ಮಾರ್ಬಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಕೊಡಗು

ಮಾರ್ಬಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

August 3, 2018

ಕುಶಾಲನಗರ:  ಪಟ್ಟಣದ ಟಾಟಾ ಪೆಟ್ರೋಲ್ ಬಂಕ್ ಎದುರಿನಲ್ಲಿರುವ ಕಾವೇರಿ ಮಾರ್ಬಲ್ಸ್ ಬೃಹತ್ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಬೆಂಕಿಗೆ ಅಹುತಿಯಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.

ರಾಜಾಸ್ಥಾನ ಮೂಲದ ಪುರುಷೋತ್ತಮ ಎಂಬುವವರಿಗೆ ಸೇರಿದ ಅಂಗಡಿಯಾಗಿದ್ದು ಬೆಂಕಿ ಅನಾಹುತದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಬುಧವಾರ ಮಧ್ಯರಾತ್ರಿ ಅಂಗಡಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ವ್ಯಾಪಕವಾಗಿ ಹರಡಿತು. ಇದರಿಂದ ಮಾರ್ಬಲ್ಸ್ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಹೋಗಿವೆ. ನಂತರ ಅಗ್ನಿಶಾಮಕ ಸಿಬ್ಬಂದಿಗಳ ಎರಡು ವಾಹನಗಳು ನಿರಂತರ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮುಂಭಾಗ ಪೆಟ್ರೋಲ್ ಬಂಕ್ ಹಾಗೂ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡದಂತೆ ಎಚ್ಚರ ವಹಿಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದರು.ಮೈಸೂರು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರ ಭೇಟಿ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು.

ತನಿಖೆಗೆ ಆದೇಶ: ಮಾರ್ಬಲ್ಸ್ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿರುವ ಘಟನೆ ಬಗ್ಗೆ ಪೊಲೀಸ್ ತನಿಖಗೆ ಆದೇಶಿಸಿದ್ದೇನೆ ಎಂದು ಜಿಲ್ಲಾ ಎಸ್ಪಿ ಸುಮಾನ್ ಪಣ್ಣೇಕರ್ ಹೇಳಿದರು. ಅಧಿಕಾರಿಗಳೊಂದಿಗೆ ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »