ಇಂದು, ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಮೈಸೂರು

ಇಂದು, ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

January 3, 2020

ಮೈಸೂರು, ಜ.2(ಪಿಎಂ)- ಆಶಾ ಕಾರ್ಯ ಕರ್ತೆಯರ ಮಾಸಿಕ ಕನಿಷ್ಠ ಗೌರವಧನ 12 ಸಾವಿರ ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯ ಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವ ದಲ್ಲಿ ಜ.3 ಮತ್ತು 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.

ಆಶಾ ಸಾಫ್ಟ್ ಅಥವಾ ಆರ್‍ಸಿಹೆಚ್ ಪೋರ್ಟಲ್‍ಗೆ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಜೋಡಣೆ ರದ್ದುಪಡಿಸಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ಒಂದೇ ಬಾರಿಗೆ ಸಂದಾಯ ಮಾಡಬೇಕು. ಈಗಾಗಲೇ ಭರವಸೆ ನೀಡಿದಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಆಶಾ ಕಾರ್ಯ ಕರ್ತೆಯರಿಗೆ ಮಾರಣಾಂತಿಕ ಕಾಯಿಲೆ ಎದುರಾ ದರೆ ಚಿಕಿತ್ಸೆಗೆ ಮತ್ತು ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯ ಕರ್ತೆಯರ ಸಂಘದ ಮೈಸೂರು ಘಟಕದ ಸಲಹೆ ಗಾರರಾದ ಪಿ.ಎಸ್.ಸಂಧ್ಯಾ, ರಾಜ್ಯದಲ್ಲಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಇದ್ದು, ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುವ ಎರಡು ದಿನಗಳ ಅಹೋರಾತ್ರಿ ಪ್ರತಿಭಟನೆಗೆ ಮೈಸೂರು ಜಿಲ್ಲೆಯಿಂದ ಸುಮಾರು 2 ಸಾವಿರ ಆಶಾ ಕಾರ್ಯ ಕರ್ತೆಯರು ತೆರಳಲಿದ್ದಾರೆ ಎಂದು ತಿಳಿಸಿದರು.

Translate »