ಮೈಸೂರು-ಬೆಂಗಳೂರುಹೊಸ ವಿಮಾನ ಹಾರಾಟ
ಮೈಸೂರು

ಮೈಸೂರು-ಬೆಂಗಳೂರುಹೊಸ ವಿಮಾನ ಹಾರಾಟ

June 8, 2019

ಮೈಸೂರು: ಬಹು ನಿರೀಕ್ಷಿತ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭವಾಯಿತು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಪ್ರಯಾಣಿಕ ರಿಗೆ ಶುಭ ಕೋರುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋಧ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ಸಂಸದ ಪ್ರತಾಪ್‍ಸಿಂಹ ಅವರು ಏರ್ ಅಲಯನ್ಸ್ ಸಂಸ್ಥೆಯ ಎಟಿಆರ್. 72 ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣ ದಿಂದ ಪ್ರಾದೇಶಿಕ ಸಂಪರ್ಕ ಸೇವೆಗೆ ಅನು ಮೋದನೆ ನೀಡಿದ್ದ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರು-ವಿಜಯವಾಡ- ವೈಜಾಕ್ ನಗರಗಳ ನಡುವೆ ವಿಮಾನ ಹಾರಾಟ ವನ್ನು ಏರ್ ಅಲಯನ್ಸ್ ಆರಂಭಿಸಿದೆ. ಮಂಗಳವಾರ ಮತ್ತು ಗುರುವಾರ ಹೊರತುಪಡಿಸಿ ವಾರದ 5 ದಿನ ಈ ಎಟಿಆರ್-72(72 ಆಸನ ಸಾಮಥ್ರ್ಯ) ವಿಮಾನದ ಸೇವೆ ಲಭ್ಯವಿದೆ. ಅಪರಾಹ್ನ 12 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.55 ಗಂಟೆಗೆ ಬೆಂಗಳೂರು ತಲುಪುವ ವಿಮಾನವು ಮುಂದೆ ವಿಜಯವಾಡ, ನಂತರ ವೈಜಾಕ್‍ಗೆ ತೆರಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 10.30 ಗಂಟೆಗೆ ಹಾರಾಟ ಆರಂಭಿಸಿ ಮೈಸೂರಿಗೆ ಬೆಳಿಗ್ಗೆ 11-25ಗಂಟೆಗೆ ಆಗಮಿಸಲಿದೆ. ಮೈಸೂರು-ಬೆಂಗಳೂರು ನಡುವೆ 1500 ರೂ. ಪ್ರಯಾಣ ದರವಿದ್ದು, ಇನಾಗುರೇಷನ್ ಪ್ರಯುಕ್ತ ಇಂದು ಮೊದಲ ಟ್ರಿಪ್‍ನಲ್ಲಿ ಪ್ರಯಾಣಿಸುವವರಿಗಾಗಿ ವಿಶೇಷ ದರ 1365 ರೂ. ನಿಗದಿಗೊಳಿಸಲಾಗಿತ್ತು.

ಮೊದಲ ದಿನವಾದ ಇಂದು ಬೆಂಗಳೂರಿನಿಂದ 42 ಪ್ರಯಾಣಿಕರು ಆಗಮಿಸಿದರು. ಮೈಸೂರಿನಿಂದ ಶಾಸಕ ಎಸ್.ಎ.ರಾಮದಾಸ್, ಅವರ ಸಹೋದರ ರಾದ ಶ್ರೀಕಾಂತ್‍ದಾಸ್ ಸೇರಿದಂತೆ 33 ಮಂದಿ ಪ್ರಯಾಣಿಸಿದರು. ವಿಮಾನ ಹಾರಾಟದ ಉದ್ಘಾ ಟನೆ ವೇಳೆ ಸಚಿವರು, ಸಂಸದರ ಜೊತೆ ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್‍ಸಿಂಗ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಮಾಜಿ ಆಯುಕ್ತ ಪಿ.ಸಿ.ಜಯಣ್ಣ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪನಾಗ್, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ, ಏರ್ ಅಲಯನ್ಸ್ ಸಂಸ್ಥೆಯ ಮನು ಆನಂದ ಉಪಸ್ಥಿತರಿದ್ದರು.

ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ಟ್ರಾವೆಲ್ ಅಸೋಸಿ ಯೇಷನ್, ಸಿಐಐಎಲ್, ಮೈಸೂರು ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಮೈಸೂರು ಕೈಗಾರಿಕೆಗಳ ಸಂಘ, ಟಿವಿಎಸ್ ಕಾರ್ಖಾನೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕೈಗಾರಿಕೆಗಳ ಪ್ರಮುಖರು ವಿಮಾನ ಹಾರಾಟ ಉದ್ಘಾಟನೆ ವೇಳೆ ಮೈಸೂರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.

ಬೆಂಗಳೂರಿನಿಂದ ಈ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಏರ್ ಅಲಯನ್ಸ್ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಗುಲಾಬಿ ಹಾಗೂ ಸಿಹಿ ನೀಡುವ ಮೂಲಕ ಮೈಸೂರಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಯಾಣಿಕರನ್ನು ಮೆಟಲ್ ಡೋರ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಲಾಯಿತು ಹಾಗೂ ಲಗೇಜುಗಳನ್ನು ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತಿದ್ದು ವಿಮಾನ ನಿಲ್ದಾಣದಲ್ಲಿ ಭಾರೀ ಕಟ್ಟೆಚ್ಚರ ವಹಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಘಾಟನಾ ಕಾರ್ಯಕ್ರಮದ ವೇಳೆ ಮಕ್ಕಳು ಸಾಂಪ್ರದಾಯಿಕ ಸಮೂಹ ನೃತ್ಯ ಪ್ರದರ್ಶನ ಮಾಡುವ ಮೂಲಕ ಗಣ್ಯರು ಹಾಗೂ ವಿಮಾನ ಪ್ರಯಾಣಿಕರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

 

Translate »