ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 280 ಎಕರೆ ಭೂಮಿ ಸ್ವಾಧೀನ
ಮೈಸೂರು

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 280 ಎಕರೆ ಭೂಮಿ ಸ್ವಾಧೀನ

June 8, 2019

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ವಿಸ್ತರಿಸಿ, ಅಭಿವೃದ್ಧಿಪಡಿಸಲು 280 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ಮತ್ತೊಂದು ವಿಮಾನ ಹಾರಾಟ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಭೂಮಿ ಸ್ವಾಧೀನ ಪಡಿಸಿಕೊಡುವಲ್ಲಿ ನೆರವಾಗಿದ್ದಾರೆ. ಮೈಸೂರಿನಿಂದ ದೇಶದ ವಿವಿಧ ಭಾಗಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಸರ್ಕಾರ ಸಬ್ಸಿಡಿ ಹಾಗೂ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಿರುವುದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಜುಲೈ ಮಾಹೆಯಲ್ಲಿ ಗೋವಾ ಮತ್ತು ಕೊಚ್ಚಿಗೆ ವಿಮಾನ ಸಂಪರ್ಕ ಸೇವೆ ಆರಂಭವಾಗುತ್ತದೆ. ನಂತರ ಬೆಳಗಾಂ, ಹೈದರಾಬಾದಿಗೂ ವಿಮಾನ ಹಾರಾಟ ಸೇವೆ ಆರಂಭಿಸಲಾ ಗುವುದು. ಮುಂದೆ ಪ್ರತೀ ದಿನ ಮೈಸೂರಿನಿಂದ ವಿಮಾನ ಹಾರಾಟ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ್ ಸಿಂಹ ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೈಸೂರು-ಬೆಂಗಳೂರು ನಡುವೆ ಎರಡನೇ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಜುಲೈನಲ್ಲಿ ಇನ್ನೂ ಹಲವು ವಿಮಾನಗಳು ಹಾರಾಟ ನಡೆಸಲಿವೆ ಎಂದರು.

ಏರ್‍ಪೋರ್ಟ್ ವಿಸ್ತರಣೆಗೆ 280 ಎಕರೆ ಭೂಮಿ ಸ್ವಾಧೀನ ಮಾಡಲಾಗಿದೆ. ಕೆಐಎಡಿಬಿಯಿಂದ ಬೆಲೆ ನಿಗದಿ ಮಾಡಿ ರೈತರಿಗೆ ಪರಿಹಾರ ನೀಡಿದ ನಂತರ ಭೂಮಿಯನ್ನು ಏರ್‍ಪೋರ್ಟ್ ಅಥಾರಿಟಿಗೆ ಹಸ್ತಾಂತರಿಸಲಾಗುವುದು ಎಂದು ಜಿಟಿಡಿ ನುಡಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಜಿ.ಟಿ. ದೇವೇಗೌಡರು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ತಮ್ಮ ಇಲಾಖೆ ಹಾಗೂ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಇದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.
ಮೊದಲ ದಿನದ ಪ್ರಯಾಣಿಕರಾದ ಮಧು ಹಾಗೂ ಗೌತಮ್, ತಾವು ಮುಂಬೈ ಮತ್ತು ೀಗಿ ಅಲ್ಲಿಂದ ಬೇರೆ ವಿಮಾನ ಹಿಡಿಯಬೇಕಾಗಿತ್ತು. ಮೈಸೂರಿನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೋಗುವ ಸಾರಿಗೆ ವೆಚ್ಚ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ನೇರ ವಿಮಾನ ಇರುವುದರಿಂದ ನಮಗೆ ತುಂಬಾ ಅನುಕೂಲವಾಗಿದೆ ಎಂದರು.

Translate »