ಸಿಎಂ ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ
ಚಾಮರಾಜನಗರ

ಸಿಎಂ ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ

November 20, 2018

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಬಗ್ಗೆ ಹಾಗೂ ರೈತ ಮಹಿಳೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಸಂತೇಮರಹಳ್ಳಿ ವೃತ್ತದ ಬಳಿ ಇರುವ ಅಂಚೆ ಕಚೇರಿ ಮುಂಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ರೈತರು ಜಮಾಯಿಸಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿಯ ಮಧ್ಯಭಾಗಕ್ಕೆ ತೆರಳಿ ಧರಣಿ ಕುಳಿತರು. ಸುಮಾರು ಅರ್ಧ ಗಂಟೆಗಳ ಕಾಲ ರೈತರು ರಸ್ತೆಯ ಮಧ್ಯ ಭಾಗದಲ್ಲಿ ಕುಳಿತಿದ್ದರಿಂದ ಈ ಮಾರ್ಗ ದಲ್ಲಿ ಸಂಚರಿಸುವವರಿಗೆ ತೊಂದರೆಯಾಯಿತು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಹಣ ಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಗೂಂಡಾಗಳೆಂದು ಹಾಗೂ ರೈತ ಮಹಿಳೆ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಕುಡಿದ ಮತ್ತಿನಲ್ಲಿ ರೈತರ ಬಗ್ಗೆ ಟೀಕಿಸಿದ್ದಾರೆ ಎಂದು ಪ್ರತಿಭಟನಾನಿರತ ರೈತರು ದೂರಿದರು. ಮುಖ್ಯಮಂತ್ರಿಗಳು ಈ ಕೂಡಲೇ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಕಾರ್ಯ ದರ್ಶಿ ಡಾ. ಗುರುಪ್ರಸಾದ್ ಮಾತನಾಡಿ, ರೈತರು ಹಾಗೂ ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಲಘುವಾಗಿ ಮಾತನಾಡಿದ್ದಾರೆ. ಈ ಮೂಲಕ ಮುಖ್ಯ ಮಂತ್ರಿಗಳು ರೈತ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ರೈತರನ್ನು ಗೂಂಡಾ ಗಳು ಎಂದು ಕರೆದಿರುವ ಮುಖ್ಯಮಂತ್ರಿಗಳು, ಗೂಂಡಾಗಳಿಗಿಂತ ಇನ್ನೂ ಕಡೆ. ಅವರೊಬ್ಬ ನಾಲಾಯಕ್ ಮುಖ್ಯಮಂತ್ರಿ ಎಂದು ಜರಿದರು.

ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ, ರೈತರ ಸಾಲವನ್ನು ಮನ್ನಾ ಮಾಡದೆ ಮಾತಿಗೆ ತಪ್ಪಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಹಿಳೆಯರ ಚಪ್ಪಲಿ ಮತ್ತು ಮದ್ಯದ ಖಾಲಿ ಬಾಟಲುಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಿ ಕೊಡುತ್ತಿರುವುದಾಗಿ ಅವರು ಹೇಳಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಡ್ರಹಳ್ಳಿ ಮಹದೇವಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊನ್ನೂರು ಬಸವಣ್ಣ, ಮುಖಂಡರಾದ ಮಾಲಂಗಿ ರೇಚಣ್ಣ, ಲಿಂಗಸ್ವಾಮಿ, ಹಾಲಹಳ್ಳಿ ಮಹೇಶ್, ಅಂಬಳೆ ಶಿವಕುಮಾರ್, ಪ್ರಸಾದ್, ಕುಮಾರ ಸ್ವಾಮಿ, ಪೃಥ್ವಿ, ಶಿವು, ಮೇಲಾಜಿಪುರ ಶಿವ ಕುಮಾರ್ ಸೇರಿದಂತೆ ಇನ್ನಿತರ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »