ಹುಣಸೂರಲ್ಲಿ ಮುಂದುವರೆದ ಮಾಜಿ, ಹಾಲಿ ಶಾಸಕರ ವಾಕ್ಸಮರ ಸುಳ್ಳೇ ಮಂಜುನಾಥ್ ಮನೆ ದೇವರು
ಮೈಸೂರು

ಹುಣಸೂರಲ್ಲಿ ಮುಂದುವರೆದ ಮಾಜಿ, ಹಾಲಿ ಶಾಸಕರ ವಾಕ್ಸಮರ ಸುಳ್ಳೇ ಮಂಜುನಾಥ್ ಮನೆ ದೇವರು

January 3, 2020

ಹುಣಸೂರು: ಸುಳ್ಳನ್ನೇ ಮನೆದೇವರಾಗಿ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಇನ್ನೊಬ್ಬರನ್ನು ತೆಗಳುವುದು ಆರೋಗ್ಯಕರ ಬೆಳವಣಿಗೆ ಯಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ನೂತನ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾ ಕಚೇರಿಯಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹೆಚ್.ಪಿ.ಮಂಜುನಾಥ್ ಕ್ಷೇತ್ರದ ಅಭಿವೃದ್ಧಿ ದೃಷ್ಟಿ ಯಿಂದ ಕೆಲಸ ಮಾಡಬೇಕೇ ವಿನಃ `ಬೇರೆಯವರು ಏನೂ ಮಾಡಿಲ್ಲ, ಎಲ್ಲಾ ಅಭಿವೃದ್ಧಿ ನಾನೇ ಮಾಡಿದ್ದು’ ಎಂದು ತಪ್ಪು ಮಾಹಿತಿ ನೀಡಬಾರದು. ಬೇಕಿದ್ದರೆ ನಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ದಾಖಲೆ ಸಮೇತ ಮಾಹಿತಿ ಕೊಡುತ್ತೇನೆ ಎಂದರು. ನೀವು ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ, ಅದನ್ನು ನಾವು ಕೇವಲ 14 ತಿಂಗಳಲ್ಲಿ ಮಾಡಿದ್ದೇವೆ. ನೀರಾ ವರಿ ಮತ್ತು ಲೋಕೋಪಯೋಗಿ ಇಲಾಖೆ ಯಿಂದ ಕ್ಷೇತ್ರಕ್ಕೆ 298 ಕೋಟಿ ರೂ. ಅನುದಾನ ತರಲಾಗಿದೆ ಎಂದ ವಿಶ್ವನಾಥ್ ತಿರುಗೇಟು ನೀಡಿದರು.

ರಾಜ್ಯದ ಇತಿಹಾಸದಲ್ಲೇ ಇಡೀ ತಾಲೂಕನ್ನು ಒಂದು ಯುನಿಟ್ ಆಗಿ ತೆಗೆದುಕೊಂಡು 60 ಕೋಟಿ ರೂ. ಅನುದಾನ ತಂದು ಮೇಲ್ವರ್ಗದ ಬೀದಿಗಳನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ 63.5 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 49 ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಹಾಗೂ 37.80 ಕೋಟಿ ರೂ. ವೆಚ್ಚದ ಕಟ್ಟೆಮಳಲ ವಾಡಿ ಚಾನಲ್ ಅಭಿವೃದ್ಧಿ ಕಾಮಗಾರಿಯನ್ನು 2018-19ರ ಬಜೆಟ್‍ನಲ್ಲಿ ಸೇರಿಸ ಲಾಗಿದೆ. ಆದರೆ ಇದನ್ನೆಲ್ಲ ನಾನೇ ಮಾಡಿದ್ದು ಎಂದು ನೂತನ ಶಾಸಕರು ಸುಳ್ಳು ಹೇಳುವುದು ಸರಿಯಲ್ಲ ಎಂದು ವಿಶ್ವನಾಥ್ ಕಿಡಿಕಾರಿದರು.

ನಿಮ್ಮ ಅವಧಿಯಲ್ಲಿ ಚಿಲ್ಕುಂದ ಸೀರಿಸ್ ಯೋಜನೆ ಯಡಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯಲ್ಲಿ 150 ಹೆಚ್‍ಪಿ ಮೋಟರ್ ಅಳವ ಡಿಸುವ ಬದಲು 70 ಹೆಚ್‍ಪಿ ಮೋಟರ್ ಅಳವಡಿಸಿ 7 ಕೋಟಿ ರೂ. ಹಣ ಲೂಟಿ ಮಾಡುವ ಮೂಲಕ ಇಡೀ ಯೋಜನೆಯನ್ನು ನಾಶ ಮಾಡಿದಿರಿ. ಈ ಬಗ್ಗೆ ಜನರಿಗೆ ವಾಸ್ತವಾಂಶ ತಿಳಿಯಬೇಕಿದೆ ಎಂದರು.

ನನ್ನ ಅವಧಿಯ 2018-19ನೇ ಸಾಲಿನಲ್ಲಿ ಹುಣಸೂರು ಕ್ಷೇತ್ರಕ್ಕೆ 5,054 ಯೋಜನೆ ಯಡಿ ಜಿಲ್ಲಾ ಮುಖ್ಯರಸ್ತೆ ಮತ್ತು ಗ್ರಾಮಗಳ ರಸ್ತೆ ಚರಂಡಿ ಅಭಿವೃದ್ಧಿಗಾಗಿ 600 ಕೋಟಿ ರೂ., ಎಸ್‍ಸಿಪಿ ಮತ್ತು ಟಿಎಸ್‍ಪಿ ವಿಶೇಷ ಯೋಜನೆಯಡಿ ರಸ್ತೆ ಮತ್ತು ಸಿಸಿ ಚರಂಡಿ ಗಳ ಅಭಿವೃದ್ಧಿಗಾಗಿ 4.98 ಕೋಟಿ ರೂ. ಗಿರಿಜನ ಉಪ ಯೋಜನೆಗಳ ಹೊಸ ಕಾಮ ಗಾರಿಗಾಗಿ 5.10 ಕೋಟಿ ರೂ. ಅಲ್ಲದೆ, ಪ.ಜಾ. ಉಪಯೋಜನೆ ಗಿರಿಜನ ಉಪ ಯೋಜನೆ, ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಲ್ಲಿ ಬಳಕೆಯಾಗದ 3.83 ಕೋಟಿ ಹಾಗೂ ನಬಾರ್ಡ್.24 ಯೋಜನೆಯಡಿ 4.45 ಕೋಟಿ ರೂ. ಅನು ದಾನವನ್ನು ಕ್ಷೇತ್ರಕ್ಕೆ ತಂದು ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಇದು ಜನರ ಕಣ್ಣ ಮುಂದೆ ನಡೆಯುತ್ತಿರುವ ಕೆಲಸವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಅನುಸರಣೆ ಅಗತ್ಯ. ನಮ್ಮ ಸಹಕಾರ ತೆಗೆದು ಕೊಳ್ಳದಿದ್ದರೂ ಪರವಾಗಿಲ್ಲ. ಅನಗತ್ಯ ವಾಗಿ ತೆಗಳುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧÀ್ಯಕ್ಷ ಬಿ.ಎಸ್‍ಯೋಗಾನಂದ ಕುಮಾರ್, ಶಿವಶೇಖರ್, ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ಗಿರಿಜನ ಅಭಿವೃದ್ಧಿ ಸಂಘದ ಎಂ.ಬಿ.ಪ್ರಭು ಇದ್ದರು.

ನನ್ನ ಪ್ರಶ್ನಿಸುವ ಅರ್ಹತೆಯೇ ಇಲ್ಲ
ಹುಣಸೂರು, ಜ.2(ಹೆಚ್‍ಎಸ್‍ಎಂ/ಕೆಕೆ)- ಸುಪ್ರೀಂ ಕೋರ್ಟ್ ಹಾಗೂ ಜನತಾ ನ್ಯಾಯಾಲಯದಲ್ಲಿ ಅನರ್ಹಗೊಂಡಿರುವ ಎ.ಹೆಚ್. ವಿಶ್ವನಾಥ್ ಅವರಿಗೆ ನನ್ನನ್ನು ಪ್ರಶ್ನಿಸುವ ಅರ್ಹತೆ ಇಲ್ಲ ಎಂದು ಶಾಸಕ ಹೆಚ್.ಪಿ. ಮಂಜುನಾಥ್ ತಿರುಗೇಟು ನೀಡಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಸ್ಪೀಕರ್ ಆದೇಶ ಎತ್ತಿಹಿಡಿದು ಸುಪ್ರೀಂಕೋರ್ಟ್ ವಿಶ್ವನಾಥ್ ಅವರನ್ನು ಅನರ್ಹಗೊಳಿಸಿತ್ತು. ಚುನಾವಣೆಯಲ್ಲಿ ಜನರೂ ಕೂಡ ಅವರನ್ನು ಅನರ್ಹಗೊಳಿಸಿದರು. ಅನರ್ಹತೆಯನ್ನು ಖಾಯಂ ಮಾಡಿಕೊಂಡಿರುವ ವಿಶ್ವನಾಥ್ ಒಂದೂ ವರೆ ವರ್ಷಗಳ ಕಾಲ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಕ್ಕಾಗಿ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಸರ್ಕಾರವನ್ನೇ ಕೆಡವಿ ದ್ದೀರಿ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದೀರಲ್ಲಾ, ಹಾಗಿದ್ದ ಮೇಲೆ ಸರ್ಕಾರವನ್ನು ಏಕೆ ಕೆಡವಿದ್ದೀರಿ ಎಂಬುದರ ಮರ್ಮ ರಾಜ್ಯದ ಜನತೆಗೆ ತಿಳಿದಿದೆ. ನಿಮ್ಮ ಭಟ್ಟಂಗಿಗಳ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಕಾಲು ಕೆರೆದು ಜಗಳಕ್ಕೆ ನಿಂತಿದ್ದೀರಿ. ಅದಕ್ಕೆ ನಾನೂ ತಯಾ ರಿದ್ದೇನೆ ಎಂದು ವಿಶ್ವನಾಥ್ ಅವರಿಗೆ ಸವಾಲೆಸೆದರು.

ವಿಶ್ವನಾಥ್ ಅವರನ್ನು ಮುತ್ಸದ್ಧಿ ರಾಜಕಾರಣಿ ಎಂದು ತಿಳಿದುಕೊಂಡಿದ್ದೆವು. ಆದರೆ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಯಾವುದೇ ಪತ್ರ ಬರೆದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ್ ಅವರು ರಾಜ್ಯಾದ್ಯಂತ ಜಾರಿಗೆ ತಂದ ಪೋಡಿ ಆಂದೋ ಲನವನ್ನು ತಮ್ಮದೆಂದು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ನಾನು ಅನುದಾನ ತಂದಿದ್ದ ಯೋಜನೆಗಳನ್ನೆಲ್ಲಾ ತಮ್ಮದೆಂದು ಹೇಳಿಕೊಳ್ಳುತ್ತಿರುವ ವಿಶ್ವನಾಥ್ ಅವರ ಮನೆದೇವರೇ ಸುಳ್ಳು ಅಲ್ಲವೆ? ಎಂದು ಪ್ರಶ್ನಿಸಿದರು.

ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ. ದೇವೇ ಗೌಡರು ಕಾಲೇಜು ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣ ಕೊಡಿಸಿದ್ದಾರೆಯೇ ಹೊರತು ಅದರಲ್ಲಿ ವಿಶ್ವನಾಥ್ ಕೊಡುಗೆ ಏನೂ ಇಲ್ಲ ಎಂದು ಹೇಳಿದ ಅವರು, ಹನುಮ ಜಯಂತಿ ಗಲಾಟೆ ಸಂಬಂಧ ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಆ ವೇಳೆ ನಾನೇ ಕೇಸ್ ಹಾಕಿಸಿದೆ ಎಂದು ಸುಳ್ಳು ಪ್ರಚಾರ ಮಾಡಿದರು. 107 ಕಾಯ್ದೆ ಯಡಿ ಹಾಕಿದ್ದ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಆರೋಪಕ್ಕೊಳಗಾಗಿರುವವರು ಖುಲಾಸೆಯಾಗದಂತೆ ಪ್ರಕರಣವನ್ನು ಜೀವಂತವಾಗಿಟ್ಟು ವಿನಾಃಕಾರಣ ನನ್ನ ಮೇಲೆ ಆರೋಪಿಸುತ್ತಿದ್ದಾರೆ ಎಂದು ಮಂಜುನಾಥ್ ಕಿಡಿಕಾರಿದರು.

ಚಿಲ್ಕುಂದ ಏತನೀರಾವರಿ ಯೋಜನೆ ಬಗ್ಗೆ ನನ್ನ ವಿರುದ್ಧ ವಿಶ್ವನಾಥ್ ಆರೋಪ ಮಾಡುತ್ತಲೇ ಇದ್ದಾರೆ. ಅದರ ಕರ್ಮಕಾಂಡದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಆಗಲಾದರೂ ಸತ್ಯಾಂಶ ಹೊರಬಿದ್ದು ಅವರ ಬಣ್ಣ ಬಯಲಾಗುತ್ತದೆ ಎಂದ ಶಾಸಕರು, ನನ್ನ ಕುಟುಂಬದ ವಿರುದ್ಧ ಅವರು ಮಾಡಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜೇಗೌಡ, ಪಕ್ಷದ ನಗರಾಧ್ಯಕ್ಷ ಶಿವಯ್ಯ, ಮಾಜಿ ಅಧ್ಯಕ್ಷ ಅಸ್ವಾಳು ಕೆಂಪೇಗೌಡ, ವಕೀಲ ಪುಟ್ಟರಾಜು ಉಪಸ್ಥಿತರಿದ್ದರು.

Translate »