ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ಭತ್ತದ ಗದ್ದೆಗೆ ಮೂರು ಕಾಡಾನೆಗಳು ದಾಳಿ ನಡೆಸಿ ಸುಮಾರು 1.5 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ನಾಶ ಮಾಡಿದೆ.
ಗ್ರಾಮದ ಕೆ.ಪಿ. ದಿನೇಶ್ ಎಂಬುವರ ಗದ್ದೆಗೆ ಭಾನುವಾರ ರಾತ್ರಿ 10.30ಕ್ಕೆ ಆನೆಗಳು ದಾಳಿ ನಡೆಸಿ ನಷ್ಟ ಪಡಿಸುತ್ತಿದ್ದ ಸಂದರ್ಭ ಅವುಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಅವರೊಂದಿಗೆ ಕಾಡಿಗಟ್ಟಲಾಯಿತು ಎಂದು ಕೃಷಿಕ ದಿನೇಶ್ ಹೇಳಿದರು. ಈಗಾಗಲೇ ಕಾಡಿನಲ್ಲಿ ಆನೆಗಳಿಗೆ ಕುಡಿ ಯಲು ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಆಹಾರದ ಕೊರತೆಯೂ ಇರುವುದರಿಂದ ಕಾಡಾನೆಗಳು ನಾಡಿನತ್ತ ಧಾವಿಸುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಳೆಯ ಅನಾಹುತದ ನಡುವೆಯೂ ಎರಡನೇ ಭಾರಿ ಬಿತ್ತಿದ್ದ ಫಸಲು ಇದೀಗ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಭತ್ತದ ಫಸಲು ನಷ್ಟವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.