ಪೈಲಟ್ ಇಲ್ಲದೆ ವಿಮಾನ ಹಾರಬಹುದೆ!?
ಮೈಸೂರು

ಪೈಲಟ್ ಇಲ್ಲದೆ ವಿಮಾನ ಹಾರಬಹುದೆ!?

April 25, 2019

ಮೈಸೂರು: ವಿಮಾನ ದಲ್ಲಿ ಬ್ಲಾಕ್ ಬಾಕ್ಸ್ ಏಕೆ ಇಟ್ಟಿರುತ್ತಾರೆ. ಅದರ ಕೆಲಸವೇನು?, ವಿಮಾನಕ್ಕೆ ಯಾವ ಲೋಹ ಬಳಸುತ್ತಾರೆ?, ಪೈಲಟ್ ಇಲ್ಲದೇ ವಿಮಾನ ಹಾರಾಟ ಮಾಡಲು ಆಗುವುದಿ ಲ್ಲವಾ? ಏಕೆ?, ಈಗಾಗಲೇ ಹಾರುವ ಕಾರನ್ನು ತಯಾರಿಸಲಾಗಿದ್ದು, ಜನದಟ್ಟಣೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲದೆ?, ಕ್ರಿ.ಪೂ.ದಲ್ಲೇ ಭಾರತದಲ್ಲಿ ವಿಮಾನ ಬಳಕೆ ಮಾಡಲಾಗಿದೆ ಎಂಬ ಪ್ರತೀತಿ ಇದೆ. ಅದು ನಿಜವೇ?, ಎಂಬ ಚಿಣ್ಣರ ಮುಗ್ಧ ಪ್ರಶ್ನೆಗಳು ಅನಾವರಣಗೊಂಡವು.

ರಂಗಾಯಣದ ಚಿಣ್ಣರ ಮೇಳದಲ್ಲಿ ಬುಧವಾರ ಆಯೋಜಿಸಿದ್ದ ಚಿಣ್ಣರೊಂ ದಿಗೆ ಸಂವಾದದಲ್ಲಿ ವೈಮಾನಿಕ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಚಿಣ್ಣರು, ವಿಮಾನದ ಬಗ್ಗೆ ತಮಗೆ ಅನಿಸಿದ್ದ ಪ್ರಶ್ನೆ ಗಳ ಸುರಿಮಳೆಗೈದರು.
ಈ ವೇಳೆ ಸುಧೀಂದ್ರ ಹಾಲ್ದೊಡ್ಡೇರಿ ಅವರು, ಮಕ್ಕಳಿಗೆ ಅರ್ಥವಾಗುವಂತೆ ಸುಲಲಿತ ಭಾಷೆಯಲ್ಲೇ ರಾಕೆಟ್ ಉಡಾ ವಣೆ, ಬಾಹ್ಯಾಕಾಶ ಹಾಗೂ ವೈಮಾನಿಕ ಕ್ಷೇತ್ರ, ಭೂಮಿ, ಮಂಗಳ ಗ್ರಹ ಸೇರಿದಂತೆ ಸೂರ್ಯನ ಕಾರ್ಯ-ಚಟುವಟಿಕೆಗಳ ಕುರಿತು ವಿಸ್ತಾರವಾಗಿ ವಿವರಿಸಿದರು.

ಪ್ರಸ್ತುತ ಭೂಮಿ ಮೇಲೆ ಮಾಡಿರುವ ಸಂಪರ್ಕ ಕ್ರಾಂತಿಯೆಲ್ಲಾ ಬಾಹ್ಯಾಕಾಶ ಸಂಶೋಧನೆಯಿಂದ ಆಗಿದೆ. ಟಿ.ವಿ, ಮೊಬೈಲ್, ಇಂಟರ್‍ನೆಟ್ ಮತ್ತಿತರೆ ಸಂಪರ್ಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ-ಕಾರ್ಯಕ್ಕೆ ಸ್ಯಾಟಲೈಟ್‍ಗಳು ಮುಖ್ಯ ಕಾರಣ. ನಾವು ರಾಕೆಟನ್ನು ನಿರ್ದಿಷ್ಟ ವೇಗದಲ್ಲಿ ಉಡಾಯಿಸಿದರೆ ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸುತ್ತದೆ. ನಂತರ ಅದು ಭೂಮಿ ಸುತ್ತುವ ವೇಗದಲ್ಲಿ ಸುತ್ತಿ ನಮಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ರಷ್ಯಾ ಮೊದಲ ಬಾರಿಗೆ 1957ರಲ್ಲಿ ಸ್ಪುಟ್ನಿಕ್ ಉಪಗ್ರಹವನ್ನು ಉಡಾವಣೆ ಮಾಡಿತು. ನಂತರದಲ್ಲಿ ಅಮೆರಿಕಾ, ಚೀನಾ, ಜಪಾನ್ ದೇಶಗಳು ಉಡಾವಣೆ ಮಾಡಿ ಯಶಸ್ವಿಯಾದವು. ಸಂಪರ್ಕ ಮತ್ತು ಭೂಮಿ ವೀಕ್ಷಕ ಉಪಗ್ರಹಗಳಿಂದ ಹೆಚ್ಚು ಅನುಕೂಲವಾಗಿವೆ. ಭೂಮಿ ವೀಕ್ಷಕ ಉಪ ಗ್ರಹದಿಂದ ಭೂಮಿಯ ಮೇಲೆ ಏನಾಗು ತ್ತಿದೆ ಹಾಗೂ ಭೂಮಿಯ ಒಳಭಾಗದಲ್ಲಿ ಏನಿದೆ ಎಂಬುದನ್ನೂ ತಿಳಿಯಬಹುದಾ ಗಿದೆ ಎಂದು ತಿಳಿಸಿದರು.

ಉಪಗ್ರಹವನ್ನು ಒಂದು ರಾಕೆಟ್ ಮೂಲಕ ನಿರ್ದಿಷ್ಟ ಕಕ್ಷೆಗೆ ಸೇರಿಸುವುದು ತುಂಬಾ ಕಷ್ಟದ ಕೆಲಸ. ಆದರೆ, ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ರಷ್ಯಾ, ಅಮೇರಿಕಾ, ಚೀನಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Translate »