ಸರ್ವೆ ಕಾರ್ಯ ತ್ವರಿತಗೊಳಿಸಲು ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಮನವಿ
ಮೈಸೂರು: ಸ್ಥಗಿತ ಗೊಂಡಿದ್ದ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ನೀಡಿರುವು ದನ್ನು ಸ್ವಾಗತಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್, ಈ ಸರ್ವೆ ಕಾರ್ಯವನ್ನು ತ್ವರಿತ ಗೊಳಿಸಿ, ಸಂವಿಧಾನ ತಿದ್ದುಪಡಿಗಾಗಿ ಕೇಂದ್ರಕ್ಕೆ ಕಳುಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದೆ.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕೊಡವರ ಸುಭದ್ರ ನಾಳೆ ಗಾಗಿ ಈ ಉದ್ದೇಶಿತ ಕುಲಶಾಸ್ತ್ರ ಅಧ್ಯಯನಕ್ಕೆ ಕೌನ್ಸಿಲ್ ಸಂಪೂರ್ಣ ಸಹಕಾರ ನೀಡಲಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕಾಯ್ದೆಗೆ ಬದ್ಧವಾಗಿ ರೂಪಿಸುವ ಸಕಾರಾತ್ಮಕ ಕಲ್ಯಾಣ ರಾಜ್ಯ ವ್ಯವಸ್ಥೆ ಮತ್ತು ಸಬಲೀಕರಣ ಪ್ರಕ್ರಿಯೆ ಪರಿಧಿಯೊಳಗೆ ಕೊಡವ ಬುಡಕಟ್ಟು ಪ್ರದೇಶ ಪಡೆದು ಅದರ ಸಂಪೂರ್ಣ ಫಲಾನುಭವಿಗಳಾಗುವ ಅವಕಾಶ ಕೊಡವರಿಗೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ 51 ಎಎಫ್ ವಿಧಿ ಪ್ರಕಾರ ಒಂದು ಸೀಮಿತ ಪ್ರದೇಶದಲ್ಲಿ ವ್ಯಾಪಿಸಿ ವಾಸಿಸುತ್ತಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ ವಿರಳ ಸಂಖ್ಯೆಯ ಅಪರೂಪದ ಅಲ್ಪ ಸಂಖ್ಯಾತ ಬುಡಕಟ್ಟು ಕುಲದ ಚಾರಿತ್ರಿಕ ನಿರಂತರದ ಸ್ಥಿರೀಕರಣ, ಸಾಂಪ್ರದಾಯಿಕ ಆವಾಸ ಸ್ಥಾನದ ಸ್ಥಿರತೆ, ಅವರ ಪಾರಂ ಪರಿಕ ಜನ್ಮ ಭೂಮಿ, ಭಾಷೆ, ನೆಲೆ, ಸಂಸ್ಕøತಿ ಮತ್ತು ಪಾರಂಪರಿಕ ಹಕ್ಕುಗಳನ್ನು ಜೋಪಾನ ಮಾಡುವುದು ಬಹು ಸಂಖ್ಯಾತ ಜನಾಂಗ ಮತ್ತು ಬಹು ಸಂಖ್ಯಾತರಿಂದ ಆಳಲ್ಪಡುವ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವೆಂದು ವಿಶ್ವ ಸಂಸ್ಥೆ ಸಹ ತನ್ನ ಚಾರ್ಟರ್‍ನಲ್ಲಿ ತಿಳಿಸಿದೆ. ಅದರಡಿಯಲ್ಲಿ ಈ ಕುಲಶಾಸ್ತ್ರ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.
