ಮೈಸೂರಲ್ಲಿ ಖಾಲಿ ಜಾಗದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ
ಮೈಸೂರು

ಮೈಸೂರಲ್ಲಿ ಖಾಲಿ ಜಾಗದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ

February 3, 2019

ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಬಿಸಿಲಿನ ತಾಪಕ್ಕೆ ಸಹಜವಾಗಿ ಹುಲ್ಲು, ಗಿಡಗಂಟಿಗಳು ಒಣಗುತ್ತಿವೆ. ಮೈಸೂರು ನಗರದಾದ್ಯಂತ ಬಯಲು, ಮೈದಾನ, ಖಾಲಿ ನಿವೇಶನಗಳು, ರಸ್ತೆ ಬದಿ, ಮಾನಸ ಗಂಗೋತ್ರಿ, ರೆವಿನ್ಯೂ ಬಡಾವಣೆಗಳ ಖಾಲಿ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳು ಒಣಗಿ ರುವುದಲ್ಲದೆ, ಮರಗಳ ಎಲೆಗಳು ಒಣಗಿ ಉದುರಿರುವ ಸ್ಥಳಗಳಲ್ಲಿ ಪಾಲಿಕೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧಿಕಾರಿಗಳು ಅದರಲ್ಲಿ ತೆರವುಗೊಳಿಸ ದಿರುವುದರಿಂದ ಕೆಲ ದುಷ್ಕರ್ಮಿಗಳು ಒಣಗಿದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬರುತ್ತಿದೆ.

ಅದರಿಂದಾಗಿ ಒಣಗಿದ ಗಿಡಗಂಟಿಗಳ ಮಧ್ಯೆ ಇರುವ ಹಸಿರಾದ ಗಿಡಗಂಟಿಗಳೂ ಸುಟ್ಟು ಹೋಗುತ್ತಿವೆಯಲ್ಲದೆ, ಬೆಂಕಿಯ ಜ್ವಾಲೆ ಅಕ್ಕಪಕ್ಕದ ಮನೆಗಳಿಗೂ ಹರಡಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಹಾಗೆಯೇ ಗಿಡಗಳ ಮಧ್ಯೆ ಗೂಡು ಕಟ್ಟಿ ಕೊಂಡು ವಾಸಿಸುತ್ತಿರುವ ಸಣ್ಣ ಪಕ್ಷಿಗಳೂ ಬೆಂಕಿಗಾಹುತಿಯಾಗುವ ಜೊತೆಗೆ ಹುಳು-ಹುಪ್ಪಟೆ, ಕೀಟಗಳೂ ಸುಟ್ಟು ಹೋಗುತ್ತವೆ. ರಸ್ತೆ ವಿಭಜಕಗಳಲ್ಲಿ ನಗರಪಾಲಿಕೆಯಿಂದ ನೆಟ್ಟಿರುವ ಗಿಡಗಳೂ ಬೆಂಕಿಗೆ ನಲುಗುತ್ತವೆ. ನಗರವನ್ನು ಹಸಿರಾಗಿಸುವ ಉದ್ದೇಶದಿಂದ ನೆಟ್ಟಿರುವ ಗಿಡಗಳಿಗೆ ನೀರೆರೆದು ಬೆಳೆಸುವ ಬದಲಾಗಿ ಹುಲ್ಲಿನ ಜೊತೆ ಹೂವಿನ ಗಿಡಗಳನ್ನೂ ನಾಶ ಮಾಡಲಾಗುತ್ತಿದೆ.

ಮೈಸೂರಿನ ವಿಜಯನಗರ 1, 2, 3 ಮತ್ತು 4ನೇ ಹಂತದ ಬಡಾವಣೆ, ಮಾನಸ ಗಂಗೋತ್ರಿ ಆವರಣ, ಸೂಯೆಜ್ ಫಾರಂ, ಖಾಲಿ ಇರುವ ಸಿಎ ನಿವೇಶನಗಳು, ರಿಂಗ್ ರಸ್ತೆಯ ಇಕ್ಕೆಲ, ವಸಂತನಗರ, ಲಾಲ್‍ಬಹ ದ್ದೂರ್‍ಶಾಸ್ತ್ರಿನಗರ ಸೇರಿದಂತೆ ವಿಶಾಲ ಖಾಲಿ ಪ್ರದೇಶಗಳಲ್ಲಿ ಬೆಳೆದು ನಿಂತಿರುವ ಹುಲ್ಲಿಗೆ ಬೆಂಕಿ ಹಾಕುತ್ತಿರುವುದರಿಂದ ಆಶ್ರಯ ಕ್ಕಾಗಿ ಹಾವುಗಳು ಸಮೀಪದ ನಿರ್ಮಾಣ ಹಂತದ ಕಟ್ಟಡಗಳು, ವಾಸದ ಮನೆಗಳು, ಕಾರ್ ಗ್ಯಾರೇಜ್‍ಗಳಿಗೆ ನುಸುಳಿ ಅಡಗಿ ಕೊಳ್ಳುತ್ತಿವೆ ಎಂದು ಸಾರ್ವಜನಿಕರು ಕಳಕಳಿ ವ್ಯಕ್ತಪಡಿಸಿದ್ದಾರೆ. ಇನ್ನು ಚಾಮುಂಡಿಬೆಟ್ಟ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಕಿ ತಗುಲಿದಲ್ಲಿ ಅಲ್ಲಿ ವಾಸಿಸುವ ಪ್ರಾಣಿ ಸಂಕುಲ ಗಳಿಗೆ ತೊಂದರೆ ಉಂಟಾಗುತ್ತದೆ. ಅರಣ್ಯ ಪ್ರದೇಶ ಬೆಂಕಿಗಾಹುತಿಯಾದರೆ ಅಪಾರ ನೈಸರ್ಗಿಕ ಸಂಪತ್ತು ನಾಶವಾಗುವ ಸಾಧ್ಯತೆ ಇದೆ. ಮೈಸೂರು ನಗರ ವ್ಯಾಪ್ತಿಯಲ್ಲಿ ನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿ ಕಾರ, ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬೆಂಕಿ ಹಚ್ಚುವವರ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿಗಳು, ಅರಣ್ಯ ಸಿಬ್ಬಂದಿಗಳೂ ಎಚ್ಚೆತ್ತು ಗಸ್ತು ನಡೆಸಿ ಅಗ್ನಿಸ್ಪರ್ಶಿ ಸುವವರ ಬಗ್ಗೆ ಎಚ್ಚರ ವಹಿಸಿದರೆ ಇಂತಹ ಅಚಾತುರ್ಯಗಳನ್ನು ತಡೆಗಟ್ಟಬಹುದಾಗಿದೆ.

Translate »