ಗುಡುಗಿನ ಶಬ್ಧಕ್ಕೆ ಕಾಲೂರಿನಲ್ಲಿ ಕಾಡುತ್ತಿದೆ ಭಯ…
ಕೊಡಗು

ಗುಡುಗಿನ ಶಬ್ಧಕ್ಕೆ ಕಾಲೂರಿನಲ್ಲಿ ಕಾಡುತ್ತಿದೆ ಭಯ…

May 8, 2019

ಮಡಿಕೇರಿ: ಕಾಲೂರಿನಲ್ಲಿ ಪ್ರಸ್ತುತ ವಾಸವಿರುವ ಗ್ರಾಮಸ್ಥರು ದೊಡ್ಡ ಗುಡುಗಿನ ಶಬ್ದಕ್ಕೆ ಮತ್ತೆ ಬೆಟ್ಟ ಕುಸಿಯಿತೇನೋ ಎಂಬ ಭಯದಿಂದ ನಡಗುವಂತಾಗಿದೆ. ಇನ್ನೇನು ಊರಿಗೆ ಕಾಲಿಡಲಿರುವ ಮಳೆ ರಾಯ ಎಂತಹ ಅನಾಹುತ ಸೃಷ್ಟಿಸುತ್ತಾನೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಕಾಲೂರಿನಲ್ಲಿ ಕಳೆದ ವರ್ಷದ ಜಲ ಪ್ರಳಯಕ್ಕೆ ಒಂದೇ ಕಡೆ 35 ಎಕರೆಗಳಷ್ಟು ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾ ವೃತಗೊಂಡು ಮರಳು, ಮಣ್ಣಿನಿಂದ ಮುಚ್ಚಿ ಭತ್ತ ಬೆಳೆಯಲಾಗುತ್ತಿತ್ತು ಎಂಬ ಕುರುಹೇ ಇಲ್ಲದಂತೆ ಗದ್ದೆಯ ಇರುವಿಕೆ ಯನ್ನೇ ಮುಚ್ಚಿ ಹಾಕಿವೆ. ಜೀವನ ಅಂತೂ ಇಂತು ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಜಲಪ್ರಳಯ ಈ ಗ್ರಾಮಸ್ಥರ ಪಾಲಿಗೆ ಶಾಪವಾಯಿತು. ಇದ್ದ ಆಸ್ತಿಯೂ ನೀರು ಪಾಲಾಯಿತು. ಬೆವರು ಸುರಿಸಿ ಕಟ್ಟಿದ್ದ ಮನೆಯೂ ಬೆಟ್ಟದೊಂದಿಗೆ ಕುಸಿದು ಬಿತ್ತು. ಗುಡುಗು ಸಿಡಿಲು ಆಕಾಶ ದಲ್ಲಿ ಮಾತ್ರವಲ್ಲದೇ ಈ ಗ್ರಾಮಸ್ಥರ ಬದುಕಿನಲ್ಲಿಯೂ ಆರ್ಭಟಿಸಿತು.

ಕಳೆದ 7 ತಿಂಗಳಿಂದಲೂ ತಮ್ಮ ಗ್ರಾಮ ದತ್ತ, ತಮ್ಮ ಸಂಕಷ್ಟದತ್ತ ತಿರುಗಿಯೂ ನೋಡದ ಅಧಿಕಾರಿಗಳು ಈಗ ಮಳೆ ಬಂದಲ್ಲಿ ನೆರವಿಗೆ ಸಿದ್ಧರಿದ್ದೇವೆ ಎಂದು ಭರವಸೆ ನೀಡುತ್ತಿರುವುದು ಗ್ರಾಮಸ್ಥರಲ್ಲಿ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಮಳೆ ಬಂದು 6-7 ತಿಂಗಳಾದರೂ ಸಂತ್ರಸ್ತರ ಸಂಕಷ್ಟ ಹೋಗಲಾಡಿಸಲು ಮುಂದಾ ಗದವರು ಈಗ ಮತ್ತೊಂದು ದುರಂತ ಎದುರಾ ದರೆ ನಿಮ್ಮ ನೆರವಿಗೆ ಬರುತ್ತೇವೆ ಎನ್ನುತ್ತಿರುವುದನ್ನು ಪ್ರಕೃತಿ ವಿಕೋಪ ದಿಂದ ಪಾರಾಗಿ ಬಂದಿರುವ ಗ್ರಾಮೀಣ ನಿವಾಸಿಗಳು ನಂಬಲು ತಯಾರಿಲ್ಲ.

ಕಾಲೂರಿನಲ್ಲಿ ಬಲ್ಯಮೊಟ್ಚೆ ಎಂಬ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ 8 ಕುಟುಂಬಗಳ ಸ್ಥಿತಿ ಇಂದಿಗೂ ಅತಂತ್ರ ವಾಗಿದೆ. ಇವರ ಮನೆಗಳಿಗೆ ತೆರಳಲು ಇದ್ದ 25 ಅಡಿ ಎತ್ತರದ ಸಂಪರ್ಕ ಸೇತುವೆ ಬಳಿಯೇ ಕಾಲೂರು ಹೊಳೆ ನೀರು ಹರಿ ಯುತ್ತಿದ್ದು, ಇನ್ನೇನು ಮಳೆ ಬಂದಲ್ಲಿ ಈ ಸೇತುವೆ ಮೊದಲ ಮಳೆಗೆ ಜಲಾವೃತ ವಾಗಲಿದೆ. ಆಗ ಸೇತುವೆ ದಾಟಲಾಗದೇ ಈ 8 ಕುಟುಂಬಗಳಲ್ಲಿರುವ 20ಕ್ಕೂ ಅಧಿಕ ನಿವಾಸಿಗಳು ಕುಸಿದು ಬೀಳುವ ಭಯ ಸೃಷ್ಟಿಸಿರುವ ಬೆಟ್ಟವನ್ನೇ ನೋಡುತ್ತಾ ಜೀವಕೈಯಲ್ಲಿ ಹಿಡಿದು ಕಾಲ ಕಳೆಯಬೇ ಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

