ಮೈಸೂರು: ತೀವ್ರ ಕುತೂ ಹಲ ಕೆರಳಿಸಿದ್ದ ಮೈಸೂರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಂತಿಮವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟು, ಬಿಜೆಪಿಗೆ ಭಾರೀ ಆಘಾತ ಉಂಟಾಗಿದೆ. ಜೆಡಿಎಸ್‍ನ ಬಿ.ಪಿ.ಪರಿ ಮಳಾ ಶ್ಯಾಂ (ಅಧ್ಯಕ್ಷೆ) ಹಾಗೂ ಕಾಂಗ್ರೆಸ್‍ನ ಎಂ.ವಿ. ಗೌರಮ್ಮ ಸೋಮಶೇಖರ್ (ಉಪಾಧ್ಯಕ್ಷೆ) ಅವಿರೋಧವಾಗಿ ಆಯ್ಕೆಯಾದರು.
ಬೆಳಿಗ್ಗೆ 8 ಗಂಟೆಯಿಂದ 10ರವರೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಬಿ.ಪಿ.ಪರಿಮಳಾ ಶ್ಯಾಂ (ಅಂತರ ಸಂತೆ ಕ್ಷೇತ್ರ), ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಎಂ.ವಿ.ಗೌರಮ್ಮ ಸೋಮಶೇಖರ್ (ಬಿಳಿಕೆರೆ ಕ್ಷೇತ್ರ) ಮತ್ತು ಬಿಜೆಪಿಯ ಎ.ಎಂ.ಗುರುಸ್ವಾಮಿ (ಹದಿನಾರು ಕ್ಷೇತ್ರ) ನಾಮಪತ್ರ ಸಲ್ಲಿಸಿದರು. ಎರಡು ಪ್ರತಿ ನಾಮಪತ್ರ ಸಲ್ಲಿಸಿದ ಪರಿಮಳಾ ಶ್ಯಾಂ ಅವರಿಗೆ ಕ್ರಮವಾಗಿ ಬೀರಿಹುಂಡಿ ಬಸವಣ್ಣ ಮತ್ತು ಎಂ.ಪಿ.ನಾಗರಾಜು ಸೂಚಕರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಎಂ.ವಿ. ಗೌರಮ್ಮ ಸೋಮಶೇಖರ್ ಎರಡು ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಕ್ರಮವಾಗಿ ಡಿ.ರವಿ ಶಂಕರ್ ಮತ್ತು ರಾಕೇಶ್ ಪಾಪಣ್ಣ ಸೂಚಕ ರಾಗಿದ್ದರು. ಚುನಾವಣಾ ಧಿಕಾರಿಯಾಗಿದ್ದ ಮೈಸೂರು ಪ್ರಾದೇಶಿಕ ಆಯುಕ್ತ ವಿ.ಯಶವಂತ ಅವರು 10ರಿಂದ 12 ಗಂಟೆವರೆಗೆ ನಾಮಪತ್ರ ಗಳನ್ನು ಪರಿಶೀಲಿಸಿದರು. ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಮೈಸೂರು ಜಿಪಂ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳು ಚುನಾವಣೆ ನಡೆಸಿದರು. ಮೊದಲಿಗೆ ಅಧ್ಯಕ್ಷ ಸ್ಥಾನದ ಚುನಾವಣೆ ಆರಂಭಿಸಿದರು.
ನಾಮಪತ್ರ ಹಿಂಪಡೆಯಲು 5 ನಿಮಿಷ ಕಾಲಾವಕಾಶ ನೀಡಿದರು. ಬಳಿಕ ಅಧ್ಯಕ್ಷ ಸ್ಥಾನದ ಏಕೈಕ ಅಭ್ಯರ್ಥಿ ಪರಿಮಳಾ ಶ್ಯಾಂ ಅವಿರೋಧವಾಗಿ ಆಯ್ಕೆ ಆಗಿರುವ ಬಗ್ಗೆ ಪ್ರಕಟಿಸುತ್ತಿದ್ದಂತೆ ಸದಸ್ಯರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದರು. ನಂತರ ಉಪಾಧ್ಯಕ್ಷ ಸ್ಥಾನದ ಚುನಾವಣೆ ಆರಂಭಿಸಿ, ಇಬ್ಬರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು 5 ನಿಮಿಷ ಕಾಲಾವಕಾಶ ನೀಡಿದರು. ಈ ವೇಳೆ ಬಿಜೆಪಿಯ ಎ.ಎಂ.ಗುರುಸ್ವಾಮಿ ತಮ್ಮ ನಾಮಪತ್ರ ವಾಪಸ್ ಪಡೆದು, ತಮ್ಮ 8 ಮಂದಿ ಸದಸ್ಯರೊಂದಿಗೆ ಚುನಾವಣೆಯನ್ನು ಬಹಿಷ್ಕರಿಸಿ ಹೊರ ನಡೆದರು. ನಂತರ ಚುನಾವಣಾಧಿಕಾರಿಗಳು ಎಂ.ವಿ.ಗೌರಮ್ಮ ಸೋಮಶೇಖರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟುವ ಮೂಲಕ ಈ ಎರಡೂ ಆಯ್ಕೆಯನ್ನು ಸ್ವಾಗತಿಸಿದರು. ಚುನಾವಣೆ ಸಂದರ್ಭದಲ್ಲಿ ಮೈಸೂರು ವಿಭಾಗದ ಅಪರ ಪ್ರಾದೇಶಿಕ ಆಯುಕ್ತರಾದ ರೂಪಾ ಮತ್ತು ಜಿಪಂ ಸಿಇಓ ಕೆ.ಜ್ಯೋತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾತ್ರಿಯೇ ಮೈತ್ರಿ ತೀರ್ಮಾನವಾಗಿತ್ತು: ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಹಿಂದಿನ ಅವಧಿಯಲ್ಲಿ ಇದ್ದಂತೆ ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿಯೇ ಮುಂದುವರೆಸುವ ಬಗ್ಗೆ ಹೇಳಲಾಗಿತ್ತು. ಆದರೆ ನಿನ್ನೆ ರಾತ್ರಿ ನಡೆದ ದಿಢೀರ್ ಬೆಳವಣಿಗೆ ಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ಅಂತಿಮವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ತೀರ್ಮಾನವಾಗಿತ್ತು. ಅದರಂತೆ ಜೆಡಿಎಸ್‍ನಲ್ಲಿರುವ ಬಿಸಿಎಂ ಎ ಮಹಿಳಾ ಅಭ್ಯರ್ಥಿ ಪರಿಮಳಾ ಶ್ಯಾಂ ಅವರು ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಂ.ಪಿ.ನಾಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಅವರೊಂದಿಗೆ ಶನಿವಾರ ಜಿಪಂ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ಎರಡು ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಬೆಳಿಗ್ಗೆ 10 ಗಂಟೆವರೆಗೆ ಅವಕಾಶವಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪತ್ರ ಸಲ್ಲಿಸಲು ಯಾರೊಬ್ಬರ ಸುಳಿವು ಕಾಣಿಸದಿದ್ದಾಗ, ಸಹಜವಾಗಿ ಜೆಡಿಎಸ್ ಸದಸ್ಯರಲ್ಲಿ ಆತಂಕ ಉಂಟಾಗಿತ್ತು. ನಾಮಪತ್ರ ಸಲ್ಲಿಸಲು ಇನ್ನೂ 5 ನಿಮಿಷಗಳಿವೆ ಎನ್ನುವಾಗ ಮೊದಲು ಕಾಂಗ್ರೆಸ್, ನಂತರ ಬಿಜೆಪಿ ಅಭ್ಯರ್ಥಿಗಳು ಆಗಮಿಸಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಎಂ.ವಿ.ಗೌರಮ್ಮ ಸೋಮಶೇಖರ್ ಅವರು ಎರಡು ಪ್ರತಿ ನಾಮಪತ್ರ ಸಲ್ಲಿಸಿದರು. ಡಿ.ರವಿಶಂಕರ್ ಮತ್ತು ರಾಕೇಶ್ ಪಾಪಣ್ಣ ಸೂಚಕರಾಗಿದ್ದರು. ನಂತರ ಬಿಜೆಪಿಯ ಎ.ಎಂ.ಗುರುಸ್ವಾಮಿಯವರೂ ನಾಮಪತ್ರ ಸಲ್ಲಿಸಿದರು.
ಶಿಕ್ಷಣಕ್ಕೆ ಹೆಚ್ಚು ಆಧ್ಯತೆ: ಅಧ್ಯಕ್ಷೆ ಪರಿಮಳಾ ಶ್ಯಾಂ
ತಮ್ಮ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡುವುದಾಗಿ ನೂತನ ಅಧ್ಯಕ್ಷೆ ಪರಿಮಳಾ ಶ್ಯಾಂ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಜೊತೆಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಆರೋಗ್ಯ ಇನ್ನಿತರ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ತಾವು ಅಧ್ಯಕ್ಷರಾಗಲು ಪ್ರಮುಖ ಕಾರಣರಾದ ಮುಖ್ಯಮಂತ್ರಿ, ಸಚಿವರು, ಸಂಸದರು ಮತ್ತು ಸದಸ್ಯರ ಸಹಕಾರದಲ್ಲಿ ತಾವು ತಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ಉತ್ತಮ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು. ಇದೇ ಅಭಿಪ್ರಾಯವನ್ನು ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಅವರೂ ವ್ಯಕ್ತಪಡಿಸಿದ್ದು, ತಮ್ಮ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರದಲ್ಲಿ ಜನಪರ ಕೆಲಸ ಮಾಡುವುದಾಗಿ ತಿಳಿಸಿದರು.
ಒಂದು ವರ್ಷದ ಅವಧಿಗೆ ಅಧಿಕಾರ ಹಂಚಿಕೆ
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಒಂದು ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಹಂಚಿಕೆಯಾಗಿದೆ. ವರಿಷ್ಟರ ಸೂಚನೆ ಮೇರೆಗೆ ಈ ಅಧಿಕಾರ ಹಂಚಿಕೆ ಆಗಿದ್ದು, ವರ್ಷದ ಬಳಿಕ ಅಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಎಂಬ ತೀರ್ಮಾನ ಆಗಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದು, ಅದರಂತೆ ತಾವು ನಿರ್ವಹಿಸಿರುವುದಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.