ದುಷ್ಕರ್ಮಿಗಳಿಂದ ಕಾರು, ಬೈಕ್‍ಗಳಿಗೆ ಬೆಂಕಿ
ಮಂಡ್ಯ

ದುಷ್ಕರ್ಮಿಗಳಿಂದ ಕಾರು, ಬೈಕ್‍ಗಳಿಗೆ ಬೆಂಕಿ

December 31, 2019

ಚಿನಕುರಳಿ, ಡಿ.30- ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್‍ಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಚಿನಕುರಳಿ ಗ್ರಾಮದಿಂದ ವರದಿಯಾಗಿದೆ.

ಗ್ರಾಮದ ಅಂಕೇಗೌಡರಿಗೆ ಸೇರಿದ ಹೀರೋ ಫ್ಯಾಷನ್ ಪ್ಲಸ್ ಹಾಗೂ ಸಿ.ಎಂ.ಸಂತೋಷ್ ಅವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್‍ಗಳಿಗೆ ಹಾಗೂ ಮಹಮ್ಮದ್ ಎಂಬುವರಿಗೆ ಸೇರಿದ ಇಂಡಿಕಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಘಟನೆ ವಿವರ: ಶನಿವಾರ ರಾತ್ರಿ ಸಂತೋಷ್ ಅವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೈಕ್‍ಗೆ ಬೆಂಕಿ ಹಾಕಿ ಪರಾರಿಯಾಗಿದ್ದಾರೆ. ಅದೇ ರೀತಿ ಅಂಕೇಗೌಡ ಹಾಗೂ ಮಹಮ್ಮದ್ ಅವರುಗಳು ಸಹ ಭಾನುವಾರ ರಾತ್ರಿ ತಮ್ಮ ಮನೆ ಮುಂದೆ ಬೈಕ್ ಹಾಗೂ ಕಾರು ನಿಲ್ಲಿಸಿದ್ದರು. ಇವುಗಳಿಗೂ ದುಷ್ಕರ್ಮಿ ಗಳು ಬೆಂಕಿ ಹಾಕಿದ್ದಾರೆ. ಇದುವರೆಗೂ ಘಟನೆಗೆ ಕಾರಣರಾದ ದುಷ್ಕರ್ಮಿಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಾಂಡವಪುರ ಪೋಲಿಸರು ಪರಿಶೀಲನೆ ನಡೆಸಿ, ಬೈಕ್ ಹಾಗೂ ಕಾರು ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »