ಅರಣ್ಯ ಇಲಾಖೆ ಅಸಹಕಾರ: ಅಪಾಯಕಾರಿ ಮರಗಳ ತೆರವು ನೆನೆಗುದಿಗೆ
ಮೈಸೂರು

ಅರಣ್ಯ ಇಲಾಖೆ ಅಸಹಕಾರ: ಅಪಾಯಕಾರಿ ಮರಗಳ ತೆರವು ನೆನೆಗುದಿಗೆ

May 30, 2018

ಮೈಸೂರು: ಮೈಸೂರಿನಲ್ಲಿ ಗಾಳಿ-ಮಳೆಯಿಂದ ನಿರಂತರವಾಗಿ ಹತ್ತಾರು ಮರಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ಒಣಗಿರುವ ಅಪಾಯಕಾರಿ ಮರಗಳು ಹಾಗೂ ಕೊಂಬೆ ಗಳ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆ ಮುಂದುವರಿಸಿದೆ. ಆದರೆ ಅರಣ್ಯ ಇಲಾಖೆ ಸಮನ್ವಯತೆ ಕೊರತೆ ಯಿಂದ ಕಾರ್ಯಾಚರಣೆ ವಿಳಂಬವಾಗು ತ್ತಿದೆ ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿ ಜೋರು ಗಾಳಿ-ಮಳೆಯಾದರೆ ಒಂದೆರಡು ಮರಗಳು ನೆಲಕ್ಕುರುಳುವುದು ಖಚಿತ. ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಸಮೀಪ ಮರವೊಂದು ಉರುಳಿ ಆಟೋ ಮೇಲೆ ಬಿದ್ದ ಪರಿಣಾಮ ತಮಿಳುನಾಡಿನ ಯುವತಿ ರೇವತಿ ಮೃತಪಟ್ಟ ಘಟನೆ ಮರೆಯು ವಂತಿಲ್ಲ. ಕಾಮಗಾರಿಗಳಿಗಾಗಿ ಬೇರು ಗಳನ್ನು ಕತ್ತರಿಸಿ, ಮರಗಳನ್ನು ನಿಶ್ಯಕ್ತಗೊಳಿಸಿ, ಅಪಾಯವನ್ನು ಸೃಷ್ಟಿಸಿಕೊಳ್ಳಲಾಗಿದೆ. ಅಲ್ಲದೆ ಅಪಾಯಕಾರಿ ದುರ್ಬಲ ಮರ ಗಳು ಹಾಗೂ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವಲ್ಲೂ ನಿರ್ಲಕ್ಷ್ಯ ತಾಳಲಾ ಗಿದೆ ಎಂದು ಸಾರ್ವಜನಿಕರು ಅತೀವ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನೀಲಗಿರಿ ರಸ್ತೆ, ಅರಮನೆ ಆಸುಪಾಸಿನಲ್ಲಿ ರುವ ಬೃಹತ್ ಮರಗಳಲ್ಲಿ ಹಲವು ಕೊಂಬೆ ಗಳು ಒಣಗಿವೆ.

ಸಂಪೂರ್ಣವಾಗಿ ಒಣಗಿ ಹೋಗಿದ್ದ ಸುಮಾರು 75 ವರ್ಷಕ್ಕೂ ಹಳೆಯದಾದ ಮರವೊಂದನ್ನು 5 ದಿನಗಳ ಹಿಂದಷ್ಟೇ ನಗರ ಪಾಲಿಕೆ ವತಿಯಿಂದ ತೆರವು ಮಾಡಿದ್ದಲ್ಲದೆ, ಒಣಗಿದ ಕೊಂಬೆ ಗಳನ್ನು ಕತ್ತರಿಸುವ ಕಾರ್ಯಾಚರಣೆ ಯನ್ನೂ ಆರಂಭಿಸಿದ್ದರು. ಆದರೆ ದೊಡ್ಡ ಕೊಂಬೆಗಳ ತುದಿಯಲ್ಲಿ ಜೇನು ಕಟ್ಟಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.

ಬನ್ನಿಮಂಟಪ ಬಡಾವಣೆಯಲ್ಲಿ ಸುಮಾರು 13 ಮರಗಳು, ನಜರ್‍ಬಾದ್ ನಲ್ಲಿರುವ ಮಿನಿ ವಿಧಾನಸೌಧದ ಆಸು ಪಾಸಿನಲ್ಲಿ ಸುಮಾರು 10 ಮರಗಳು ಒಣಗಿದ್ದು, ಅಪಾಯಕ್ಕೆ ಕಾದು ನಿಂತಿವೆ. ಪೀಠೋಪಕರಣಕ್ಕೆ ಉಪಯೋಗಿಸಲು ಯೋಗ್ಯವಾಗಿರುವುದರಿಂದ ನಗರ ಪಾಲಿಕೆಯವರು ತೆರವುಗೊಳಿಸುವುದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಇತ್ತ ಅರಣ್ಯ ಇಲಾಖೆಯೂ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ನಗರ ಪಾಲಿಕೆ, ಒಣಗಿರುವ ಕೊಂಬೆಗಳನ್ನು ತೆರವು ಮಾಡಿಸಬಹುದೇ ಹೊರತು, ಮರಗಳನ್ನು ತೆಗಿಸಲು ಅರಣ್ಯ ಇಲಾಖೆ ಯಿಂದ ಅನುಮತಿ ಪಡೆಯಲೇಬೇಕಿದೆ. ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಸಮನ್ವಯತೆಯಿಂದ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತ್ವರಿತ ವಾಗಿ ತೆರವು ಮಾಡದಿದ್ದರೆ, ಸಂಭವಿಸ ಬಹುದಾದ ಅಪಾಯಕ್ಕೆ ಹೊಣೆಗಾರರಾಗ ಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »