ರೈತರು ರಾಜಕೀಯ ಶಕ್ತಿಯಾಗಬೇಕು
ಕೊಡಗು

ರೈತರು ರಾಜಕೀಯ ಶಕ್ತಿಯಾಗಬೇಕು

March 20, 2019

ಗೋಣಿಕೊಪ್ಪಲು: ರೈತ ಸಂಘದ ಮೂಲಕ ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಹೋಬಳಿ ಮಟ್ಟದ ರೈತ ಸಂಘಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಮತದಾನದ ಮೂಲಕ ರಾಜಕೀಯ ಪಕ್ಷಗಳಿಗೆ ರೈತ ಸಂಘದಿಂದ ಉತ್ತರ ಕೊಡುವ ಅನಿವಾರ್ಯತೆ ಇದೆ. ನಮ್ಮ ಸಮಸ್ಯೆಗಳ ಪರಿ ಹಾರಕ್ಕೆ ನಾವು ಒಂದು ಶಕ್ತಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನ ಗಳಲ್ಲಿ ಪಂಚಾಯ್ತಿ ಮಟ್ಟದಿಂದ ರೈತ ಸಂಘ ಸದೃಢವಾಗಿ ಬೆಳೆಸಲು ಚಿಂತನೆ ನಡೆಸಲಾಗಿದೆ. ರೈತರ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯುವಲ್ಲಿ ವಿಫಲವಾಗಿ ದ್ದೇವೆ. ಈ ನಿಟ್ಟಿನಲ್ಲಿ ರಾಜಕೀಯವಾಗಿಯೂ ಅಧಿಕಾರ ಹಿಡಿಯಬೇಕಾಗಿದೆ ಎಂದರು.

ಕೊಡಗು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ರೈತ ಸಂಘ ಅಸ್ಥಿತ್ವಕ್ಕೆ ಬಂದ ನಂತರ ಅನೇಕ ಹೋರಾ ಟಗಳನ್ನು ನಡೆಸುವ ಮೂಲಕ ನ್ಯಾಯ ಪಡೆದಿದ್ದೇವೆ. ರಾಜಕೀಯ ರಹಿತ ಹೋರಾಟಕ್ಕೆ ಜಿಲ್ಲೆಯಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿವೆ. ಚಳವಳಿ ಗಟ್ಟಿಗೊಳ್ಳಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಮಣೆ ಹಾಕದೆ ರೈತರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮೈಸೂರು ಭಾಗದ ರೈತ ಮುಖಂಡ ಅಶ್ವತ್‍ನಾರಾಯಣ ಅರಸ್ ಮಾತ ನಾಡಿ, ಸ್ಥಳೀಯ ಸಮಸ್ಯೆಗಳನ್ನು ಹೋರಾಟದ ಮೂಲಕ ಮಾತ್ರ ಬಗೆಹರಿಸಿ ಕೊಂಡರೆ ಸಾಲದು. ರೈತರಿಗೆ ತೊಡಕಾಗಿರುವ ಕರಿಮೆಣಸು ಬೆಂಬಲ ಬೆಲೆಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದರು.

ಮುಖಂಡರಾದ ಹೊಸಕೋಟೆ ಬಸವರಾಜು, ಕಳ್ಳೆಂಗಡ ಸುರೇಂದ್ರ, ಚೆಪ್ಪುಡೀರ ಕಾರ್ಯಪ್ಪ, ಶ್ರೀರಂಗಪ್ಪ, ಲೋಕರಾಜೇ ಅರಸ್, ರವಿಕಿರಣ್, ಹೊಸೂರು ಕುಮಾರ್ ಮಾತನಾಡಿದರು.

ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟೀರ ಸಬಿತ, ಅಲೇಮಾಡ ಮಂಜುನಾಥ್, ಭವಿಕುಮಾರ್, ಮಂಡೇಪಂಡ ಪ್ರವೀಣ್ ಉಪಸ್ಥಿತರಿದ್ದರು. ಗ್ರಾಮೀಣ ಭಾಗವಾದ ಹುದಿಕೇರಿ, ಹೈಸೊಡ್ಲೂರು, ಕಿರುಗೂರು, ನಲ್ಲೂರು, ಭಾಗದಿಂದ ನೂರಾರು ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು.

ಸೇರ್ಪಡೆಗೊಂಡ ಸದಸ್ಯರಿಗೆ ಹೊಸಕೋಟೆ ಬಸವರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿ ಕತ್ತಿ ನೀಡುವ ಮೂಲಕ ಗೌರವಿಸಲಾಯಿತು.

Translate »