡಿದರೆ ದಂಡ ಮತ್ತು ಶಿಕ್ಷೆಗೆ ಗುರಿಪಡಿಸಬಹುದಾಗಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ ಎಂದು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದಾಗಿ ರೈತರಿಗೆ ಪೂರ್ಣ ಸ್ವಾತಂತ್ರ್ಯ ದೊರೆ ಯುತ್ತದೆ. ಅವರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಸಂಪೂರ್ಣ ಅಧಿಕಾರವನ್ನು ರೈತರಿಗೇ ನೀಡಲಾಗಿದೆ. `ನನ್ನ ಬೆಳೆ ನನ್ನ ಹಕ್ಕು’ ಎಂದು ರೈತರು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ರೈತರು ಬೆಳೆಯನ್ನು ಯಾರಿಗೆ ಬೇಕಾದರೂ ನೇರವಾಗಿ ಮಾರಾಟ ಮಾಡಬಹುದು. ಯಾವುದೇ ರಾಜ್ಯದಲ್ಲಿಯಾದರೂ ಬೆಳೆ ಮಾರಾಟ ಮಾಡಬಹುದು. ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಬೆಳೆ ಖರೀದಿಸ ಬಹುದು. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚುವುದರಿಂದ ಹೆಚ್ಚಿನ ಬೆಲೆ ಸಿಗಲಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಸಾಗಣೆ ವೆಚ್ಚ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ವಹಿಸಿದೆ. ಅಲ್ಲದೆ, ರೈತರು ಉತ್ಪಾದನಾ ಸ್ಥಳದಿಂದ ಬೇಡಿಕೆ ಇರುವ ಪ್ರದೇಶಗಳಿಗೆ ಒಯ್ದು ಸುಲಭವಾಗಿ ಮಾರಬಹುದಾಗಿದೆ. ಇದರಿಂದ ರೈತರು ಆರ್ಥಿಕ ಶಕ್ತಿವಂತರಾಗುತ್ತಾರೆ ಎಂದರು.

ರೈತರು ಉತ್ಪನ್ನಗಳನ್ನು ಹೊಲಗಳಲ್ಲಿಯೇ ದೊಡ್ಡ ಗ್ರಾಹಕರಿಗೆ ಮಾರಲು ಅವಕಾಶ ಇರುವುದರಿಂದ ಮಧ್ಯವರ್ತಿಗಳ ಹಾವಳಿ ಅಥವಾ ಕಮಿಷನ್ ಏಜೆಂಟ್‍ಗಳ ಕೋಟಲೆ ಇರುವುದಿಲ್ಲ. ಎಪಿಎಂಸಿ ಆವರಣದಲ್ಲಿ ಖರೀದಿದಾರರು ಕಮಿಷನ್ ಏಜೆಂಟ್‍ಗಳಿಗೆ ಪಾವತಿಸುತ್ತಿದ್ದ ಶುಲ್ಕವೂ ಉಳಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »