ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ
ಮಂಡ್ಯ

ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ

December 14, 2019

ಮಂಡ್ಯ, ಡಿ.13(ನಾಗಯ್ಯ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ರೈತರು ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದರು. ಶ್ರೀರಂಗ ಪಟ್ಟಣ ದಲ್ಲಿ ಕೀಟಬಾಧೆ ತಡೆಗೆ ಆಗ್ರಹಿಸಿ ಮತ್ತು ಮದ್ದೂರಿನ ಗೊರವನಹಳ್ಳಿಯಲ್ಲಿ ಹೈ ಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ವಿರೋಧಿಸಿ ಹಾಗೂ ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮೀನಿಗೆ ಬಾಡಿಗೆ ನೀಡದ ರಸ್ತೆ ನಿರ್ಮಾಣ ಕಂಪನಿ ವಿರುದ್ಧ ಕುದುರುಗುಂಡಿ ಗ್ರಾಮದಲ್ಲಿ ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಕೀಟಬಾಧೆ ತಡೆಗೆ ಆಗ್ರಹ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ತೆಂಗು, ಅಡಿಕೆ ಇತರ ತೋಟಗಾರಿಕೆ ಬೆಳೆಗಳಿಗೆ ಕೀಟಬಾಧೆ ಕಾಣಿಸಿಕೊಂಡು ವರ್ಷ ಕಳೆದರೂ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಯಾವುದೇ ಮಾರ್ಗದರ್ಶನ ನೀಡು ತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ತೋಟ ಗಾರಿಕಾ ಇಲಾಖೆ ಕಚೇರಿ ಎದುರು ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ರೈತರ ಸಮಸ್ಯೆಗೆ ಸ್ಪಂದಿಸದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಮಾತನಾಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ರೈತರಿಗೆ ಸಿಗದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ತೋಟಗಾರಿಕೆ ಇಲಾಖೆ ಇದ್ದೂ ಇಲ್ಲದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೆಂಗು ಬೆಳೆಗೆ ಬಿಳಿ ಉಣ್ಣೆ ಬಾಧೆ ಕಾಣಿಸಿಕೊಂಡಿದ್ದು ರಸ ಹೀರುತ್ತಿವೆ. ತೆಂಗಿನ ಹರಳು ಉದುರುತ್ತಿವೆ. ಅಡಿಕೆ ಬೆಳೆಗೆ ಕೊಳೆ ಮತ್ತು ಉಣ್ಣೆ ರೋಗ ಅಂಟಿದೆ. ತರಕಾರಿ ಬೆಳೆಗೆ ಎಷ್ಟೇ ಕೀಟನಾಶಕ ಸಿಂಪಡಿಸಿದರೂ ರೋಗಗಳು ಹತೋಟಿಗೆ ಬರುತ್ತಿಲ್ಲ. ರೈತರು ಸಮಸ್ಯೆ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶ್ರೀಧರ್, ತೆಂಗು ಬೆಳೆಯಲ್ಲಿ ಕಾಣಿಸಿಕೊಂಡಿ ರುವ ಬಿಳಿ ಉಣ್ಣೆ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ರೈತ ಸಂಘದ ಕಾರ್ಯದರ್ಶಿ ಶಂಕರೇಗೌಡ, ಕೃಷಿಕ ಸಮಾಜದ ನಿರ್ದೇಶಕ ಬಾಲಕೃಷ್ಣ, ಟಿ.ಎಂ.ದೇವೇಗೌಡ, ಜಯರಾಮೇಗೌಡ, ಶರತ್ ಕುಮಾರ್, ಸ್ವಾಮಿಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಿಲೀಪ್ ಕಂಪನಿ ವಿರುದ್ಧ ಪ್ರತಿಭಟನೆ: ಯಂತ್ರೋಪಕರಣ ಸೇರಿದಂತೆ ವಿವಿಧ ರೀತಿಯ ಉಪಕರಣ ದಾಸ್ತಾನು ಮಾಡಲು ಅಕ್ರಮವಾಗಿ ವಶಪಡಿಸಿಕೊಂಡಿರುವ ತಮ್ಮ ಜಮೀನಿಗೆ ಬಾಡಿಗೆ ನೀಡದ ಕಂಪನಿ ವಿರುದ್ಧ ಮದ್ದೂರು ತಾಲೂಕಿನ ಕುದರಗುಂಡಿ ಹಾಗೂ ಉಪ್ಪಿನಕೆರೆಯ ಗೇಟ್‍ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾಮಗಾರಿ ಕೈಗೊಂಡಿರುವ ದಿಲೀಪ್ ಎಂಬ ಹೆದ್ದಾರಿ ನಿರ್ಮಾಣ ಖಾಸಗಿ ಕಂಪನಿ ವಿರುದ್ಧ ರೈತರು, ದಲಿತ, ಪ್ರಗತಿಪರ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಮರಳಿಗ ಶಿವರಾಜು ಮಾತನಾಡಿ, ತಾಲೂಕಿನ ಕುದರಗುಂಡಿ ಹಾಗೂ ಉಪ್ಪಿನಕೆರೆ ಗೇಟ್ ಸಮೀಪ ಖಾಸಗಿ ಕಂಪನಿಯೊಂದು ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡುವ ಸಂಬಂಧ ಸಲಕರಣೆಗಳನ್ನು ಹಾಕಲು ರೈತರ ಗಮನಕ್ಕೆ ತರದೆ ಜಮೀನನ್ನು ವಶಪಡಿಸಿ ಕೊಂಡಿದೆ ಎಂದು ಆರೋಪಿಸಿದರು.

ಕುದರಗುಂಡಿ ಸರ್ವೇ ನಂಬರ್ 245/13 ರಲ್ಲಿ ದಲಿತ ಮುಖಂಡ ವೆಂಕಟಚಲಯ್ಯ ಅವರ 2 ಎಕರೆ ಜಮೀನನ್ನು ದಿಲೀಪ್ ಖಾಸಗಿ ಕಂಪನಿ ವಶಪಡಿಸಿಕೊಂಡಿದ್ದು, ಹೆದ್ದಾರಿ ನಿರ್ಮಾಣಕ್ಕೆ ಯಂತ್ರೋಪಕರಣಗಳನ್ನು ಹಾಕಿಕೊಂಡಿದೆ. ಈ ಬಗ್ಗೆ ಜಮೀನಿನ ಮಾಲೀಕನಿಗೆ ಯಾವುದೇ ಗಮನಕ್ಕೆ ತಂದಿಲ್ಲ ಮತ್ತು ಜಮೀನಿನಲ್ಲಿದ್ದ ಮರಗಳನ್ನು ಕಡಿದು ತೆರವು ಮಾಡಿ ದ್ದಾರೆ ಮತ್ತು ಜಮೀನನ್ನು ಹಳ್ಳ ಮಾಡಿ ಯಾವುದೇ ಬೆಳೆಗಳನ್ನು ಬೆಳೆಯಲು ಆಗದಂತೆ ಮಾಡಿದ್ದಾರೆ. ಅಲ್ಲದೆ ಜಮೀನು ಮಾಲೀಕರಿಗೆ 2 ವರ್ಷದಿಂದ ಯಾವುದೇ ನೆಲ ಬಾಡಿಗೆ ನೀಡಿಲ್ಲ ಮತ್ತು ಇತರೆ ರೈತರಿಗೂ ಸಹ ಒಂದು ವರ್ಷದಿಂದ ನೆಲ ಬಾಡಿಗೆ ನೀಡಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಖಾಸಗಿ ಕಂಪನಿಯವರು ಆಗಮಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಶಪಡಿಸಿಕೊಂಡಿರುವ ಜಮೀನಿನ ರೈತರಿಗೆ ಸಮರ್ಪಕವಾಗಿ ನೆಲ ಬಾಡಿಗೆ ನೀಡಬೇಕು. ಇಲ್ಲ ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಮಹೇಶ್ ಸೂಕ್ತ ನೆಲ ಬಾಡಿಗೆ ನೀಡುವಂತೆ ಹಲವಾರು ಬಾರಿ ಮನವಿ ಮಾಡಿ ದ್ದರು ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಂಪನಿಯ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಯಲ್ಲಿ ಜಮೀನಿನ ಮಾಲೀಕ ವೆಂಕಟಚಲಯ್ಯ, ಮುಖಂಡರಾದ ಆತ್ಮಾನಂದ, ಮರಿದೇವರು, ಸ್ವಾಮಿ, ಭಾನುಪ್ರಕಾಶ್, ಶ್ರೀಕಂಠ, ರಮಾನಂದ್, ಪುಟ್ಟರಾಮು, ಅಂಬರೀಶ್, ರವಿಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವಿದ್ಯುತ್ ಕಂಬ ಅಳವಡಿಕೆಗೆ ವಿರೋಧ
ರೈತರ ಜಮೀನಿನಲ್ಲಿ ವಿದ್ಯುತ್ ಹೈ ಟೆನ್ಷನ್ ಕಂಬಗಳನ್ನು ಅಳವಡಿಸಲು ಮುಂದಾದ ಕೆಪಿಟಿಸಿಎಲ್ ಅಧಿಕಾರಿಗಳಿಗೆ ರೈತರು ಘೇರಾವ್ ಹಾಕಿದ ಘಟನೆ ಮದ್ದೂರು ತಾಲೂ ಕಿನ ಗೊರವನಹಳ್ಳಿಯಲ್ಲಿ ನಡೆಯಿತು.

ಜಮೀನಿನಲ್ಲಿ ಕಾಮಗಾರಿ ನಡೆಸಲು ಬಂದಿದ್ದ ಅಧಿಕಾರಿ ಗಳನ್ನು ತಡೆದ ಅಪ್ಪಾಜಿಗೌಡ, ಮಹದೇವಯ್ಯ, ರಾಜು, ಗೀತಾ ಸೇರಿದಂತೆ ಹಲವು ರೈತರು, ಹೈ ಟೆನ್ಷನ್ ಕಂಬ ಅಳವಡಿಕೆ ಬಗ್ಗೆ ನಮಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ. ಇದಕ್ಕಿಂತ ಹೆಚ್ಚಾಗಿ ನಿಯಮಾನು ಸಾರ ನಮ್ಮ ಯಾವುದೇ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ರೈತರ ಭೂ ಸ್ವಾಧೀನ ಪಡಿಸಿ ಕೊಳ್ಳಲಾದ ಭೂಮಿಗೆ ಯಾವುದೇ ಬಿಡಿಗಾಸಿನ ಪರಿಹಾರ ನೀಡಿಲ್ಲ. ಅಲ್ಲದೆ ಭೂ ಮಾಲೀಕರ ಅನುಮತಿ ಪಡೆದಿಲ್ಲ. ಹೀಗಿದ್ದರೂ ಏಕಾಏಕಿ ಪೊಲೀಸರ ಸಹಾಯದಿಂದ ವಿದ್ಯುತ್ ಕಂಬ ಅಳವಡಿಕೆಗೆ ಮುಂದಾಗಿದ್ದಾರೆ. ಇದನ್ನು ಅಡ್ಡಿಪಡಿಸಲು ಹೋದ ರೈತರ ಮೇಲೆ ದಬ್ಬಾಳಿಕೆ ಮಾಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಅಭಿವೃದ್ಧಿಗೆ ಅನುಸರಿಸುವ ಮಾನದಂಡದಂತೆ ರೈತರ ಜಮೀನು ಪ್ರಸ್ತುತ ಗುಂಟೆಗೆ ಮಾರುಕಟ್ಟೆ ದರ 5ರಿಂದ 6 ಲಕ್ಷ ರೂ. ಇದೆ. ಆದರೆ ಇದೀಗ ಅಧಿಕಾರಿಗಳು ರೈತರಿಗೆ ಕೇವಲ 5ರಿಂದ 6 ಸಾವಿರ ನೀಡಲು ಮುಂದಾಗಿದ್ದಾರೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಜಮೀನಿಗೆ ಸೂಕ್ತ ಪರಿಹಾರ ನೀಡಿದ್ದಲ್ಲಿ, ಕಾಮಗಾರಿಗೆ ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ನಮ್ಮ ಜೀವ ಹೋದರೂ ಕಾಮಗಾರಿ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಜಮೀನಿನ ಮಾಲೀಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಶಾಸಕರ, ಸಂಬಂಧ ಪಟ್ಟ ಅಧಿಕಾರಿಗಳ ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ಸೂಕ್ತ ಪರಿಹಾರ ತೀರ್ಮಾನಿಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ರೈತರು ಪಟ್ಟು ಹಿಡಿದರು.

ತಹಸೀಲ್ದಾರ್ ನಾಗೇಶ್ ಮಾತನಾಡಿ, ಜಮೀನಿಗೆ ಪರಿಹಾರ ತುಂಬಾ ಕಡಿಮೆ ನೀಡಲಾಗುತ್ತಿದೆ ಎಂದು ರೈತರು ತಿಳಿಸು ತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗು ವುದು ಎಂದು ಭರವಸೆ ನೀಡಿದರು. ತಾತ್ಕಾಲಿಕವಾಗಿ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

Translate »