ಕಾಂಗ್ರೆಸ್ ಶಾಸಕರ ಮಾರಾಮಾರಿ
ಮೈಸೂರು

ಕಾಂಗ್ರೆಸ್ ಶಾಸಕರ ಮಾರಾಮಾರಿ

January 21, 2019

ಬೆಂಗಳೂರು: ಬಿಡದಿ ಬಳಿ ಇರುವ ಈಗಲ್ಟನ್ ರೆಸಾರ್ಟ್‍ನಲ್ಲಿ ಕಳೆದ ಮಧ್ಯರಾತ್ರಿ ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿದ್ದು, ಆನಂದ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟ್‍ಗೆ ಕರೆ ದೊಯ್ಯಲಾಗಿತ್ತು. ಈಗ ಈ ಶಾಸಕರು ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ರಾತ್ರಿ 2.30ರ ಸುಮಾರಿನಲ್ಲಿ ಕಂಪ್ಲಿ ಶಾಸಕ ಗಣೇಶ್, ಹೊಸಕೋಟೆ ಶಾಸಕ ಆನಂದ್ ಸಿಂಗ್ ಮತ್ತು ಭೀಮಾನಾಯಕ್ ಅವರುಗಳು ರೆಸಾರ್ಟ್‍ನ ಬಾರ್ ಕೌಂಟರ್‍ನಲ್ಲಿ ಮದ್ಯಪಾನ ಸೇವಿಸುತ್ತಿದ್ದ ವೇಳೆ ಮೊದಲಿಗೆ ಆನಂದ್ ಸಿಂಗ್, ಗಣೇಶ್ ಮತ್ತು ಭೀಮಾನಾಯಕ್ ನಡುವೆ ಬಳ್ಳಾರಿ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು ಎಂದು ಹೇಳಲಾಗಿದೆ.

ಈ ವೇಳೆ ಗಣೇಶ್ ಅವರು ಆನಂದ್ ಸಿಂಗ್ ಅವ ರನ್ನುದ್ದೇಶಿಸಿ, ನಾನು ಬಿಜೆಪಿಯವರೊಂದಿಗೆ ಆಪರೇ ಷನ್ ಕಮಲ ಮೂಲಕ ಹೋಗಿದ್ದೇನೆ ಎಂದು ನೀನೇ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದೀಯೆ ಎಂದು ಹರಿಹಾಯ್ದರು ಎಂದು ಹೇಳಲಾಗಿದೆ. ಅಲ್ಲದೇ ನಾನು ಬಿಜೆಪಿಗೆ ಹೋಗಿದ್ದರೆ ಮಂತ್ರಿಯಾಗುತ್ತಿದ್ದೆ. ಅದನ್ನು ನೀನೇ ತಪ್ಪಿಸಿದ್ದೀಯೆ ಎಂದು ಕಿರುಚಾಡಿದ್ದಾರೆ. ಈ ಸಂದರ್ಭದಲ್ಲಿ ಆನಂದ್ ಸಿಂಗ್ ಅವರೂ ಕೂಡ ಧ್ವನಿ ಏರಿಸಿದ್ದು, ಗಣೇಶ್ ಹಠಾತ್ತನೇ ಮದ್ಯದ ಬಾಟಲಿ ಯನ್ನು ಟೇಬಲ್ ಮೇಲೆ ಒಡೆದಿದ್ದಾರೆ. ಆಗ ಬಾಟಲಿಯ ಚೂರುಗಳು ನೆಲದಲ್ಲಿ ಬಿದ್ದಿವೆ. ಕೈಯಲ್ಲಿ ಬಾಟಲಿನ ಒಡೆದ ಒಂದು ಭಾಗವನ್ನು ಹಿಡಿದುಕೊಂಡು ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಲು ಗಣೇಶ್ ಮುಂದಾ ದಾಗ ಇಬ್ಬರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಆನಂದ್ ಸಿಂಗ್ ಕೆಳಗೆ ಬಿದ್ದಿದ್ದು, ಅವರ ಕಣ್ಣಿನ ಮೇಲ್ಭಾಗಕ್ಕೆ ಬಾಟಲಿಯ ಗಾಜಿನ ಚೂರುಗಳು ಚುಚ್ಚಿವೆ ಎಂದು ಹೇಳಲಾಗಿದೆ.

