ಕೆಎಸ್‍ಆರ್‍ಟಿಸಿಯಲ್ಲಿ ಕೋಟ್ಯಾಂತರ ಅವ್ಯವಹಾರ
ಮೈಸೂರು

ಕೆಎಸ್‍ಆರ್‍ಟಿಸಿಯಲ್ಲಿ ಕೋಟ್ಯಾಂತರ ಅವ್ಯವಹಾರ

February 24, 2019

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ನಡೆದಿರುವ ಅವ್ಯವ ಹಾರ-ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸ ಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮಗಳಲ್ಲಿ ಬಿಡಿ ಭಾಗಗಳು, ರೆಕ್ಸಿನ್, ಕಂಪ್ಯೂಟರ್ ಹಾಗೂ ಸರ್ವರ್ ಗಳ ಖರೀದಿಯಲ್ಲಿ ಅವ್ಯವಹಾರ ಆಗಿರು ವುದು, ಅಗತ್ಯಕ್ಕಿಂತ ಹೆಚ್ಚು ಖರೀದಿಸಿರು ವುದು, ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ನೀಡಿರುವುದು ಪತ್ತೆಯಾಗಿದೆ. ಹೀಗಾಗಿ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸಾರಿಗೆ ನಿಗಮಗಳು ಕಳೆದ ಮೂರು ವರ್ಷಗಳಲ್ಲಿ ನಷ್ಟದಲ್ಲಿ ನಡೆಯುತ್ತಿವೆ. ಹಿಂದೆ ಲಾಭದಲ್ಲಿದ್ದ ನಿಗಮ ಗಳು ನಷ್ಟಕ್ಕೆ ಬಂದಿವೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. 3 ವರ್ಷ ಅವಕಾಶ ಸಿಕ್ಕರೆ ಮತ್ತೆ ನಿಗಮಗಳನ್ನು ಲಾಭದ ಹಾದಿಗೆ ತರುತ್ತೇನೆ ಎಂದು ಹೇಳಿದರು. 17 ಕೋಟಿ ರೂ. ಮೊತ್ತದ ರೆಕ್ಸಿನ್ ಖರೀದಿ ಪ್ರಕರಣದಲ್ಲಿ 7 ಜನರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಕಂಪ್ಯೂಟರ್ ಹಾಗೂ ಸರ್ವರ್ ಖರೀದಿ ಪ್ರಕರಣದಲ್ಲೂ ನಾಲ್ವರನ್ನು ಆಮಾನತು ಮಾಡಲಾಗಿದೆ. ಈಶಾನ್ಯ ನಿಗಮದಲ್ಲಿ ಎಂಡಿ ಸಹಿ ದುರ್ಬಳಕೆ ಮಾಡಿ 140 ಮಂದಿ ನೇಮಕ ಸಂಬಂಧ 15 ಮಂದಿಯನ್ನು ಅಮಾನತುಮಾಡಲಾಗಿದೆ ಎಂದು ತಿಳಿಸಿದರು.

ಬೇಕಾ ಬಿಟ್ಟಿ ಬಿಡಿ ಭಾಗ ಖರೀದಿಸಲಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಬಾಡಿ ಕೋಚ್‍ಗಾಗಿ 117 ಕೋಟಿ ರೂ. ವೆಚ್ಚ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ಮುಂದೆ, ಬಿಡಿ ಭಾಗಗಳ ಉತ್ಪಾದಕ ಘಟಕಗಳಿಂದಲೇ ನೇರವಾಗಿ ಖರೀದಿಸಲು ಹಾಗೂ ಅವರ ಮಳಿಗೆ ನಮ್ಮ ವರ್ಕ್‍ಶಾಪ್‍ನ ಆವರಣದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ. ಟೈರ್ ಖರೀದಿಗೂ ಇದೇ ರೀತಿ ನಿರ್ದೇಶನ ನೀಡಲಾಗಿದೆ. ಅಗತ್ಯ ವಿದ್ದಷ್ಟು ಮಾತ್ರ ನಿತ್ಯ ಅಲ್ಲಿಂದ ಖರೀದಿಸುವುದು, ತಿಂಗಳಿಗೊಮ್ಮೆ ಬಿಲ್ ಪಾವತಿಸು ವುದು. ದರದ ಬಗ್ಗೆ ಮೊದಲೇ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ ಎಂದರು. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು 28 ಸ್ಲೀಪರ್ ಕೋಚ್ ಹಾಗೂ ಲಕ್ಸುರಿ ಸೇರಿ ಮೂರು ಸಾವಿರ ಹೊಸ ಬಸ್ ಖರೀದಿಸಲು ತೀರ್ಮಾ ನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಮೂರೂ ನಿಗಮಗಳಲ್ಲಿ ಹೊಸ ಬಸ್‍ಗಳಿಗೆ ಬೇಡಿಕೆಯಿದೆ. ಜತೆಗೆ ಪ್ರತಿವರ್ಷ ಹಳೆಯ ಬಸ್‍ಗಳನ್ನು ವಿಲೇವಾರಿ ಮಾಡಿ ಆ ಜಾಗಕ್ಕೆ ಹೊಸ ಬಸ್ ಒದಗಿಸಬೇಕಿದೆ. ಹೀಗಾಗಿ, ಮೂರು ಸಾವಿರ ಬಸ್‍ಗಳನ್ನು ವೋಲ್ವೋ ಸೇರಿ ಇತರೆ ಸಂಸ್ಥೆಗಳಿಂದ ಖರೀದಿಸಲಾಗುವುದು ಎಂದು ಹೇಳಿದರು.

ಪ್ರಯಾಣ ದರ ಏರಿಕೆ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದ ಅವರು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನು ಅನುಮತಿ ದೊರೆತಿಲ್ಲ ಎಂದರು.

ಶೇ.18 ರಷ್ಟು ದರ ಹೆಚ್ಚಳ ಮಾಡಲು ಕೋರಿದ್ದೇವೆ. ಎಷ್ಟು ಮಾಡಬೇಕು ಎಂಬುದು ಮುಖ್ಯಮಂತ್ರಿಯವರ ತೀರ್ಮಾನಕ್ಕೆ ಬಿಟ್ಟದ್ದು ಎಂದು ಹೇಳಿದರು. 2013-14 ನೇ ಸಾಲಿನಲ್ಲಿ ಬಸ್ ಪ್ರಯಾಣ ದರ ಏರಿಸಲಾಗಿತ್ತು. ಆದರೆ ಇದುವರೆಗೂ ಹೆಚ್ಚಿಸಿಲ್ಲ. ಹೀಗಾಗಿ, ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ದರ ಏರಿಕೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಂತೆ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಅಧಿಕಾರವನ್ನು ನೀಡಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಈ ಕುರಿತಂತೆ ತೀರ್ಮಾನ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Translate »