- ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಅಧಿಸೂಚನೆ
- ಅಗತ್ಯವಿರುವ 290 ಎಕರೆ ಭೂಮಿ ಸಮೀಕ್ಷಾ ವರದಿಗೆ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ
- `ಸಾಹಸ ಜೋಡಿ’ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್‍ಸಿಂಹ ಉತ್ಸಾಹ
ಮೈಸೂರು: ಮೈಸೂರು ವಿಮಾನ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ(ಎನ್‍ಎಚ್-212)ಗೆ ಅಂಡರ್‍ಪಾಸ್ ನಿರ್ಮಿಸಿ, ಅದರ ಮೇಲೆ ರನ್ ವೇ ವಿಸ್ತರಿಸುವ ಯೋಜನೆ ಜಾರಿಗೆ ಕಾಲ ಕೂಡಿ ಬಂದಂತಿದೆ.
ಯೋಜನೆಗೆ ಅಗತ್ಯವಾದ ಭೂಮಿಯನ್ನು ಗುರುತಿಸಿ, ಪೂರ್ಣ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ ಯೋಜನೆಗೆ ಯಾವುದೇ ಅಡ್ಡಿಯಾಗದಂತೆ ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಸ್ವಾಧೀನದಲ್ಲಿರುವ ಭೂಮಿ ಸೇರಿದಂತೆ ಸುಮಾರು 290 ಎಕರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ, ರೆವಿನ್ಯೂ ಹಾಗೂ ವಿಮಾನ ನಿಲ್ದಾಣ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲು ಶನಿವಾರ ಮೈಸೂರು ವಿಮಾನ ನಿಲ್ದಾಣ ಆವರಣ ದಲ್ಲಿ ನಡೆದ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಾಧ್ಯಮದವರೊಂದಿಗೆ ಮಾತನಾಡಿ, 438 ಎಕರೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಇನ್ನೂ 290 ಎಕರೆ ಭೂಮಿ ಅಗತ್ಯವಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ 2008ರಲ್ಲೇ 188 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, 78 ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.
ಇನ್ನೂ ಅಗತ್ಯವಾಗಿರುವ 26 ಎಕರೆ ಭೂಮಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕಿದೆ. ಯೋಜನೆಗೆ ಅಗತ್ಯವಾದ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಕಡೆಯಿಂದ ಒದಗಿಸಿಕೊಡಲು ರಾಜ್ಯ ಸರ್ಕಾರ ಸಿದ್ದವಿದೆ. ಯೋಜನೆಗೆ ಯಾವುದೇ ರೀತಿಯಲ್ಲಿ ತೊಡಕಾಗದಂತೆ ಸಮರ್ಪಕವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕಿರುವ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ, ವಿಮಾನ ನಿಲ್ದಾಣ ಹಾಗೂ ರೆವಿನ್ಯೂ ಅಧಿಕಾರಿಗಳು ಮತ್ತೆ ಜಂಟಿ ಸರ್ವೇ ನಡೆಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯನ್ನು ನಾಳೆ(ಜು.29)ಯಿಂದಲೇ ಆರಂಭಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಿದ್ದರಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿ, ಪ್ರಸ್ತುತ ಮಾರುಕಟ್ಟೆ ಬೆಲೆಯನ್ವಯ ದರ ನಿಗಧಿ ಮಾಡಿ ಪರಿಹಾರವನ್ನು ನೀಡಿದ ನಂತರ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಭೂಮಿಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಮೈಸೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಧಾನಿ ಮೋದಿ ಉತ್ಸುಕರಾಗಿದ್ದಾರೆ. ಸಂಸದ ಪ್ರತಾಪ್‍ಸಿಂಹ ಅವರು ರನ್ವೇ ವಿಸ್ತರಣೆ ಯೋಜನೆಗೆ ಆರಂಭದಿಂದಲೂ ಕೇಂದ್ರದ ಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಮೈಸೂರು-ಚೆನ್ನೈ ವಿಮಾನ ಹಾರಾಟಕ್ಕೂ ಇವರೇ ಕಾರಣೀಭೂತರು. ರನ್ ವೇ ವಿಸ್ತರಣೆಯಿಂದ ಎಲ್ಲಾ ವಿಮಾನಗಳೂ ಮೈಸೂರಿನ ಮೂಲಕ ಸಂಚರಿಸುವುದರಿಂದ ಕೈಗಾರಿಕೋದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಯಾಗಿ, ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುವುದರೊಂದಿಗೆ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಯೋಜನೆ ಸಂಬಂಧ ಆ.15ರೊಳಗೆ ಪ್ರಥಮ ಹಂತದ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ.20ರೊಳಗೆ ಮತ್ತೊಂದು ಸಭೆ ನಡೆಸಿ, ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವರದಿ ನೀಡಲಾಗುವುದು. ಮೈಸೂರು-ಬೆಂಗಳೂರು ನಡುವಿನ 10 ಪಥದ ಹೆದ್ದಾರಿ ಕಾಮಗಾರಿ ಸೆಪ್ಟೆಂಬರ್ ನಲ್ಲಿ ಆರಂಭಗೊಳ್ಳಲಿದ್ದು, ಇನ್ನೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಆಶಯದಂತೆ ಮೈಸೂರಿನ ಅಭಿವೃದ್ಧಿಗಾಗಿ ನಾನು ಹಾಗೂ ಪ್ರತಾಪ್‍ಸಿಂಹ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಜಿಟಿಡಿ ಹೇಳಿದರು.
