ಬಂಡೀಪುರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ಉಂಟಾದ ಕಾಡ್ಗಿಚ್ಚು ತೀವ್ರ ಸ್ವರೂಪ ಪಡೆದಿದ್ದು, ಶನಿವಾರ ಬೆಳಿಗ್ಗೆ ಕಿಡಿಗೇಡಿಗಳು ಇಟ್ಟ ಕಿಚ್ಚಿನ ಕಿಡಿಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಭಸ್ಮವಾಗಿ ಆತಂಕದ ವಾತಾವರಣ ಸೃಷ್ಟಿಸಿದೆ.
ಗುರುವಾರ ಮತ್ತು ಶುಕ್ರವಾರ ಬಂಡೀಪುರ ಕುಂದಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಸುಮಾರು 1 ಸಾವಿರ ಎಕರೆ ಭೂಮಿ ಅರಣ್ಯವನ್ನು ಆಹುತಿ ಪಡೆದಿತ್ತು. ಅರಣ್ಯ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ಹತೋಟಿಗೆ ಬಂದಿತ್ತು. ಆದರೆ ಶನಿವಾರ ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ ಸೇರಿದ ಗುಡ್ಡವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಭಸ್ಮ ಮಾಡಿದೆ.
ಇಂದು ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟ ವಲಯದ ಗುಡ್ಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ನಿಧಾನವಾಗಿ ತೀವ್ರ ಸ್ವರೂಪ ಪಡೆದು ಕೊಂಡಿತು. ಇದೇ ವೇಳೆ ಗಾಳಿಯ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೈಗೊಂಡ ಎಲ್ಲಾ ಕ್ರಮಗಳು ಮಣ್ಣು ಪಾಲಾದವು. ಬೆಂಕಿ ಕಾಡಿಗೆ ವ್ಯಾಪಿಸುವುದನ್ನು ತಡೆಗಟ್ಟಲು ಇಲಾ ಖೆಯ ಸಿಬ್ಬಂದಿಗಳು, ವಾಚರ್‍ಗಳು, ಗಾರ್ಡ್ ಹಾಗೂ ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರಾ ದರೂ, ಬಿಸಿಲಿನ ಬೇಗೆ, ಜೋರಾಗಿ ಬೀಸಿದ ಗಾಳಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹಿನ್ನಡೆಯುಂಟು ಮಾಡಿತು. ಇದರಿಂದ ಅರಣ್ಯ ಇಲಾಖೆ ಅಸಹಾಯಕತೆಯಿಂದ ಕೈಕಟ್ಟಿ ನಿಲ್ಲಬೇಕಾದ ಸನ್ನಿವೇಶ ಉಂಟಾಯಿತು. ರಭಸವಾಗಿ ಬೀಸಿದ ಗಾಳಿ ಬೆಂಕಿಯ ಕೆನ್ನಾಲಿಗೆಯನ್ನು ಕ್ಷಣ ಮಾತ್ರದಲ್ಲಿ ದಟ್ಟಡವಿಗೆ ವ್ಯಾಪಿಸುವಂತೆ ಮಾಡಿತು. ಇದರಿಂದ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ-67ರ ಮೂಲಕ ಬಂಡೀಪುರ ಅರಣ್ಯ ಪ್ರವೇಶಿಸುವ ಮೇಲುಕಾಮನ ಹಳ್ಳಿ ಗೇಟ್ ಬಳಿ ಇರುವ ಗುಡ್ಡಕ್ಕೆ ಬೆಳಿಗ್ಗೆ 11 ಗಂಟೆ ವೇಳೆಗೆ ಬೆಂಕಿ ವ್ಯಾಪಿಸಿತು. ಇದಾದ ಕೆಲವೇ ಹೊತ್ತಿನ ಬಳಿಕ ಬಂಡೀಪುರ ವಲಯಕ್ಕೆ ಬೆಂಕಿ ಪ್ರವೇಶಿಸಿತು. ರಾಷ್ಟ್ರೀಯ ಹೆದ್ದಾರಿ-67ರ ಅಂಚಿನಲ್ಲಿಯೇ ಮುಗಿಲೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಿಮ್ಮತೊಡಗಿತು. ಇದನ್ನು ಗಮನಿಸಿದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಆ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು. ಗುಂಡ್ಲುಪೇಟೆಯಿಂದ ಊಟಿಗೆ ಹೋಗುವ ವಾಹನಗಳನ್ನು ಮೇಲುಕಾಮನ ಹಳ್ಳಿ ಗೇಟ್ ಬಳಿ ನಿಲ್ಲಿಸಿದರೆ, ಊಟಿಯಿಂದ ಗುಂಡ್ಲುಪೇಟೆಯತ್ತ ಬರುವ ವಾಹನಗಳನ್ನು ತಮಿಳುನಾಡು ಗಡಿ ತೆಪ್ಪಕಾಡು ಗೇಟ್ ಬಳಿಯೇ ತಡೆಹಿಡಿಯಲಾಯಿತು.
ಬಿರುಗಾಳಿ: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಒಳಗೊಂಡಂತೆ ನೂರಾರು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾದರು. ಆದರೆ ರಭಸವಾಗಿ ಬೀಸಿದ ಬಿರುಗಾಳಿ ಕಾರ್ಯಾಚರಣೆಗೆ ಹಿನ್ನಡೆ ಉಂಟುಮಾಡಿತು. ಬೆಂಕಿಯ ಕೆನ್ನಾಲಿಗೆ ಹಾಗೂ ಬಿಸಿ ಗಾಳಿ ಕಾರ್ಯಾಚರಣೆಯಲ್ಲಿ ಭಾಗಿಯಾದವರನ್ನು ಹೈರಾಣಾಗಿಸಿತು. ಈ ನಡುವೆ ದಟ್ಟ ಹೊಗೆ ಕಾರ್ಯಾಚರಣೆ ಮಾಡುತ್ತಿದ್ದ ಆತ್ಮಸ್ಥೈರ್ಯವನ್ನು ಕುಗ್ಗಿಸಿತು. ಇದರಿಂದ ಬೆಂಕಿ ಮತ್ತಷ್ಟು ತೀವ್ರಗೊಂಡಿತು.