ಕೋಳುಮಾಡಂಡ, ನಂದೀರ ಕುಟುಂಬದ ಹಲವರ ಕಾಫಿ ತೋಟಗಳು ಬಲ್ಯಮೊಟ್ಟೆ ತಪ್ಪಲಲ್ಲಿದೆ. ಪ್ರತೀ ವರ್ಷ ಎಕರೆಗೆ 20 ಚೀಲ ಕಾಫಿ ಕುಯ್ಯುತ್ತಿದ್ದ ವರಿಗೆ ಪ್ರಕೃತಿ ಮುನಿದ ಈ ವರ್ಷ 3 ಎಕರೆ ಯಲ್ಲಿ ಒಟ್ಟಾಗಿ 20 ಚೀಲ ಕಾಫಿ ಯಾಗಿದೆ. ಬೆಟ್ಟ ಕುಸಿದಾಗ ಬಿದ್ದ ಮನೆಯ ಭಾಗಗಳನ್ನೂ ದುರಸ್ಥಿಗೊಳಿಸಲೂ ಇಂದಿಗೂ ಸಾಧ್ಯವಾಗಿಲ್ಲ. ಪಂಚಾಯತ್ ಅಧಿಕಾರಿ ಗಳೂ ಸೇರಿದಂತೆ ಯಾವ ಅಧಿಕಾರಿಗಳೂ ತಮ್ಮ ಬಳಿ ಬಂದಿಲ್ಲ. ಅಹವಾಲು ಕೇಳಿಲ್ಲ. ಪರಿಹಾರವೂ ದೊರಕಿಲ್ಲ ಎಂಬುದು ಈ ಗ್ರಾಮಸ್ಥರ ನೋವಿನ ನುಡಿ.

ದೇವಸ್ತೂರು ಗ್ರಾಮದಲ್ಲಿ ಕಳೆದ ಪ್ರವಾಹದಲ್ಲಿ ಸಿಲುಕಿ ಸಂಪೂರ್ಣ ಹಾನಿ ಗೊಳಗಾದ ಬೈಕ್ ಒಂದು ದುರಂತದ ಸಾಕ್ಷಿಯೆಂಬಂತೆ ರಸ್ತೆ ಪಕ್ಕದಲ್ಲಿ ಹಾಗೇ ಅನಾಥವಾಗಿ ಬಿದ್ದಿದೆ. ದೇವಸ್ತೂರು ಗ್ರಾಮ ದಲ್ಲಿ ಭತ್ತದ ಗದ್ದೆಗಳಿದ್ದ ಸ್ಥಳ ಮರಳು, ಮಣ್ಣಿನ ಹೂಳಿನಿಂದ ತುಂಬಿಕೊಂಡು ಬರಪೀಡಿತ ಪ್ರದೇಶದಲ್ಲಿ ಕಂಡು ಬರುವ ಜಮೀನಿನಂತೆ ಬಿರುಕು ಬಿಟ್ಟಿದೆ. ಸರ್ಕಾರ ಪ್ರಕೃತಿ ವಿಕೋಪ ಪ್ರದೇಶಗಳ ನದಿಪಾತ್ರ ಗಳಲ್ಲಿ ಹೂಳೆತ್ತುವ, ಮರಳು ತೆಗೆದು ನದಿ ನೀರಿನ ಸರಾಗ ಹರಿವಿಕೆಗೆ ಇನ್ನೂ ಕಾರ್ಯೋನ್ಮುಖವಾಗಿಲ್ಲ. ಚುನಾವಣೆ ಎಂದು 2 ತಿಂಗಳು ಸಂತ್ರಸ್ತರತ್ತ ನೀತಿ ಸಂಹಿತೆಯ ನೆಪದಲ್ಲಿ ತಿರುಗಿಯೂ ನೋಡದ ಸರ್ಕಾರ ಇನ್ನೇನು 30 ದಿನಗಳಲ್ಲಿ ಬರ ಬಹುದಾದ ಮಳೆಗಾಲಕ್ಕೆ ಯಾವ ಸಿದ್ಧತೆ ಯನ್ನೂ ಕೈಗೊಂಡಂತಿಲ್ಲ. ಮಳೆ ಬಂದಾಗ 11 ಕ್ಷಿಪ್ರ ಪಡೆ ಮೂಲಕ ನೆರವಿಗೆ ಧಾವಿಸುತ್ತೇವೆ. ವೈದ್ಯರು, ಅಗ್ನಿಶಾಮಕ ಪಡೆ, ಕಾರ್ಯಕರ್ತರು ರಕ್ಷಣೆಗೆ ಸಿದ್ಧರಿದ್ದಾರೆ ಎಂಬ ಹೇಳಿಕೆಗಳು ಮಾತ್ರ ಸರ್ಕಾರದಿಂದ ದೊರೆಯುತ್ತಿವೆ.

ಪ್ರಸಾದ್ ಸಂಪಿಗೆಕಟ್ಟೆ