ರೈತರ ಬೆಳೆ ಸಾಲ ಮನ್ನಾ: ವಾರದಲ್ಲಿ ಸರ್ಕಾರಿ ಆದೇಶ
ಮೈಸೂರು

ರೈತರ ಬೆಳೆ ಸಾಲ ಮನ್ನಾ: ವಾರದಲ್ಲಿ ಸರ್ಕಾರಿ ಆದೇಶ

July 29, 2018
  •  ಆದೇಶದೊಂದಿಗೆ ಮಾರ್ಗಸೂಚಿಯೂ ಪ್ರಕಟ
  • ಸಣ್ಣ, ಮಧ್ಯಮ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ
  •  ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವೂ ಮನ್ನಾ
  • ರೈತರಿಗೆ ವಂಚಿಸಿದರೆ ಸಹಕಾರಿ ಬ್ಯಾಂಕ್‍ಗಳ ಕಾರ್ಯದರ್ಶಿಗಳ ವಜಾ

ಬೆಂಗಳೂರು: ಬೆಳೆ ಸಾಲ ಮನ್ನಾದ ಸರ್ಕಾರಿ ಆದೇಶ ಇನ್ನೊಂದು ವಾರದಲ್ಲಿ ಹೊರಬೀಳಲಿದೆ ಎಂದಿರುವ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್, ಆದೇಶದ ಜೊತೆ ಮಾರ್ಗಸೂಚಿಯೂ ಪ್ರಕಟಗೊಳ್ಳಲಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮುಂಗಡ ಪತ್ರದಲ್ಲಿ ಪ್ರಕಟಿಸಿರುವಂತೆ ಸಣ್ಣ ಮತ್ತು ಮಧ್ಯಮ ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಆಗಲಿದೆ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲ, ಅದರ ಮೇಲಿನ ಬಡ್ಡಿ ಹಾಗೂ ಚಕ್ರಬಡ್ಡಿಯನ್ನು ನೇರವಾಗಿ ಸರ್ಕಾರವೇ ಮನ್ನಾ ಮಾಡಿ ರೈತರ ಮನೆ ಬಾಗಿಲಿಗೆ ಸಾಲ ಋಣ ಮುಕ್ತ ಪತ್ರ ತಲುಪಲಿದೆ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಮ್ಮತಿ ನೀಡಿದ ನಂತರವೇ ಆದೇಶ ಮತ್ತು ಮಾರ್ಗಸೂಚಿ ಹೊರಬೀಳುತ್ತಿದೆ. ಸಹಕಾರಿ ಬ್ಯಾಂಕ್‍ಗಳ ಕಾರ್ಯದರ್ಶಿಗಳು ರೈತರಿಗೆ ವಂಚನೆ ಮಾಡುವ ಸಾಧ್ಯತೆಗಳಿವೆ. ಅವರಿಗೆ ತಿಳಿಯದಂತೆ ಚಲನ್ಗಳಿಗೆ ಸಹಿ ಹಾಕಿಸಿಕೊಂಡು ಈ ಹಿಂದೆ ಕೆಲವರು ಲಾಭ ಮಾಡಿಕೊಂಡಿದ್ದಾರೆ, ಇದು ಸರ್ಕಾರದ ಗಮನಕ್ಕೆ ಬಂದಿದೆ.

ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕ್‍ಗಳು ಆಯಾ ಶಾಖೆಗಳಲ್ಲಿ ರೈತರು ಪಡೆದಿರುವ ಸಾಲದ ಮೊಬಲಗಿನ ಮಾಹಿತಿಯನ್ನು ಮೊದಲು ಕಡ್ಡಾಯವಾಗಿ ನೋಟೀಸ್ ಬೋರ್ಡ್‍ಗಳಲ್ಲಿ ಪ್ರಕಟಿಸಬೇಕು. ಇದರಿಂದ ಎಷ್ಟು ಸಾಲ ಪಡೆದಿದ್ದೇವೆ, ಸರ್ಕಾರ ಎಷ್ಟು ಮನ್ನಾ ಮಾಡಲಾಗುತ್ತಿದೆ ಎಂಬ ಅರಿವು ರೈತರಿಗೆ ಬರುತ್ತದೆ. ಇದಕ್ಕೂ ಮಿಗಿಲಾಗಿ ಯಾವುದೇ ಬ್ಯಾಂಕ್ ಕಾರ್ಯದರ್ಶಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದರೆ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಎಲ್ಲಾ ಸಹಕಾರಿ ಬ್ಯಾಂಕ್‍ಗಳು ಎಷ್ಟು ಕೃಷಿಕರಿಗೆ ಯಾವ ಪ್ರಮಾಣದ ಬೆಳೆ ಸಾಲ ನೀಡಿವೆ ಎಂಬ ಪೂರ್ಣ ಮಾಹಿತಿ ಮತ್ತು ದಾಖಲೆಯನ್ನು ಇಲಾಖೆಗೆ ಒದಗಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಸಹಕಾರ ಸಂಘಗಳಲ್ಲಿ ಬಾಕಿ ಇರುವ 10,700 ಕೋಟಿ ರೂ. ಚಾಲ್ತಿ ಸಾಲವೂ ಸೇರಿದೆ. ಇದೇ ಜುಲೈ 10ವರೆಗೆ ರೈತರು ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಒಟ್ಟಾರೆ 22.23 ಲಕ್ಷ ರೈತರಿಗೆ ಅನುಕೂಲವಾಗಲಿದೆ, ಜತೆಗೆ ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರ ಸುಸ್ತಿ ಸಾಲ 29,279 ಕೋಟಿ ರೂ. ಸಹ ಮನ್ನಾ ಆಗಲಿದೆ. ನಮ್ಮ ಸಂಘಗಳಲ್ಲಿ ಬೆಳೆ ಸಾಲ ಪಡೆದವರ ಚಾಲ್ತಿ ಖಾತೆಯ ಪ್ರೋತ್ಸಾಹ ಧನವನ್ನು 25 ಸಾವಿರದಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ಕೃಷಿ ಸಾಲ ಮಾಹಿತಿ ಆಧಾರವಾಗಿ ಇಟ್ಟುಕೊಂಡೇ 44,700 ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡು ಈಗಾಗಲೇ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

Translate »