ನವದೆಹಲಿ: ಇಂದು ಲೋಕಸಭೆಯಲ್ಲಿ ರಫೇಲ್ ಒಪ್ಪಂದದ ಕುರಿತಾಗಿ ಚರ್ಚೆ ನಡೆಯಿತು. ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೊಸ ವರ್ಷದಂದು ಪ್ರಧಾನಿ ಮೋದಿಯವರು ನೀಡಿದ ಸಂದರ್ಶನ ಸ್ಕ್ರಿಪ್ಟ್ ಸಂದರ್ಶನ ವಾಗಿದ್ದು, ಅಲ್ಲಿ ರಫೇಲ್ ವಿಚಾರವಾಗಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಿಲ್ಲ. ಲೋಕಸಭೆಯಲ್ಲಿ ನಮ್ಮನ್ನು ಎದುರಿಸುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಮನೆಯ ಕೋಣೆಯೊಂದರಲ್ಲಿ ಅವಿತುಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಂದು ಲೋಕಸಭೆಯಲ್ಲಿಯೂ ಪ್ರಧಾನಿಗಳು ಭಾಗಿಯಾಗಿ ರಲಿಲ್ಲ. ಇತ್ತ ರಾಹುಲ್ ಗಾಂಧಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷ ನಾಯಕರು ಕಾಗದದಿಂದ ಮಾಡಿದ ವಿಮಾನಗಳು ಬಿಜೆಪಿಯತ್ತ ಹಾರಿಸುವ ಮೂಲಕ ಆಕ್ರೋಶ ಹೊರಹಾಕಿದರು. ಕಾಗದದ ವಿಮಾನ ಹಾರಿಸಿದ್ದ ರಿಂದ ಗರಂ ಆದ ಸ್ಪೀಕರ್ ಸುಮಿತ್ರಾ ಮಹಾಜನ್, ಚಿಕ್ಕವರಿದ್ದಾಗ ನೀವು ವಿಮಾನ ಹಾರಿಸಿಲ್ವಾ? ಈ ರೀತಿ ಮಾಡಕೂಡದು ಎಂದು ಎಚ್ಚರಿಕೆ ನೀಡಿದರು.
ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ರಫೇಲ್ ಒಪ್ಪಂದದ ಮೊತ್ತ ಯುಪಿಎ ಸರ್ಕಾರಕ್ಕಿಂತ ಕಡಿಮೆ ಇದೆ. ಈಗಾಗಲೇ ಆಗಸ್ಟ್ ವೆಸ್ಟಲ್ಯಾಂಡ್ ಹಗರಣದಲ್ಲಿ ನಿಮ್ಮ ಬಣ್ಣ ಬಯಲಾಗಿದೆ ಎಂದು ತಿರುಗೇಟು ನೀಡಿದರು. ಸರ್ಕಾರದ ಆಡಳಿತದ ಮೇಲೆ ಪ್ರಶ್ನೆ ಮಾಡೋದು ನನ್ನ ಕೆಲಸ. ಮೋದಿಯವರು ಸುಮಾರು ಒಂದೂವರೆ ಗಂಟೆಗಳ ಕಾಲದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮಾತಾಡಿದ್ದಾರೆ. ಎಲ್ಲಿಯೂ ರಫೇಲ್ ವಿಚಾರವಾಗಿ ಪ್ರಶ್ನೆ ಗಳನ್ನು ಕೇಳಲಿಲ್ಲ. ಇಡೀ ದೇಶವೇ ರಫೇಲ್ ಬಗ್ಗೆ ಪ್ರಶ್ನೆ ಕೇಳುತ್ತಿದೆ. ಇದೂವರೆಗೂ ಮಾತ್ರ ಪ್ರಧಾನಿಗಳು ಉತ್ತರ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.