ಎಂಡಿಇಎಸ್ ಮಾಜಿ ಕಾರ್ಯದರ್ಶಿ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ ಇನ್ನಿಲ್ಲ
ಮೈಸೂರು

ಎಂಡಿಇಎಸ್ ಮಾಜಿ ಕಾರ್ಯದರ್ಶಿ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ ಇನ್ನಿಲ್ಲ

November 29, 2019

ಮೈಸೂರು,ನ.28(ಆರ್‍ಕೆ)-ರೆವರೆಂಡ್ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ (75) ಅವರು ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರ ಪಾರ್ಥಿವ ಶರೀರವನ್ನು ಬನ್ನಿ ಮಂಟಪದ ಎಲ್‍ಐಸಿ ಸರ್ಕಲ್‍ನಲ್ಲಿರುವ ಸೆಂಟ್ ಮೇರಿಸ್ ಮೈನರ್ ಸೆಮಿನರಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾ ಗಿದ್ದು, ನಾಳೆ(ನ.29) ಬೆಳಿಗ್ಗೆ 8 ಗಂಟೆಗೆ ಸೆಂಟ್ ಜೋಸೆಫ್ ಕ್ಯಾಥೆಡ್ರಲ್‍ಗೆ ಸ್ಥಳಾಂ ತರಿಸಿ ಅಂತಿಮ ಧಾರ್ಮಿಕ ವಿಧಿವಿಧಾನ ಗಳ ನಂತರ ಬೆಳಿಗ್ಗೆ 10.30 ಗಂಟೆಗೆ ಗಾಂಧಿ ನಗರದ ಕ್ಯಾಥೋಲಿಕ್ ಸೆಮೆಟರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೈಸೂರು ಡಯಾಸಿಸ್ ಎಜುಕೇಷನ್ ಸೊಸೈಟಿ(ಎಂಡಿಇಎಸ್) ಮಾಜಿ ಕಾರ್ಯ ದರ್ಶಿಯಾದ ಫಾದರ್ ಕೊಲಾಸೋ ಅವರು 1944ರ ಡಿಸೆಂಬರ್ 13ರಂದು ಚಿಕ್ಕಮಗ ಳೂರಿನ ಹಿರೆಬಿಲೆಯಲ್ಲಿ ಜನಿಸಿದ್ದರು. ಸೆಂಟ್ ಫಿಲೋಮಿನಾ ಹೈಸ್ಕೂಲ್‍ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ಸೆಂಟ್ ಮೇರಿಸ್ ಮೈನರ್ ಸೆಮಿನರಿಗೆ ಸೇರಿದ್ದ ಅವರು, ಬೆಂಗಳೂರಿನ ಸೆಂಟ್ ಪೀಟರ್ಸ್ ಸೆಮಿನರಿ ಯಲ್ಲಿ ಪ್ರೀಸ್ಲ್ಟಿ ಫಾರ್ಮೇಷನ್ ಮುಗಿಸಿದ ನಂತರ 1972ರ ಜನವರಿ 2ರಂದು ಮೈಸೂರು ಡಯಾಸೆಸ್ ಪಾದ್ರಿಯಾಗಿ ಜವಾಬ್ದಾರಿ ವಹಿಸಿಕೊಂಡರು.

