ಆರು ಮಂದಿ ವೈದ್ಯರಿಗೆ ‘ವೈದ್ಯೋನಾರಾಯಣ ಪ್ರಶಸ್ತಿ’ ಪ್ರದಾನ
ಮೈಸೂರು

ಆರು ಮಂದಿ ವೈದ್ಯರಿಗೆ ‘ವೈದ್ಯೋನಾರಾಯಣ ಪ್ರಶಸ್ತಿ’ ಪ್ರದಾನ

July 1, 2018

ಮೈಸೂರು: ಮೈಸೂರಿನ ಚಾಮುಂಡಿಪುರಂನ ಬಾಲಬೋಧಿನಿ ಶಾಲೆ ಆವರಣದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಆರು ಮಂದಿ ವೈದ್ಯರಿಗೆ ಶನಿವಾರ `ವೈದ್ಯೋ ನಾರಾಯಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಜೊತೆಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ, ವೈದ್ಯಕೀಯ ಸೇವೆ ನೀಡಲಾಯಿತು.

ಅಪೂರ್ವ ಸ್ನೇಹ ಬಳಗ, ಅರಿವು ಸಂಸ್ಥೆ, ಕೆಎಂಪಿಕೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಹೃದಯ ತಜ್ಞ ಡಾ.ಎಂ.ಎನ್.ರವಿ, ಪಶುವೈದ್ಯ ಡಾ.ನಾಗರಾಜ್, ದಂತ ವೈದ್ಯ ಡಾ.ಅನಿಲ್ ಥಾಮಸ್, ಮಕ್ಕಳ ವೈದ್ಯೆ ಡಾ.ಶೈಲಜಾ, ಇಎನ್‍ಟಿ ವೈದ್ಯೆ ಡಾ.ಸಂಧ್ಯಾ ರವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೈದ್ಯರಿಗೆ ಡಾ.ಬಿ.ಸಿ.ರಾಯ್ ಮಾದರಿ: ಪ್ರಶಸ್ತಿ ಸ್ವೀಕರಿಸಿದ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮ ದಿನವಾದ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸುತ್ತೇವೆ. ಪ್ರತಿಯೊಬ್ಬ ವೈದ್ಯರಿಗೂ ಡಾ.ಬಿ.ಸಿ.ರಾಯ್ ಅವರ ಸೇವಾ ಮನೋಭಾವ ಮಾದರಿಯಾದುದು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸಿ ವೈದ್ಯಕೀಯ ಕ್ಷೇತ್ರದ ಮಹತ್ತರ ಬೆಳವಣಿಗೆಗೆ ಡಾ.ಬಿ.ಸಿ.ರಾಯ್ ಕಾರಣರಾದರು ಎಂದು ಸ್ಮರಿಸಿದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಆರೋಗ್ಯವಿದ್ದರೆ ಮಾತ್ರ ಸಾಧನೆ ಸಾಧ್ಯ ಎಂಬುದನ್ನು ಯುವ ಸಮುದಾಯ ಅರಿತುಕೊಳ್ಳಬೇಕು. ವೇದ-ಆಯುರ್ವೇದದಲ್ಲಿ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ಇದೆ. ಯೋಗ, ಧ್ಯಾನ, ವಾಯುವಿಹಾರ ಹಾಗೂ ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ. ಜೊತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದಲ್ಲಿ ಮಾನವ ಸಂಕುಲದಲ್ಲಿ ಆರೋಗ್ಯ ಮನೆ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.

ಉಚಿತ ಆರೋಗ್ಯ ತಪಾಸಣೆ: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡದಿಂದ ನಡೆದ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿರಿಯ ನಾಗರಿಕರೂ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ತಪಾಸಣೆ ಪ್ರಯೋಜನ ಪಡೆದುಕೊಂಡರು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ನಡೆದ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಹೃದಯ ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ಶಾಲಾ ಮಕ್ಕಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವೈದ್ಯರು ಉಪನ್ಯಾಸ ನೀಡಿದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ, ಸೌಭಾಗ್ಯಮೂರ್ತಿ, ಮಹರ್ಷಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟ್ ತೇಜಸ್ ಶಂಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಮುಖಂಡರಾದ ಜೋಗಿ ಮಂಜು, ಕುಮಾರ್ ದೀಕ್ಷಿತ್, ಅಜಯ್‍ಶಾಸ್ತ್ರಿ, ವಿನಯ್ ಕಣಗಾಲ್ ಮತ್ತಿತರರು ಹಾಜರಿದ್ದರು.

Translate »