ಮತ್ತೊಂದು ಮೂಲದ ಪ್ರಕಾರ ಗಣೇಶ್ ಅವರು ಬಾಟಲಿ ಯಲ್ಲಿ ಆನಂದ್ ಸಿಂಗ್ ತಲೆಯ ಮೇಲೆ ಹಲ್ಲೆ ನಡೆಸಿ ದರು ಎಂದು ಹೇಳಲಾಗಿದ್ದು,
ಈ ಮಾರಾಮಾರಿಯಲ್ಲಿ ಆನಂದ್ ಸಿಂಗ್ ಕಣ್ಣು, ಪಕ್ಕೆ ಭಾಗ ಹಾಗೂ ಎದೆಗೆ ಪೆಟ್ಟು ಬಿದ್ದಿದೆ. ಈ ಸಂದರ್ಭದಲ್ಲಿ ಇತರ ಶಾಸಕರು ಬಂದು ಜಗಳ ಬಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳಗಿನ ಜಾವ ಆನಂದ್ ಸಿಂಗ್ ಅವರಿಗೆ ಎದೆ ನೋವು ಹೆಚ್ಚಾದ ಕಾರಣ ಅವರನ್ನು ಕೆಲ ಶಾಸಕರು ಮತ್ತು ರೆಸಾರ್ಟ್ ಸಿಬ್ಬಂದಿ ಶೇಷಾದ್ರಿ ಪುರಂನಲ್ಲಿ ಅಪೋಲೋ ಆಸ್ಪತ್ರೆಗೆ ಬೆಳಿಗ್ಗೆ 7 ಗಂಟೆ ವೇಳೆಗೆ ದಾಖಲು ಮಾಡಿದ್ದಾರೆ.

ವೈದ್ಯರು ಆನಂದ್ ಸಿಂಗ್ ಅವರಿಗೆ ಸಿಟಿ ಸ್ಕ್ಯಾನ್, ಎಕ್ಸರೇ ತೆಗೆದಿದ್ದು, ಚಿಕಿತ್ಸೆ ನೀಡಿ ದ್ದಾರೆ. ಅವರಿಗೆ 12 ಹೊಲಿಗೆಗಳು ಹಾಕಲಾಗಿದ್ದು, ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆ ಆಡಳಿತದಿಂದ ಮಾಹಿತಿ ಪಡೆದ ಶೇಷಾದ್ರಿಪುರಂ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿವರಗಳನ್ನು ಪಡೆದಿದ್ದಾರೆ. ಅಲ್ಲದೇ ರಾಮನಗರ ಜಿಲ್ಲಾ ಎಸ್ಪಿಯವರಿಗೆ ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಆಸ್ಪತ್ರೆ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಮುಂಬೈನಲ್ಲಿದ್ದ ಅವರ ಕುಟುಂಬದವರು ಬೆಂಗಳೂರಿನ ಆಸ್ಪತ್ರೆಗೆ ಆಗಮಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿರುವ ಶಾಸಕ ಗಣೇಶ್ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಯೋಗಕ್ಷೇಮ ವಿಚಾರಿಸಿದ್ದಾರೆ.

ಕಾಂಗ್ರೆಸ್‍ನವರಿಂದ ರಾಜ್ಯದ ಶಾಸಕರ ಮಾನ-ಮರ್ಯಾದೆ ಹರಾಜು
ಬೆಂಗಳೂರು: ಕಾಂಗ್ರೆಸ್‍ನವರು ದೇಶದಲ್ಲಿ ಕರ್ನಾ ಟಕ ಶಾಸಕರ ಮಾನ-ಮರ್ಯಾದೆ ಹರಾಜು ಹಾಕಿ ದ್ದಾರೆ ಎಂದು ಕಿಡಿಕಾರಿರುವ ಮಾಜಿ ಉಪ ಮುಖ್ಯ ಮಂತ್ರಿ ಆರ್.ಅಶೋಕ್ ಅವರು, ಬಿಜೆಪಿಯ ನೈತಿಕತೆ, ಮರ್ಯಾದೆ ಬಗ್ಗೆ ಪ್ರಶ್ನೆ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಸಿದ್ದ ರಾಮಯ್ಯ ಅವರ ಕಾಂಗ್ರೆಸ್‍ನ ಮರ್ಯಾದೆ ಅಪೋಲೋ ಆಸ್ಪತ್ರೆಯಲ್ಲಿದೆಯೇ? ಅಥವಾ ರೆಸಾರ್ಟ್‍ನಲ್ಲಿದೆಯೇ? ಎಂಬುದನ್ನು ಹೇಳಲಿ ಎಂದು ವ್ಯಂಗ್ಯವಾಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆಯಲ್ಲಿ ಮದ್ಯದ ಬಾಟಲಿಯಿಂದ ಎದೆಗೆ ಚುಚ್ಚಿದ್ದರಿಂದ ಎದೆ ನೋವು ಕಾಣಿಸಿ ಕೊಂಡಿರಬೇಕು ಎಂದರು. ನಾನೂ ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೂ ನಿಯಮಗಳೇನು ಎಂಬುದು ಗೊತ್ತು. ಮಾಹಿತಿ ಹ್ಯಾಗೆ ಬರುತ್ತದೆ ಎಂಬುದೂ ಗೊತ್ತಿದೆ. ಆನಂದ್ ಸಿಂಗ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಹೇಗೆ ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲಿ ಅಥವಾ ಆಸ್ಪತ್ರೆಯ ವೈದ್ಯರಿಂದ ಅಧಿಕೃತ ಪ್ರಕಟಣೆ ಹೊರಡಿಸಲಿ ಎಂದು ಸವಾಲು ಹಾಕಿದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು. ಮಾರಕಾಸ್ತ್ರಗಳು ಹಾಗೂ ಬಾಟಲಿಗಳಿಂದ ಹಲ್ಲೆ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಶೇಷಾದ್ರಿಪುರಂ ಪೊಲೀಸರಿಂದ ರಾಮನಗರ ಎಸ್ಪಿಗೆ ಮಾಹಿತಿ ರವಾನೆ
ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್ ರಿಂದ ಹಲ್ಲೆಗೊಳಗಾಗಿ ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಶೇಷಾದ್ರಿಪುರಂ ಪೊಲೀಸರು ರಾಮನಗರ ಎಸ್ಪಿ ಅವರಿಗೆ ಅಧಿಕೃತ ಮಾಹಿತಿ ಒದಗಿಸಿದ್ದಾರೆ. ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಆಸ್ಪತ್ರೆಯ ಆಡಳಿತ ಮಂಡಳಿಯು ಶೇಷಾದ್ರಿಪುರಂ ಪೊಲೀಸರಿಗೆ ಎಂಎಲ್‍ಆರ್ (ಮೆಡಿಕಲ್ ಲೀಗಲ್ ರಿಪೋರ್ಟ್) ರವಾನಿಸಿದೆ. ಇದರ ಆಧಾರದ ಮೇರೆಗೆ ಶೇಷಾದ್ರಿ ಪುರಂ ಪೊಲೀಸರು ರಾಮನಗರ ಎಸ್ಪಿ ಅವರಿಗೆ ಅಧಿ ಕೃತ ಮಾಹಿತಿ ರವಾನಿಸಿದ್ದಾರೆ.

ಮತ್ತೊಂದೆಡೆ ಆಸ್ಪತ್ರೆಯ ವೈದ್ಯ ಡಾ.ಯತೀಶ್ ಅವರು ಮಾಧ್ಯಮಗಳ ಜೊತೆ ಮಾತ ನಾಡಿ, ಆನಂದ್ ಸಿಂಗ್ ಅವರು ಇಂದು ಬೆಳಿಗ್ಗೆ 7.05ರ ವೇಳೆಗೆ ಎದೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಕಣ್ಣಿನ ಸುತ್ತ ಕಪ್ಪಾಗಿದೆ. ಅವರಿಗೆ ಸಿಟಿ ಸ್ಕ್ಯಾನ್ ಮತ್ತು ಎಕ್ಸರೇ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಇದೆ. ಆದರೂ ತಲೆಗೆ ಪೆಟ್ಟಾಗಿರುವುದರಿಂದ 24 ಗಂಟೆಗಳ ಕಾಲ ನಿಗಾದಲ್ಲಿ ಇಡಲಾಗಿದೆ ಎಂದಿದ್ದಾರೆ.