ಆತಂಕ: ಬೆಂಕಿಯ ಕೆನ್ನಾಲಿಗೆಯಿಂದ ಸಿಡಿಯುತ್ತಿದ್ದ ಕಿಡಿ ಇತರ ಪ್ರದೇಶಗಳಿಗೂ ವ್ಯಾಪಿಸುತ್ತಿತ್ತು. ಮಧ್ಯಾಹ್ನ 12.30ರ ವೇಳೆಗೆ ಬಂಡೀಪುರದ ಸಫಾರಿ ಆರಂಭವಾಗುವ ಕ್ಯಾಂಪಸ್ ಬಳಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತು. ಈ ನಡುವೆ ಮುಖ್ಯ ರಸ್ತೆಯಿಂದ ಮತ್ತೊಂದು ಬದಿಗೆ ಕೆಂಡ ಹಾರಲಾರಂಭಿಸಿದವು. ಇದನ್ನು ಸೊಪ್ಪಿನಿಂದ ಬಡಿದು ಕೆಂಡ ನಂದಿಸುವ ಕಾರ್ಯದಲ್ಲಿ ಸ್ವಯಂ ಸೇವಕರು ಯಶಸ್ವಿಯಾದರು. ದಟ್ಟ ಹೊಗೆ ಆವರಿಸಿದ್ದರಿಂದ ಬಂಡೀಪುರದ ಕ್ಯಾಂಪಸ್‍ನಲ್ಲಿ ಇದ್ದ ಪ್ರವಾಸಿಗರು ಆತಂಕಕ್ಕೀಡಾಗಿದ್ದರು.
ಸಫಾರಿ ಬಂದ್: ಶನಿವಾರ ಉಂಟಾದ ಕಾಡ್ಗಿಚ್ಚು ಅರಣ್ಯ ಇಲಾಖೆಯನ್ನೇ ತಲ್ಲಣಗೊಳಿಸಿದೆ. ಕಳೆದ ಎರಡು ವರ್ಷದ ಹಿಂದೆ ಫೆಬ್ರವರಿ ತಿಂಗಳಲ್ಲಿಯೇ ಕಲ್ಕರೆ, ಗುಂಡ್ರೆ, ಬೇಗೂರು ಸೇರಿದಂತೆ ವಿವಿಧೆಡೆ ಕಾಡ್ಗಿಚ್ಚು ಸಂಭವಿಸಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಗಾರ್ಡ್ ಮುರುಗಪ್ಪ ತಮ್ಮಣ್ಣಗಳ್ ಅವರು 2017ರ ಫೆ.18ರಂದು ಮೃತಪಟ್ಟಿದ್ದರು. ಅದರೆ ಸಫಾರಿ ಸ್ಥಳಕ್ಕೆ ಬೆಂಕಿ ವ್ಯಾಪಿಸಿರಲಿಲ್ಲ. ಆದರೆ ಇಂದು ನಡೆದ ಬೆಂಕಿ ಅವಘಡ ಸಪಾರಿ ಕ್ಷೇತ್ರದಲ್ಲಿಯೇ ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಇದರಿಂದ ಇಂದು ಮತ್ತು ನಾಳೆ (ಫೆ.23, 24) ಸಫಾರಿ ಬಂದ್ ಮಾಡಲಾಗಿದೆ. ಬಂಡೀಪುರ ವಲಯದ ಸಫಾರಿ ಕ್ಷೇತ್ರದಲ್ಲಿ ಸಾಕಷ್ಟು ಕಡೆ ಬೆಂಕಿ ಕಾಡನ್ನು ಆಹುತಿ ತೆಗೆದುಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ಸಫಾರಿ ಬಂದ್ ಮಾಡಿರುವುದರೊಂದಿಗೆ ಸಫಾರಿಗೆ ಬಳಸಿಕೊಳ್ಳುತ್ತಿದ್ದ ಸಿಬ್ಬಂದಿಯನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
ತತ್ತರಿಸಿದ ಪ್ರಾಣಿಗಳು: ಬೆಂಕಿಯ ಕೆನ್ನಾಲಿಗೆ ಆಗಸವನ್ನು ತುಂಬಿಸುವಂತೆ ಗಿಡ-ಮರವನ್ನು ಆಹುತಿ ಪಡೆದುಕೊಳ್ಳುತ್ತಿದ್ದರೆ, ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪ್ರಾಣಿ-ಪಕ್ಷಿ ಸಂಕುಲ ಹೌಹಾರಿ ತತ್ತರಿಸಿದವು. ಅದರಲ್ಲಿಯೂ ಜಿಂಕೆ, ಕಡವೆ ಸೇರಿದಂತೆ ಇನ್ನಿತರ ಪ್ರಾಣಿಗಳು ಆತಂಕದಿಂದ ದಿಕ್ಕೆಟ್ಟು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಾ ಓಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಇನ್ನೊಂದೆಡೆ ಲಂಗೂರ್, ನವಿಲು ಹಾಗೂ ಇನ್ನಿತರ ಪಕ್ಷಿಗಳು, ಕೋತಿಗಳು ಕಿರುಚಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯ ಹಲವೆಡೆ ಕಂಡುಬಂದಿತು.