ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ
ಮೈಸೂರು

ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ

December 18, 2018

ಮೈಸೂರು: ಕಬ್ಬಿಣದ ಬ್ಯಾರಿಕೇಡ್ ಗಳನ್ನು ಮೂಲೆಗೆ ತಳ್ಳಿ ಸಿಮೆಂಟ್ ಕಾಂಕ್ರೀಟ್ ರಸ್ತೆ ವಿಭಜಕ ಅಳವಡಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲೇ ಸುಧಾರಣೆ ತಂದು ಹೂಕುಂಡ ರಸ್ತೆ ವಿಭಜಕ ರೂಪಿಸಿದೆ. ಅಲ್ಲಿ ಹೂ ಗಿಡಗಳನ್ನು ಬೆಳೆಸಿ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ.

ರಾಜಮಾರ್ಗವೂ ಆದ ಜಂಬೂ ಸವಾರಿ ಮಾರ್ಗದ ಪ್ರಮುಖ ವೃತ್ತ ಹಾಗೂ ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ವಿಭಜಕಗಳಲ್ಲೇ ಹೂ ಗಿಡಗಳನ್ನು ಬೆಳೆಸಲು ಅನು ವಾಗುವಂತಹ ಸಿಮೆಂಟ್ ಕಾಂಕ್ರೀಟ್ ಪಾಟ್ ವ್ಯವಸ್ಥೆ ಮಾಡಿ ಅದರಲ್ಲಿ ಮಣ್ಣು-ಗೊಬ್ಬರ ತುಂಬಿ ಹೂ ಗಿಡಗಳನ್ನು ನೆಡಲು ನಗರಪಾಲಿಕೆ ಹಾಗೂ ತೋಟ ಗಾರಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಮೊದಲು ರಸ್ತೆ ಮಧ್ಯೆ ಕೇವಲ ಸಿಮೆಂಟ್ ಕಾಂಕ್ರೀಟ್ ಮೀಡಿಯನ್‍ಗಳನ್ನು ಮಾತ್ರ ಅಳವಡಿಸ ಲಾಗುತ್ತಿತ್ತು. ಈಗ ಅವುಗಳ ಮೇಲೆ ಮತ್ತೊಂದು ಹಂತದ ಕಾಂಕ್ರೀಟ್‍ನಂತಹ ತೊಟ್ಟಿಯನ್ನು ಜೋಡಿಸಿ ಅದಕ್ಕೆ ಹಸಿರು ಮತ್ತು ಬಿಳಿ ಬಣ್ಣ ಬಳಿದಿರುವುದರಿಂದ ಮೈಸೂರಿನ ರಸ್ತೆಗಳು ಹಸಿರೀಕರಣದಿಂದ ಕಂಗೊಳಿಸಲಿವೆ.

ಈಗ ಸದ್ಯಕ್ಕೆ ಹಾರ್ಡಿಂಜ್ ವೃತ್ತ ಮತ್ತು ಬಂಬೂ ಬಜಾರ್ ಬಳಿ ಸಯ್ಯಾಜಿರಾವ್ ರಸ್ತೆಯ ಕಿವುಡು-ಮೂಗರ ಶಾಲೆ ಸರ್ಕಲ್ ಬಳಿ ಕಾಂಕ್ರೀಟ್ ವಿಭಜಕ ಮತ್ತು ಹೂಪಾಟ್‍ಗಳನ್ನು ಪ್ರಾಯೋಗಿಕವಾಗಿ ಅಳವಡಿ ಸಲಾಗಿದೆ. ಅವುಗಳಿಗೆ ತೋಟಗಾರಿಕೆ ಇಲಾಖೆಯಿಂದ ದನಕರುಗಳು ತಿನ್ನದ ಗಣಗಲೆ, ಹಿಪೋರ್ಟಿಯಾದಂತಹ ಹೂ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.

ಇದರಿಂದ ನಗರದ ಸೌಂದರ್ಯ ಹೆಚ್ಚುವ ಜತೆಗೆ ನಿಸರ್ಗವನ್ನು ಉಳಿಸಿಕೊಳ್ಳುವ ಪ್ರಯತ್ನ ಇದಾಗಿದ್ದು, ಪಾಲಿಕೆ ಕೌನ್ಸಿಲ್‍ನಲ್ಲಿ ಅನುಮೋದನೆಯಾದಲ್ಲಿ ಮುಂದೆ ಎಲ್ಲೆಡೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ನಾಗರಾಜು ತಿಳಿಸಿದ್ದಾರೆ.
ರಾಜಮಾರ್ಗದ ಹಾರ್ಡಿಂಜ್ ಸರ್ಕಲ್‍ನಿಂದ ಹೈವೇ ಸರ್ಕಲ್ ಮತ್ತು ಎಲ್‍ಐಸಿ ಸರ್ಕಲ್‍ವರೆಗೆ ಅಳವಡಿಸುವ ಕಾಂಕ್ರೀಟ್ ರಸ್ತೆ ವಿಭಜಕಗಳನ್ನು ದಸರಾ ಮಹೋತ್ಸವದ ವೇಳೆ ತೆರವು ಮಾಡಿ, ವಿಜಯದಶಮಿ ಮೆರವಣಿಗೆ ಮುಗಿದ ಬಳಿಕ ಮತ್ತೆ ಇರಿಸಲಾಗುವುದು ಎಂದೂ ತಿಳಿಸಿದರು.

Translate »