ಸೆಂಟ್ ಜೋಸೆಫ್ ಕ್ಯಾಥೆಡ್ರಲ್‍ನಲ್ಲಿ ಅಸಿಸ್ಟೆಂಟ್ ಪ್ರೀಸ್ಟ್ ಆಗಿ, ನಾಗವಲ್ಲಿ, ಮಡಿ ಕೇರಿ, ಮಂಡ್ಯ, ಮಾರ್ತಳ್ಳಿಯಲ್ಲಿ ಪ್ಯಾರಿಸ್ ಪ್ರೀಸ್ಟ್ ಆಗಿ 2003ರವರೆಗೆ ಸೇವೆ ಸಲ್ಲಿಸಿದ ಫಾದರ್ ಕೊಲಾಸೋ ಅವರು, 2003ರ ಅಕ್ಟೋಬರ್ 24ರಂದು ಮೈಸೂರು ಡಯಾ ಸನ್ ಎಜುಕೇಷನ್ ಸೊಸೈಟಿ(ಎಂಡಿ ಇಎಸ್) ಕಾರ್ಯದರ್ಶಿಯಾಗಿ ಮತ್ತು ಜಯಲಕ್ಷ್ಮಿಪುರಂನ ಸೆಂಟ್ ಜೋಸೆಫ್ ಚರ್ಚ್ ಧರ್ಮಗುರುವಾಗಿ ಅಧಿಕಾರ ವಹಿಸಿಕೊಂಡಿದ್ದರು.

ಎಂಡಿಇಎಸ್ ಕಾರ್ಯದರ್ಶಿಯಾಗಿ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಆಹಾರ, ಶಿಕ್ಷಣ ಒದಗಿಸುವಲ್ಲಿ ಹಾಗೂ ಹಲವು ಗ್ರಾಮೀಣ ಸಂಸ್ಥೆಗೆ ಆರ್ಥಿಕ ನೆರವು ನೀಡುವಲ್ಲಿ ಶ್ರಮಿಸಿದ್ದ ಅವರು, ಜಯಲಕ್ಷ್ಮಿಪುರಂನಲ್ಲಿ ಸೆಂಟ್ ಜೋಸೆಫ್ ಪಿಯು ಕಾಲೇಜು ಮತ್ತು ಇಲವಾಲದಲ್ಲಿ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಆರಂಭಿಸಿದ್ದರು.

ನಂತರ ಕುಟ್ಟದ ನಿರ್ಮಲಮಾತೆ ಚರ್ಚ್‍ನ ಧರ್ಮಗುರುವಾಗಿ, ಹಿನಕಲ್‍ನ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ವಾಗಿಯೂ ಸೇವೆ ಸಲ್ಲಿಸಿದ್ದ ರೆವರೆಂಡ್ ಫಾ. ಮ್ಯಾಥ್ಯೂ ಕೊಲಾಸೋ ಅವರು, ನಂತರ ಸ್ವಯಂ ನಿವೃತ್ತಿ ಪಡೆದು ಬನ್ನಿಮಂಟಪದ ಪ್ರಶಾಂತ ನಿಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ನವೆಂಬರ್ 27ರಂದು ಅಪೊಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಆಂಜಿ ಯೋಗ್ರಾಂ ಮತ್ತು ಆಂಜಿಯೋ ಪ್ಲಾಸ್ಟಿ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಿಗ್ಗೆ 7.40 ಗಂಟೆ ವೇಳೆಗೆ ಅವರು ಕೊನೆಯುಸಿರೆಳೆದರು.

ರೆವರೆಂಡ್ ಫಾದರ್ ರಫೇಲ್ ಎಂ. ಕೊಲಾಸೋ ಅವರು ಇಬ್ಬರು ಸಹೋ ದರರು, ಇಬ್ಬರು ಸಹೋದರಿಯರು ಹಾಗೂ ಅಸಂಖ್ಯಾತ ಬಂಧುಗಳನ್ನು ಅಗಲಿದ್ದಾರೆ. ಮೈಸೂರು ಬಿಷಪ್ ರೆ.ಫಾ.ಡಾ.ಕೆ.ಎ. ವಿಲಿಯಂ, ನಿವೃತ್ತ ಬಿಷಪ್ ರೆ.ಡಾ. ಥಾಮಸ್ ಆಂಟನಿ ವಾಜಪಿಳ್ಳೈ ಹಾಗೂ ಡಯಾಸೆಸ್ ಆಫ್ ಮೈಸೂರ್‍ನ ಧರ್ಮ ಗುರುಗಳು, ಫಾದರ್ ಕೊಲಾಸೋ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Translate »