ತೊರೆನೂರು, ಶಿರಂಗಾಲದಲ್ಲಿ ಹೊನ್ನಾರು ಉತ್ಸವ
ಕೊಡಗು

ತೊರೆನೂರು, ಶಿರಂಗಾಲದಲ್ಲಿ ಹೊನ್ನಾರು ಉತ್ಸವ

April 8, 2019

ಕುಶಾಲನಗರ: ಸಮೀಪದ ತೊರೆನೂರು-ಶಿರಂಗಾಲ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಹೊನ್ನಾರು ಉತ್ಸವ ಆಚರಿಸಿ ಸಂಭ್ರಮಿಸಿದರು.

ಜನಪದ ಸಂಸ್ಕೃತಿ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ) ವನ್ನು ತಮ್ಮ ತಮ್ಮ ಜಮೀನುಗಳಲ್ಲಿ ಆರಂಭಿಸಿ ಉತ್ತಮ ಮಳೆ, ಬೆಳೆಯೊಂದಿಗೆ ಸಂಮೃದ್ಧಿಯನ್ನು ಕರುಣಿಸುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ರೈತರು ತಮ್ಮ ಜಾನುವಾರುಗಳನ್ನು ನದಿಯಲ್ಲಿ ಸ್ನಾನ ಮಾಡಿಸಿ ನಂತರ ಅಲಂಕರಿಸಿ ಗ್ರಾಮದಲ್ಲಿ ಹೊನ್ನಾರು ಉತ್ಸವದ ಮೆರವಣಿಗೆ ನಡೆಸಿದರು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲಿಗೆ ಗ್ರಾಮದ ರೈತ ಟಿ.ಜಿ.ರಮೇಶ್ ಎಂಬುವರು ಮೊದಲಿಗೆ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ತಮ್ಮ ಜಾನುವಾರು ಗಳ ಮೂಲಕ ಹೊನ್ನಾರು ಉಳುಮೆ ( ಚಿನ್ನದ ಉಳುಮೆ) ಆರಂಭಿಸಿದರು. ಮೆರವಣಿಗೆ ನಂತರ ರೈತರು ತಮ್ಮ ತಮ್ಮ ಜಮೀನಿನಲ್ಲಿ ಚಿನ್ನದ ಮೊದಲ ಉಳುಮೆ ಆರಂಭಿಸಿ ದರು. ಈ ವೇಳೆಯಲ್ಲಿ ರೈತರು ಉತ್ತಮ ಮಳೆ – ಬೆಳೆ ಆಗಲಿ, ಎಲ್ಲರಿಗೂ ಉತ್ತಮ ಆರೋಗ್ಯ, ಸುಖ – ಸಂಮೃದ್ಧಿ ನೀಡಲಿ ಎಂದು ಭೂ ತಾಯಿ ಪ್ರಕೃತಿಗೆ ನಮಿಸಿ ಪ್ರಾರ್ಥಿಸಿದರು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕಾರ್ಯದರ್ಶಿ ಟಿ.ಎಚ್.ಸೋಮಾಚಾರಿ, ಮುಖಂಡರಾದ ಟಿ.ಬಿ.ಜಗದೀಶ್, ಟಿ.ಸಿ.ಶಿವಕುಮಾರ್, ಟಿ.ಎಸ್.ತೋಂಟೇಶ್ ಇತರರು ಇದ್ದರು.

ಇದಕ್ಕೂ ಮುನ್ನ ರೈತರು ತಮ್ಮ ಜಾನುವಾರುಗಳನ್ನು ತೊಳೆದು ಗವುಸುಗಳಿಂದ ಅಲಂಕರಿಸಿ, ಅವುಗಳಿಗೆ ಹೋಳಿಗೆ ಮತ್ತಿತರ ಭಕ್ಷ್ಯ ಭೋಜನಗಳನ್ನು ತಿನ್ನಿಸಿದರು. ಈ ಹೊನ್ನಾರು ಉತ್ಸವವನ್ನು ಹಾರಂಗಿ ನೀರಾವರಿ ಬಯಲು ಪ್ರದೇಶದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಹುಲುಸೆ, ಕಣಿವೆ, ಕೂಡ್ಲೂರು, ಕೂಡಿಗೆ ಮುಂತಾದ ಕಡೆಗಳಲ್ಲಿ ಚಾಚು ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ.

ಶಿರಂಗಾಲದಲ್ಲಿ ಆಚರಣೆ: ಶಿರಂಗಾಲ ಶ್ರೀ ಮಂಟಿಗಮ್ಮ ಗ್ರಾಮ ದೇವತಾ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಹೊನ್ಮಾರು ಉತ್ಸವ ಆಚರಿಸಲಾಯಿತು. ರೈತರು ಸಂಭ್ರಮದಿಂದ ಪಾಲ್ಗೊಂಡಿ ದ್ದರು. ತಮ್ಮ ದನಗಳಿಗೆ ಅಲಂಕಾರ ಮಾಡಿ ಊರಿನಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದ ಕೋಟೆ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೊದಲಿಗೆ ದೇವಾಲಯ ಜಾಗದಲ್ಲಿ ಉಳುಮೆ ಮಾಡಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್.ಲೋಕೇಶ್ ಮತ್ತು ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

 

Translate »