ಯಾವುದೇ ಪೂರ್ವಾಗ್ರಹವಿಲ್ಲದಂತೆ ಈ ಸರ್ವೇಕ್ಷಣೆ ನಡೆಯಬೇಕು. ಅದನ್ನು ಸಂವಿಧಾನ ತಿದ್ದುಪಡಿಗೆ ಕಳುಹಿಸುವ ಮೂಲಕ ರಾಜ್ಯ ಸರ್ಕಾರ ಸಹ ತನ್ನ ಬದ್ಧತೆ ಪ್ರದರ್ಶಿಸ ಬೇಕು ಎಂದು ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಅಪ್ಪಾರಂಡ ರೀನಾ ಪೂವಣ್ಣ, ಎಂ.ಕೆ.ದಿಲೀಪ್, ಅರೆಯಂಡ ಗಿರೀಶ, ಚಂಬಂಡ ಜನತ್ ಉಪಸ್ಥಿತರಿದ್ದರು.
ನಾಪೋಕ್ಲು ವರದಿ: ಸರ್ಕಾರ ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರುಚಾಲನೆ ನೀಡಿರುವುದನ್ನು ನಾಪೋಕ್ಲು ಕೊಡವ ಸಮಾಜ ಸ್ವಾಗತಿಸಿದೆ.
ನಾಪೋಕ್ಲು ಕೊಡವ ಸಮಾಜದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿ, ದಿನೇ ದಿನೇ ಅಲ್ಪಸಂಖ್ಯಾತ ರಾಗಿ ಎಲ್ಲ ರಂಗಗಳಲ್ಲೂ ಸೊರಗುತ್ತಾ, ತಾಯ್ನೆಲದಲ್ಲೇ ಅನಾಥರಾಗಿರುವ ಅತ್ಯಂತ ಕ್ಷೀಣ ಬುಡಕಟ್ಟು ಜನಾಂಗವಾದ ಕೊಡವ ರಿಗೆ ಸಂವಿಧಾನಾತ್ಮಕ ರಕ್ಷಣೆ ನೀಡಿದರೆ ಮಾತ್ರ ಬದುಕು ಹಸನಾಗಲಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸರ್ಕಾರವು ನಡೆಸುವ ಕುಲಶಾಸ್ತ್ರ ಸಮೀಕ್ಷೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ರಮೇಶ್ ಚಂಗಪ್ಪ, ಎಲ್ಲ ಕೊಡವರು ಕೂಡಾ ಬೆಂಬಲ ನೀಡಬೇ ಕೆಂದು ವಿನಂತಿ ಮಾಡಿದರು.
ಕೊಡವರನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸಿ, ಭದ್ರತೆ ನೀಡಬೇಕೆಂಬುದು ಪ್ರತಿಯೊಬ್ಬ ಕೊಡವರ ಅಂತರಾಳದ ಅಭಿಲಾಷೆ, ನಮ್ಮ ಭೂಮಿ, ಆರ್ಥಿಕ ಸ್ವಾವಲಂಬನೆ, ರಾಜಕೀಯ ಸ್ವಾತಂತ್ರ್ಯ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭದ್ರತೆ ಸಿಗುವಂತಾಗಲು ಬುಡಕಟ್ಟು ಸ್ಥಾನಮಾನ ಅತ್ಯಂತ ಅಗತ್ಯ ಎಂದು ರಮೇಶ್ ಚಂಗಪ್ಪ ಹೇಳಿದರು. ಗೋಷ್ಠಿಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಗೌರವ ಕಾರ್ಯದರ್ಶಿ ಮಂಡೀರ ರಾಜಪ್ಪ ಚಂಗಪ್ಪ, ನಿರ್ದೇಶಕರಾದ ಕಾಟುಮಣಿ ಯಂಡ ಉಮೇಶ್, ಕುಂಡ್ಯೋಳಂಡ ವಿಷುಪೂವಯ್ಯ, ಕುಲ್ಲೇಟಿರ ಅಜಿತ್, ಚೋಕಿರ ಸಜಿತ್ ಚಿಣ್ಣಪ್ಪ ಮತ್ತು ವ್ಯವಸ್ಥಾಪಕ ಶಿವಚಾಳಿ ಯಂಡ ಜಗದೀಶ್ ಉಪಸ್ಥಿತರಿದ್ದರು.