ಗಣೇಶ್‍ಗೆ ಸಿದ್ದರಾಮಯ್ಯ ತರಾಟೆ
ಬೆಂಗಳೂರು: ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದು ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿ ದ್ದಂತೆಯೇ ಕೊಪ್ಪಳದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್‍ನಲ್ಲಿ ಇಂದು ರಾತ್ರಿ ಈಗಲ್ಟನ್ ರೆಸಾರ್ಟ್‍ಗೆ ಬಂದಿಳಿದರು. ಅವರು ರೆಸಾರ್ಟ್‍ನಲ್ಲಿರುವ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿರುವ ವೇಳೆಗಾಗಲೇ ಅಲ್ಲಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರುಗಳು ಸಿದ್ದರಾಮಯ್ಯ ಜೊತೆ ಸೇರಿ ಶಾಸಕರ ಸಭೆ ನಡೆಸಿ, ಕಂಪ್ಲಿ ಗಣೇಶ್ ಮತ್ತು ಇತರ ಶಾಸಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ರೆಸಾರ್ಟ್‍ನ ರೂಂಗಳ ಬಳಿ ಬರುತ್ತಿದ್ದಂತೆಯೇ ಕೆಂಡಾಮಂಡಲವಾಗಿದ್ದ ಸಿದ್ದರಾಮಯ್ಯ, ಎಲ್ಲಿ ಅವನು ಗಣೇಶ...’ ಎಂದು ಕೂಗಾಡುತ್ತಾ, ಇತರ ಶಾಸಕರನ್ನು ನೋಡಿ ಗಲಾಟೆ ಆಗುವಾಗ ನೀವೇನು ಮಾಡುತ್ತಿದ್ದೀರಿ ಎಂದು ಗರ್ಜಿಸಿದರು ಎನ್ನಲಾಗಿದೆ. ಶಾಸಕರ ಸಭೆ ಸೇರಿಸಿದ ಸಿದ್ದರಾಮಯ್ಯ, ಕಂಪ್ಲಿ ಗಣೇಶ್ ಅವರನ್ನುದ್ದೇಶಿಸಿ ನಿನಗೇನ್ ಬುದ್ಧಿ ಇದೆಯೇ? ಚಿಕ್ಕ ಮಕ್ಕಳ ಥರ ಆಡಿದ್ದೀರಲ್ಲಾ... ಈ ಸಂದರ್ಭದಲ್ಲಿ ಇಂತ ಹೊಡೆದಾಟ ಬೇಕಾಗಿತ್ತಾ? ನೀನು ಶಾಸಕನಾಗಿದ್ದೀಯೆ, ಸ್ವಲ್ಪನಾ ದರೂ ಮಾನ-ಮರ್ಯಾದೆ ಇದೆಯಾ? ಗೌರವ ಉಳಿಸ್ಕೋ ಬಾರ್ದಾ? ಎಂದು ಒಂದೇ ಸಮನೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಆಗ ತಲೆ ಬಗ್ಗಿಸಿಕೊಂಡಿದ್ದ ಶಾಸಕ ಗಣೇಶ್,ನಾನು ಆನಂದ್ ಸಿಂಗ್‍ನನ್ನು ಹೊಡೆದಿಲ್ಲ. ಸುಮ್ಮನೆ ತಳ್ಳಿದೆ ಅಷ್ಟೇ’ ಎಂದು ಹೇಳುತ್ತಾ ತಪ್ಪಾಗಿದೆ, ಕ್ಷಮಿಸಿ ಎಂದು ಹೇಳಿದರೆನ್ನಲಾಗಿದೆ. ಶಾಸಕ ಗಣೇಶ್‍ನನ್ನು ಮಾತ್ರವಲ್ಲದೇ ಎಲ್ಲಾ ಶಾಸಕರನ್ನೂ ಸಿದ್ದರಾಮಯ್ಯ,
ಡಾ. ಜಿ.ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಮೊಬೈಲ್ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಡಿ.ಕೆ. ಬ್ರದರ್ಸ್
ಬೆಂಗಳೂರು: ಈಗಲ್ಟನ್ ರೆಸಾರ್ಟ್‍ನಲ್ಲಿ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿರುವ ಪ್ರಕರಣವನ್ನು ಮುಚ್ಚಿ ಹಾಕಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಪ್ರಯತ್ನಪಟ್ಟರು. ಮೊದಲು ಸುದ್ದಿ ಗಾರರ ಜೊತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಆನಂದ್ ಸಿಂಗ್ ರಾತ್ರಿ ಮದುವೆಗೆ ತೆರಳಿ ದ್ದಾರೆ. ಯಾವುದೇ ಗಲಾಟೆ ಆಗಿಲ್ಲ. ರೆಸಾರ್ಟ್‍ನಲ್ಲಿ ಗಲಾಟೆ ಆಗಿದೆ. ಆನಂದ್ ಸಿಂಗ್‍ಗೆ ಪೆಟ್ಟು ಬಿದ್ದಿದೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಅವರೇ ನಿಮ್ಮ ಮುಂದೆ ಬರಲಿದ್ದಾರೆ, ನೋಡಿ. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹರಡಿಸುವುದು ಬೇಡ ಎಂದರು.
ಮತ್ತೊಂದೆಡೆ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಆನಂದ್ ಸಿಂಗ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ರೆಸಾರ್ಟ್‍ನಲ್ಲಿ ಯಾವುದೇ ರೀತಿಯ ಗಲಾಟೆಯೂ ಆಗಿಲ್ಲ. ಅವರ ತಲೆಗೆ ಯಾವುದೇ ಗಾಯ ಆಗಿಲ್ಲ ಎಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಆದರೆ ಸಿದ್ದರಾಮಯ್ಯ ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ರೆಸಾರ್ಟ್‍ನಲ್ಲಿ ಗಲಾಟೆ ಆಗಿದೆ ಎಂದು ಹೇಳಿಕೆ ನೀಡಿದ ನಂತರ ಡಿ.ಕೆ. ಬ್ರದರ್ಸ್ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲೇ ಇಲ್ಲ.

Translate »