ಮೈಸೂರು ಏರ್‍ಪೋರ್ಟ್‍ನಿಂದ  ಶೀಘ್ರ ಅಧಿಕ ವಿಮಾನ ಹಾರಾಟ
ಮೈಸೂರು

ಮೈಸೂರು ಏರ್‍ಪೋರ್ಟ್‍ನಿಂದ  ಶೀಘ್ರ ಅಧಿಕ ವಿಮಾನ ಹಾರಾಟ

July 29, 2018

ನವದೆಹಲಿ:  ಮೈಸೂರಿನಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಂದು ಸಂತಸದ ಸುದ್ದಿ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ ನಗರಕ್ಕೆ ಮುಂದಿನ 2 ತಿಂಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ. ಅಲ್ಲದೆ, ಅಹಮದಾಬಾದ್, ಚೆನ್ನೈ, ಪುಣೆ, ಹೈದರಾಬಾದ್ ಮತ್ತು ತಿರುಪತಿಗೂ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ.

ಮಹತ್ವಾಕಾಂಕ್ಷೆಯ ರೀಜನಲ್ ಕನೆಕ್ಟಿವಿಟಿ ಸ್ಕೀಂ (ಆರ್‌ಸಿಎಸ್), ಉಡಾನ್ ಎಂದು ಕರೆಯಲಾಗುವ (ಉಡೇ ದೇಶ್ ಕ ಆಮ್ ನಾಗರಿಕ್) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚಾಲನೆ ನೀಡಿದ್ದು, ಈ ಸೇವೆ ವಿಸ್ತೃತಗೊಳ್ಳುವುದರೊಂದಿಗೆ, ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಚ್ಚಿನ ವಿಮಾನಗಳ ಸೇವೆ ಆರಂಭ ವಾಗಲಿದೆ. ಆರ್‌ಸಿಎಸ್ ಯೋಜನೆಯು ಎಲ್ಲಾ ವೆಚ್ಚಗಳನ್ನು ಒಳಗೊಂಡು ವಿಮಾನ ದರವನ್ನು ರೂ. 2,500ಗೆ ನಿಗದಿ ಮಾಡಿದ್ದು, ಹಣದುಬ್ಬರ
ಸೂಚ್ಯಂಕದ ಪ್ರಕಾರ ಮೂರು ತಿಂಗಳಿಗೊಮ್ಮೆ ಪರಿಷ್ಕೃತಗೊಳ್ಳಲಿದೆ. ಪ್ರಸ್ತುತ, ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈ ಮಾರ್ಗವಾಗಿ ಮೈಸೂರಿನಿಂದ ಹೈದರಾಬಾದ್‍ಗೆ ಒಂದೇ ಒಂದು ಟ್ರೂಜೆಟ್ ವಿಮಾನ ಹಾರಾಟ ನಡೆಸುತ್ತಿದೆ. ಈ ಟ್ರೂಜೆಟ್ ವಿಮಾನದ ಪ್ರತಿದಿನದ ಕಾರ್ಯಾಚರಣೆ ಸೆಪ್ಟೆಂಬರ್ 20, 2017 ರಂದು ಆರಂಭವಾಯಿತು.

ಈ ವಿಮಾನವು 72 ಸೀಟುಗಳ ಸಾಮಥ್ರ್ಯ ಹೊಂದಿದೆ. ಇದು ಸಂಜೆ 7.20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ರಾತ್ರಿ 7.50ಕ್ಕೆ ಚೆನ್ನೈಗೆ ಹೊರಡಲಿದೆ. ಅಲ್ಲಿಂದ ಹೈದರಾಬಾದ್‍ಗೆ ತೆರಳಲಿದೆ. ಪ್ರತಿ ಟ್ರಿಪ್‍ನಲ್ಲಿ ಸುಮಾರು 65 ರಿಂದ 70 ಪ್ರಯಾಣಿಕರು ಸಂಚರಿಸಲಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಏರ್ ಪೋರ್ಟ್ ಪ್ರಾಧಿಕಾರ ತಿಳಿಸಿದೆ. ಇದಲ್ಲದೆ, ಈ ವಿಮಾನ ನಿಲ್ದಾಣದಿಂದ ಹಲವಾರು ಪ್ರೈವೇಟ್ ಜೆಟ್ ಅಲ್ಲದೆ, ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ನೂರಾರು ವಿಮಾನಗಳು ಕಾರ್ಯಾಚರಣೆ ನಡೆಸಿದವು.

ಕೇವಲ ಒಂದೇ ಒಂದು ವಿಮಾನ ಕಾರ್ಯಾಚರಣೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇಂಡಿಗೋ ಏರ್‌‌ಲೈನ್ಸ್‌ ಆಗಸ್ಟ್ ತಿಂಗಳಿನಿಂದ ಮೈಸೂರಿನಿಂದ ಹುಬ್ಬಳ್ಳಿಗೆ ಉಡಾನ್ ಯೋಜನೆಯಡಿ ಕನಿಷ್ಠ 8 ಹೊಸ ವಿಮಾನ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ವಿಮಾನಗಳು ಸಂಪೂರ್ಣವಾಗಿ ಫೆಬ್ರವರಿ 2019 ರಿಂದ ಕಾರ್ಯಾಚರಣೆ ನಡೆಸಲಿವೆ. ಏರ್ ಒಡಿಸಾ ಸಂಸ್ಥೆಯು ಮೈಸೂರಿನಿಂದ ಚೆನ್ನೈಗೆ ಮತ್ತು ಇಂಡಿಗೋ ಸಂಸ್ಥೆಯು ಹುಬ್ಬಳ್ಳಿ-ಅಹಮದಾಬಾದ್ ಮತ್ತು ಹುಬ್ಬಳ್ಳಿ-ಚೆನ್ನೈ ವಿಮಾನಗಳು ಆಗಸ್ಟ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು ವಿಮಾನ ಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಜುಲೈ 26 ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ವಿವಿಧ ಸೇವೆಗಳನ್ನು ಆರಂಭಿಸಲಿರುವ ಏರ್ ಓಡಿಸಾ, ಇಂಡಿಗೋ ಮತ್ತು ಸ್ಟಾರ್ ಏರ್ (ಗೋದ್‍ವತ್ ಗ್ರೂಪ್) ಸಂಸ್ಥೆಗಳು ಮೈಸೂರು, ಹುಬ್ಬಳ್ಳಿ, ಹೈದರಾಬಾದ್, ಪುಣೆ, ತಿರುಪತಿ, ಅಹಮದಾಬಾದ್ ಮತ್ತು ಚೆನ್ನೈ ನಗರಗಳಿಗೆ ಸಂಪರ್ಕ ಕಲ್ಪಿಸಲಿವೆ. ಇಂಡಿಗೋ ಸಂಸ್ಥೆಯು ಮತ್ತೊಂದು ಸೇವೆಯನ್ನು ಪರಿಚಯಿಸುತ್ತಿದ್ದು, ಹುಬ್ಬಳ್ಳಿ-ಹೈದರಾಬಾದ್ ವಿಮಾನವು ಆಗಸ್ಟ್ ತಿಂಗಳಿನಲ್ಲಿ ಗೋದ್‍ವತ್‍ಗೆ ಹುಬ್ಬಳ್ಳಿ-ಹಿಂಡನ್ ಮಾರ್ಗವಾಗಿ ಮುಂದಿನ ತಿಂಗಳು ತನ್ನ ಸೇವೆಯನ್ನು ಆರಂಭಿಸಲಿದೆ. ಇಂಡಿಗೋ ಸಂಸ್ಥೆಯು ಮುಂದಿನ ತಿಂಗಳು ಹುಬ್ಬಳ್ಳಿ – ಅಹಮದಾಬಾದ್ ಮತ್ತು ಹುಬ್ಬಳ್ಳಿ -ಚೆನ್ನೈ ಸೇವೆಗಳನ್ನು ಕಾರ್ಯಾಚರಿಸಲಿದೆ.

ಭಾರತೀಯ ಏರ್‍ಪೋಟ್ರ್ಸ್ ಪ್ರಾಧಿಕಾರದ ಮತ್ತೊಂದು ವರದಿ ಪ್ರಕಾರ ಪುಟ್ಟ ನಗರಗಳಾದ ಪುದುಚೇರಿ, ಸೇಲಂ, ನೈವೇಲಿ ಮತ್ತು ಕಡಪ ನಗರಗಳಿಗೂ ಮೈಸೂರು ವಿಮಾನ ನಿಲ್ದಾಣದಿಂದ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದೆ.

ಕಣ್ಣೂರು ಏರ್‍ಪೋರ್ಟ್ ಇನ್ನು 2 ಅಥವಾ ಮೂರು ತಿಂಗಳಲ್ಲಿ ಸಿದ್ಧಗೊಳ್ಳುವ ಸಾಧ್ಯತೆ ಇದ್ದು, ಚೆನ್ನೈನಿಂದ ಕಣ್ಣೂರು ಇಂಡಿಗೋ ಸೇವೆ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ಈ ವಿಮಾನ ನಿಲ್ದಾಣದಿಂದ ಪುದುಚೇರಿ, ಸೇಲಂ, ನೈವೇಲಿ, ಕಡಪ ಮತ್ತು ಮೈಸೂರು ಮಾರ್ಗವಾಗಿ ವಿಮಾನಗಳು ಸಂಚರಿಸಲಿವೆ.

Translate »