ಮನೆ ಬಾಗಿಲು ಮೀಟಿ ಬೆಳ್ಳಿ ಪದಾರ್ಥ ಕಳವು
ಮೈಸೂರು

ಮನೆ ಬಾಗಿಲು ಮೀಟಿ ಬೆಳ್ಳಿ ಪದಾರ್ಥ ಕಳವು

January 8, 2019

ಮೈಸೂರು: ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಬೆಳ್ಳಿ ಪದಾರ್ಥಗಳು ಹಾಗೂ ನಗದು ದೋಚಿರುವ ಖದೀಮರು, ಮತ್ತೊಂದು ಮನೆಯಲ್ಲಿ ಕಳವಿಗೆ ಯತ್ನಿಸಿದ್ದಾರೆ.

ನಿವೇದಿತನಗರದ ನಿವಾಸಿ ಮಂಜುನಾಥ್ ಅವರ ಮನೆಯ ಮುಂಭಾಗಿಲನ್ನು ಮೀಟಿ ಒಳನುಗ್ಗಿರುವ ಕಳ್ಳರು, ಸುಮಾರು 60 ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ವಸ್ತುಗಳು ಹಾಗೂ 20 ಸಾವಿರ ರೂ. ನಗದನ್ನು ದೋಚಿದ್ದಾರೆ.

ಮಂಜುನಾಥ್ ಕುಟುಂಬ ಸಮೇತರಾಗಿ ಜ.3ರಂದು ಬೆಂಗ ಳೂರಿಗೆ ತೆರಳಿದ್ದರು. ವಾಚ್‍ಮನ್ ಶೆಡ್‍ನಲ್ಲಿ ವಾಸವಾಗಿರುವ ಸುಂದರಮ್ಮ ಎಂಬುವರು ಕಳೆದ ಶನಿವಾರ ಮಂಜುನಾಥ್‍ಗೆ ಕರೆ ಮಾಡಿ, ಮನೆಯ ಮುಂಬಾಗಿಲು ತೆರೆದಿರುವುದಾಗಿ ತಿಳಿಸಿ ದ್ದರು. ನಂತರ ಮಂಜುನಾಥ್ ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳವಿಗೆ ಯತ್ನ: ಕುವೆಂಪುನಗರದ ಪಡುವಣ ರಸ್ತೆ ನಿವಾಸಿ, ಐಟಿಸಿ ಕಂಪನಿ ಉದ್ಯೋಗಿ ದೀಪು ಎಂಬುವರ ಮನೆಯಲ್ಲಿ ಖದೀಮರು ಕಳ್ಳತನಕ್ಕೆ ಯತ್ನಿಸಿದ್ದಾರೆ. ದೀಪು ಅವರ ಪೋಷಕರು ಜ.4ರಂದು ಹಾಸನಕ್ಕೆ ತೆರಳಿದ್ದರು. ಅಂದು ಸಂಜೆ 6 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ದೀಪು ಕೆಲಸಕ್ಕೆ ಹೋಗಿ, ನಡುರಾತ್ರಿ 2 ಗಂಟೆಗೆ ವಾಪಸ್ಸಾದಾಗ ಮನೆಗೆ ಬಾಗಿಲು ತೆರೆದಿತ್ತು. ಬಳಿಕ ಒಳಹೋಗಿ ನೋಡಿದಾಗ ಬೀರು, ವಾರ್ಡ್ ರೂಬ್‍ಗಳು ಯಥಾಸ್ಥಿತಿಯಲ್ಲಿದ್ದವು. ಯಾವುದೇ ವಸ್ತು ಅಥವಾ ನಗದು ಕಳ್ಳತನವಾಗಿರಲಿಲ್ಲ.
ಈ ಸಂಬಂಧ ದೂರಿನನ್ವಯ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆ ಪೊಲೀಸರು, ಖದೀಮರ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Translate »