ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ
ಮೈಸೂರು

ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ

January 21, 2019

ಮೈಸೂರು: ಮೈಸೂರಿನ ಸಿಸಿಬಿ ಪೊಲೀಸರು ಐವರು ಕುಖ್ಯಾತ ಅಂತಾ ರಾಜ್ಯ ಮನೆಗಳ್ಳರನ್ನು ಬಂಧಿಸಿ, 28 ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವುದಲ್ಲದೇ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರೆಲ್ಲರೂ ಮಧ್ಯಪ್ರದೇಶದ ಕುಖ್ಯಾತ ಮನೆಗಳ್ಳರಾಗಿದ್ದು, ಮಧ್ಯಪ್ರದೇಶ ಗುಡ್ಡಗಾಡು ಪ್ರದೇಶದಲ್ಲಿರುವ ಒಂದು ಊರಿನ ಬಹುತೇಕ ಜನರು ಅಪರಾಧ ಹಿನ್ನೆಲೆ ಯವರೇ ಆಗಿದ್ದಾರೆ. ಇವರನ್ನು ಹಿಡಿ ಯಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಯವರೂ ಆಗಿದ್ದು, ಈ ಖದೀಮರನ್ನು ಬಂಧಿಸಿದ ವೇಳೆ ಅವರನ್ನು ಮಧ್ಯಪ್ರದೇ ಶಕ್ಕೆ ಕರೆದೊಯ್ದು ಚಿನ್ನಾಭರಣ ವಶಪಡಿಸಿ ಕೊಳ್ಳುವ ಸವಾಲಿನ ಕೆಲಸವನ್ನು ನಮ್ಮ ಸಿಸಿಬಿ ಪೊಲೀಸರು ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ತಾಂಡಾ ತಾಲೂಕು ಬಗೌಲಿ ಗ್ರಾಮದ ಭರತ್ (27) ಈತನೇ ಈ ತಂಡದ ನಾಯಕನಾಗಿದ್ದಾನೆ. ಇವನ ಜೊತೆ ಕಾಲುದಾವರ್ ಅಲಿಯಾಸ್ ಕಾಲು ಅಲಿಯಾಸ್ ಕಾಲಿಯಾ (25), ಮಾನ್ ಸಿಂಗ್ ಅಲಿಯಾಸ್ ಮಾನ್ಯ ಅಲಿಯಾಸ್ ಮಾನ್ಯಸಿಂಗ್ (30), ಆಲಂ ಸಿಂಗ್ ಅಲಿ ಯಾಸ್ ನಾನ್ಕಾ ಅಲಿಯಾಸ್ ಆಲಂ (21) ಮತ್ತು ಪಾರ್‍ಸಿಂಗ್ (47) ಬಂಧಿತ ಅಂತಾ ರಾಜ್ಯ ಮನೆಗಳ್ಳರು. ಮೈಸೂರಿನ ನಿರ್ಬಂ ಧಿತ ಪ್ರದೇಶಗಳಾದ ಏರ್‍ಪೋರ್ಟ್, ಡಿಎಫ್ ಆರ್‍ಎಲ್ ಮತ್ತು ಆರ್‍ಎಂಪಿ ಕ್ವಾರ್ಟರ್ಸ್ ಮುಂತಾದೆಡೆ ನಡೆದ ಮನೆಗಳ್ಳತನ ಪ್ರಕರಣ ಗಳನ್ನು ಗಂಭೀರವಾಗಿ
ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.

ಈ ತಂಡವು ಗುಪ್ತ ಮಾಹಿತಿಯನ್ನು ಸಂಗ್ರಹಿಸಿ ಜ.9ರಂದು ದೇವರಾಜ ಮೊಹಲ್ಲಾದ ಹರ್ಷ ರಸ್ತೆಯಲ್ಲಿರುವ ಡಾ. ರಾಜ್‍ಕುಮಾರ್ ಉದ್ಯಾನವನದಲ್ಲಿ ಭರತ್ ಮತ್ತು ಕಾಲು ಅವರನ್ನು ವಿವಿಧ ಆಯುಧಗಳು ಮತ್ತು ಪರಿಕರಗಳೊಂದಿಗೆ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇವರುಗಳು ಇತರರೊಂದಿಗೆ ಸೇರಿ ಮೈಸೂರು ನಗರ ಮಾತ್ರವಲ್ಲದೇ ಶಿವಮೊಗ್ಗ, ಭದ್ರಾವತಿ, ಬೆಳ್ಳೂರು ಹಾಗೂ ತಮಿಳುನಾಡಿನಲ್ಲಿ ಮನೆಗಳ್ಳತನ ಮಾಡಿರುವ ಬಗ್ಗೆ ತಿಳಿದಿದೆ. ಇವರು ನೀಡಿದ ಸುಳಿವಿನ ಮೇರೆಗೆ ಜ.18 ರಂದು ಹೆಬ್ಬಾಳ್‍ನಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮಾನ್‍ಸಿಂಗ್, ಆಲಂಸಿಂಗ್ ಮತ್ತು ಪಾರ್‍ಸಿಂಗ್ ಅವರನ್ನು ಬಂಧಿಸಲಾಗಿದೆ. ಇವರುಗಳಿಂದ 28 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು, ನಗದು ಹಣ ಹಾಗೂ ಮೊಬೈಲ್ ಫೋನ್‍ಗಳು, ಕೃತ್ಯಕ್ಕೆ ಬಳಸುತ್ತಿದ್ದ ಟಪಾರಿಯಾ ಕಟ್ಟರ್, ಕಬ್ಬಿಣದ ರಾಡು, ರಿಂಚ್ ಸ್ಪ್ಯಾನರ್, ಸ್ಕ್ರೂ ಡ್ರೈವರ್ ಇತ್ಯಾದಿ ಆಯುಧಗಳನ್ನು ಮಧ್ಯಪ್ರದೇಶಕ್ಕೆ ತೆರಳಿ ವಶಪಡಿಸಿಕೊಳ್ಳಲಾಗಿದೆ.