ವಿಮಾನ ನಿಲ್ದಾಣ ಸಲಹಾ ಮಂಡಳಿ ಅಧ್ಯಕ್ಷರೂ ಆದ ಸಂಸದ ಪ್ರತಾಪ್‍ಸಿಂಹ ಮಾತನಾಡಿ, ರನ್ ವೇ ವಿಸ್ತರಣೆ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಒಂದು ಭಾಗದಲ್ಲಿ ರೈಲ್ವೇ ಹಳಿ, ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಾಗರಿಕ ಭದ್ರತಾ ವಿಭಾಗ ಅನುಮತಿ ನೀಡಿರಲಿಲ್ಲ. ಮೂರೂವರೆ ವರ್ಷಗಳ ನಿರಂತರ ಪ್ರಯತ್ನದಿಂದ ಪ್ರಧಾನಿ ಮೋದಿ ಸರ್ಕಾರದಲ್ಲಿ, ಹೈವೇ ಮೇಲೆ ರನ್‍ವೇ ನಿರ್ಮಿಸಲು ಅನುಮತಿ ದಕ್ಕಿದೆ. ಯೋಜನೆಗೆ ಬೇಕಾದ 280 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೇಂದ್ರಕ್ಕೆ ನೀಡಿದರೆ, ಪ್ರಾರಂಬಿಕ ಅಂದಾಜು 700 ಕೋಟಿ ರೂ.ಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಸಾವಿರ ಕೋಟಿ ರೂ. ತಲುಪಿದರೂ ಕೇಂದ್ರ ನೀಡಲಿದೆ. ಇದೀಗ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ವಿಶೇಷ ಆಸಕ್ತಿ ವಹಿಸಿದ್ದು, 300 ಎಕರೆ ಭೂಮಿ ಬೇಕಿದ್ದರೂ ಒದಗಿಸಲು ಸಿದ್ದ ಎಂದು ಭರವಸೆ ನೀಡುವುದರ ಜೊತೆಗೆ ಇನ್ನು 15 ದಿನಗಳಲ್ಲಿ ಅಗತ್ಯ ಭೂಮಿ ಗುರುತಿಸಿ, ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆಯೂ ನಿರ್ದೇಶನ ನೀಡಿದ್ದಾರೆ. ಇವರಿಗೆ ಕೇಂದ್ರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮೈಸೂರಿಗೆ ರೈಲ್ವೇ ಟರ್ಮಿನಲ್ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸುವ ಮುನ್ನವೇ ಪ್ರಧಾನಿ ಮೋದಿ ಅವರು, ಬಜೆಟ್‍ನಲ್ಲಿ ಸೇರ್ಪಡೆ ಮಾಡಿ ಅಗತ್ಯವಾದ 347 ಎಕರೆ ಭೂಸ್ವಾಧೀನಕ್ಕೆ ಮುಂಗಡವಾಗಿ 789 ಕೋಟಿ ರೂ. ಬಿಡುಗಡೆ ಮಾಡಿದ್ದಲ್ಲದೆ, 1 ಕೋಟಿ ರೂ.ಗಳನ್ನು ಪಿಂಕ್‍ಬುಕ್‍ನಲ್ಲಿ ಸಂದಾಯ ಮಾಡಿದ್ದಾರೆ. ಸದ್ಯ ಡಿಪಿಆರ್‌ಗೆ ಟೆಂಡರ್ ಕರೆಯಲಾಗುತ್ತಿದೆ.
ಗೂಡ್ಸ್ ಟರ್ಮಿನಲ್, ಮೈಸೂರು-ಬೆಂಗಳೂರು 10 ಪಥದ ಹೆದ್ದಾರಿ ನಿರ್ಮಾಣ, ಜೊತೆಗೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆಯೂ ಇನ್ನು ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೈಸೂರಿನ ಅಭಿವೃದ್ಧಿ ನಿಟ್ಟಿನಲ್ಲಿ ನಾವೆಲ್ಲಾ ಒಂದೇ ಮನಸ್ಸಿನಿಂದ ಕೈಜೋಡಿಸಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಮೈಸೂರು ವಿಮಾನ ನಿಲ್ದಾಣದ ಪ್ರಭಾರಿ ನಿರ್ದೇಶಕ ವೆಂಕಟಾಚಲಂ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಶ್ರೀಧರ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ವಿಶೇಷ ಭೂಸ್ವಾಧೀನ ಅಧಿಕಾರಿ ಅರುಣ್‍ಕುಮಾರ್, ಸಿಐಐಐ ಮಾಜಿ ಅಧ್ಯಕ್ಷ ಸಿ.ಮುತ್ತುಕುಮಾರ್, ರನ್ ವೇ ವಿಸ್ತರಣೆ ಯೋಜನೆ ಅಧಿಕಾರಿಗಳು, ಉದ್ಯಮಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.