ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ: ಐವರು ವೈದ್ಯರಿಗೆ ‘ವೈದ್ಯ ಭಾಸ್ಕರ’ ಪ್ರಶಸ್ತಿ
ಮೈಸೂರು

ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ: ಐವರು ವೈದ್ಯರಿಗೆ ‘ವೈದ್ಯ ಭಾಸ್ಕರ’ ಪ್ರಶಸ್ತಿ

July 2, 2018

ಮೈಸೂರು: ತಮ್ಮ ಇಡೀ ಜೀವನವನ್ನು ಜನರ ಆರೋಗ್ಯಕ್ಕಾಗಿಯೇ ಮೀಸಲಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಐವರು ವೈದ್ಯರಿಗೆ ಮೈಸೂರಿನ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ಭಾನುವಾರ `ವೈದ್ಯ ಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಹಾಗೂ ಹಿರಿಯ ಸಾಹಿತಿ ಕೆ.ಭೈರವಮೂರ್ತಿ ಅವರ 74ನೇ ಹುಟ್ಟುಹಬ್ಬದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ.ಯೋಗಣ್ಣ. ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್, ಮಂಡ್ಯ ಜಿಲ್ಲೆಯ ಮಂದಗೆರೆ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್.ಪಿ.ಚಂದ್ರಶೇಖರ್, ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಥೈರಾಯಿಡ್ ಡಾ.ಎಚ್.ಎಸ್.ವೆಂಕಟೇಶ್ ಅವರಿಗೆ ಸನ್ಮಾನಿಸಲಾಯಿತು. 74ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಡಿ.ತಿಮ್ಮಯ್ಯ, ಡಾ.ಬಿ.ಸಿ.ರಾಯ್ ಅವರು ಈ ದೇಶ ಕಂಡ ಅತ್ಯುತ್ತಮ ವೈದ್ಯ. ಸ್ವಾತಂತ್ರ್ಯ ಹೋರಾಟಗಾರ. ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿಯಾಗಿ 14 ವರ್ಷ ದಕ್ಷ ಆಡಳಿತ ನೀಡಿ ವೈದ್ಯಕೀಯ ಕ್ಷೇತ್ರದ ಅಪರೂಪದ ಮಾದರಿ ವ್ಯಕ್ತಿ ಎನಿಸಿದರು. ಈ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ನಟರಾಜ ಜೋಯಿಸ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಪಿ.ಶಾಂತರಾಜೇ ಅರಸ್, ರತ್ನ ಹಾಲಪ್ಪಗೌಡ, ಡಾ.ಎಂ.ಜಿ.ಆರ್.ಅರಸು ಇನ್ನಿತರರು ಉಪಸ್ಥಿತರಿದ್ದರು.

Translate »