ಇವರುಗಳು ಮೈಸೂರಿನ ಸರಸ್ವತಿಪುರಂ ಠಾಣಾ ವ್ಯಾಪ್ತಿಯ 2, ನಜರ್‍ಬಾದ್ ಠಾಣಾ ವ್ಯಾಪ್ತಿಯ 7, ಆಲನಹಳ್ಳಿ ಮತ್ತು ಉದಯಗಿರಿ ಠಾಣಾ ವ್ಯಾಪ್ತಿಯ ತಲಾ 1, ಅಶೋಕಪುರಂ ವ್ಯಾಪ್ತಿಯ 2, ಶಿವಮೊಗ್ಗದ 4, ಭದ್ರಾವತಿಯ 4, ಬೆಳ್ಳೂರಿನ 3, ತಮಿಳುನಾಡಿನ 4 ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಈ ಖದೀಮರಲ್ಲಿ ಭರತ್ ಎಂಬಾತ 2015ರಲ್ಲಿ ಆಂಧ್ರಪ್ರದೇಶದ ಚಿತ್ತೂರು, ಕಡಪ, ನೆಲ್ಲೂರು ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದ್ದು, ಜಾಮೀನಿನ ಮೇಲೆ ಹೊರ ಬಂದ ನಂತರ ಪ್ರತ್ಯೇಕ ತಂಡ ಕಟ್ಟಿಕೊಂಡು ಕಳ್ಳತನದಲ್ಲಿ ತೊಡಗಿದ್ದನೆಂಬುದು ತಿಳಿದುಬಂದಿದೆ. ಈ ಆರೋಪಿಗಳು ಬಸ್ ಮೂಲಕ ಮಧ್ಯಪ್ರದೇಶದಿಂದ ಮೈಸೂರಿಗೆ ಬಂದು ಹಗಲಿನ ವೇಳೆ ಹ್ಯಾಂಗಿಂಗ್ ಲಾಕ್ ಮಾಡಿರುವ ಮನೆಗಳು ಹಾಗೂ ಹಲವು ದಿನಗಳಿಂದ ಮನೆಯ ಮುಂದೆ ದಿನಪತ್ರಿಕೆಗಳು ಬಿದ್ದಿರುವ ಮನೆಗಳನ್ನು ಗುರ್ತಿಸಿಕೊಂಡು ಕತ್ತಲಾಗುತ್ತಿದ್ದಂತೆಯೇ ಮನೆಗಳ ಬಳಿ ಇರುವ ಪೊದೆಗಳಲ್ಲಿ ಅವಿತುಕೊಂಡು, ಅಕ್ಕಪಕ್ಕದವರು ನಿದ್ರೆಗೆ ಜಾರಿದ ನಂತರ ಮಧ್ಯರಾತ್ರಿಯಲ್ಲಿ ಮನೆಗಳ ಬೀಗ ಮುರಿದು ಒಳ ನುಗ್ಗಿ, ಕಳ್ಳತನ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಕಿರಣ್‍ಕುಮಾರ್, ಟಿ.ಅಶೋಕ್ ಕುಮಾರ್, ಎ.ಮಲ್ಲೇಶ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ಅಸ್ಗರ್ ಖಾನ್, ಎಂ.ಆರ್.ಗಣೇಶ್, ಜೋಸೆಫ್ ನರ್ಹೋನಾ, ಲಕ್ಷ್ಮೀಕಾಂತ, ಯಾಕೂಬ್ ಷರೀಫ್, ಚಿಕ್ಕಣ್ಣ, ರಾಮಸ್ವಾಮಿ, ಚಂದ್ರಶೇಖರ್, ನಿರಂಜನ್, ಪ್ರಕಾಶ್, ಆನಂದ್, ಧನಂಜಯ, ಶ್ರೀನಿವಾಸ್, ಶಿವಕುಮಾರ್, ಗೌತಮ್, ಸುನೀಲ್, ಸೋಮ ಮತ್ತು ಸೋಮಾಚಾರಿ ಅವರುಗಳು ಭಾಗವಹಿಸಿದ್ದರು

Translate »