ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ
ಮೈಸೂರು

ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ

April 13, 2019

ಮೈಸೂರು: ಎರಡೂ ಪಕ್ಷಗಳ ಕಾರ್ಯಕರ್ತರು ಸಣ್ಣ-ಪುಟ್ಟ ವಿಚಾರಗಳನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸ ಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮನವಿ ಮಾಡಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಶುಕ್ರವಾರ ನಡೆದ ಬಹಿರಂಗ ಪ್ರಚಾರ ಸಭೆ ಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾ-ಜಿದ್ದಿ ನಡೆದು ಜೆಡಿಎಸ್ 37 ಮತ್ತು ಕಾಂಗ್ರೆಸ್ 78 ಸ್ಥಾನಗಳನ್ನು ಗಳಿಸಿತ್ತು. ಆದರೆ, ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡಲು ಎರಡೂ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಿವೆ. ಹಾಗಾಗಿ ಉಭಯ ಪಕ್ಷಗಳ ಕಾರ್ಯಕರ್ತರು ಸಣ್ಣ-ಪುಟ್ಟ ವಿಚಾರ ಗಳನ್ನು ಬದಿಗೊತ್ತಿ ಈ ಚುನಾವಣೆಯಲ್ಲಿ 28 ಕ್ಷೇತ್ರ ಗಳಲ್ಲೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಆ ಮೂಲಕ ರಾಹುಲ್‍ಗಾಂಧಿ ಮತ್ತು ಹೆಚ್.ಡಿ. ದೇವೇಗೌಡರ ಕೈ ಬಲಪಡಿಸಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡ ಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಒಟ್ಟಾಗಿ ತೀರ್ಮಾ ನಿಸಿ, ಜೆಡಿಎಸ್‍ಗೆ ಬೆಂಬಲ ನೀಡಿದರು. ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ನಂತರ ನನ್ನನ್ನು ಮೈಸೂರು, ಸಾ.ರಾ.ಮಹೇಶ್ ಅವರನ್ನು ಕೊಡಗು, ಸಿ.ಎಸ್.ಪುಟ್ಟರಾಜು ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರು. ಜತೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ನೀಡಿದ್ದ ಹಲವು ಕಾರ್ಯಕ್ರಮಗಳನ್ನು ಮುಂದುವರೆ ಸುವ ಜತೆಗೆ ರೈತರ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‍ಗಳ ಸಾಲಮನ್ನಾ, ವೃದ್ಧಾಪ್ಯ ವೇತನ ಹೆಚ್ಚಳ ಮಾಡಿದರು. ಹಳ್ಳಿಗಳ ಅಭಿವೃದ್ಧಿ, ಕೆರೆಕಟ್ಟೆಗಳಿಗೆ ನೀರು ತುಂಬಿಸುವುದು ಹೀಗೆ ಹಲವು ಕಾರ್ಯ ಕ್ರಮಗಳನ್ನು ಬಜೆಟ್‍ನಲ್ಲಿ ಘೋಷಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹರದನಹಳ್ಳಿಯಿಂದ ದೆಹಲಿವರೆಗೆ: ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿಯಿಂದ ಹೋಗಿ ಮುಖ್ಯ ಮಂತ್ರಿಯಾಗಿ ರಾಜ್ಯದ ಧ್ವಜ ಹಾರಿಸಿದರೆ, ಹೆಚ್.ಡಿ. ದೇವೇಗೌಡರು ಸಂಸತ್ ಪ್ರವೇಶಿಸಿ ಪ್ರಧಾನಿಯಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿದರು. ಅವರು ಪ್ರಧಾನಿಯಾಗಿದ್ದ 11 ತಿಂಗಳ ಅವಧಿಯಲ್ಲಿ ನೀರಾವರಿ, ಹೆದ್ದಾರಿ ಹೀಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಇಂದು ದೇವೇಗೌಡರು ತಮ್ಮೊಂದಿಗೆ ಇಬ್ಬರು ಮೊಮ್ಮಕ್ಕಳು ಪ್ರಜ್ವಲ್ ಮತ್ತು ನಿಖಿಲ್‍ನನ್ನು ಸಂಸತ್‍ಗೆ ಕರೆದೊಯ್ಯುತ್ತಿದ್ದು, ಇವರೊಂದಿಗೆ ಮೈಸೂರಿನಿಂದ ವಿಜಯಶಂಕರ್ ಅವರನ್ನೂ ಕಳುಹಿಸಿಕೊಡಬೇಕು. ಹಾಗಾಗಿ ವಿಜಯ್‍ಶಂಕರ್ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಪ್ರಚಾರ ಆರಂಭ: ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ಈಗಾಗಲೇ ಮೈಸೂರಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಮತ್ತು ಮಾಜಿ ಶಾಸಕ ವಾಸು ಹಾಗೂ ಹುಣಸೂರಿನಲ್ಲಿ ಶಾಸಕ ಎ.ಹೆಚ್.ವಿಶ್ವನಾಥ್ ಮತ್ತು ಮಾಜಿ ಶಾಸಕ ಮಂಜುನಾಥ್ ಅವರು ಎರಡೂ ಪಕ್ಷಗಳ ಕಾರ್ಯ ಕರ್ತರ ಸಭೆ ಕರೆದು ಬೂತ್ ಮಟ್ಟದ ಕಮಿಟಿಯನ್ನೂ ರಚಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಮತ್ತು ಮಾಜಿ ಶಾಸಕ ವೆಂಕಟೇಶ್. ನರಸಿಂಹ ರಾಜದಲ್ಲಿ ಶಾಸಕ ತನ್ವೀರ್‍ಸೇಠ್ ಮತ್ತು ಅಬ್ದುಲ್ಲಾ ಹಾಗೂ ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಕೆ.ವಿ.ಮಲ್ಲೇಶ್ ಒಟ್ಟಾಗಿ ಸೇರಿ ಚುನಾವಣಾ ಪ್ರಚಾರದಲ್ಲಿ ತೊಡಗಿ ದ್ದಾರೆ ಎಂದು ತಿಳಿಸಿದರು.

ಏ.14ರಿಂದ ಭರ್ಜರಿ ಪ್ರಚಾರ: ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಒಟ್ಟಾಗಿ ಏ.14ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದು, ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಡಕೊಳ, ಜಯಪುರ, ಇಲವಾಲ, ಸಿದ್ದಲಿಂಗಪುರದಲ್ಲಿ ಸಭೆ ನಡೆಸಲಾಗುವುದು ಎಂದರು.

ಒಂದಾಗಿದ್ದಕ್ಕೆ ಆಶ್ವರ್ಯಪಡಬೇಕಿಲ್ಲ: 1978ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಸ್ಪರ್ಧಿಸಿದ್ದರು. ಎಲ್ಲಾ ಪಕ್ಷದ ಮುಖಂಡರು ಪಾಟೀಲ್ ಅವರಿಗೆ ಬೆಂಬಲ ನೀಡಿದರು. ಆದರೆ, ಇಂದಿರಾ ಗಾಂಧಿ ಗೆಲುವು ಸಾಧಿಸಿದರು.

ಅದಾದ ಆರು ತಿಂಗಳಲ್ಲಿ ವೀರೇಂದ್ರಪಾಟೀಲರು ಇಂದಿರಾ ಗಾಂಧಿ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾದರು. ಹಾಗಾಗಿ ರಾಜಕೀಯ ಹೇಗಿ ರುತ್ತದೆಂದು ಎಲ್ಲರೂ ಮನದಟ್ಟು ಮಾಡಿ ಕೊಳ್ಳಬೇಕು. ಇಂದು ನಾವಿಬ್ಬರೂ ಒಂದಾಗಿದ್ದಕ್ಕೆ ಆಶ್ವರ್ಯಪಡಬೇಕಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ನಾಗಿದ್ದೆ. ಈ ವೇಳೆ ನಾವಿಬ್ಬರೂ ಅಭಿವೃದ್ಧಿ ಕಾರ್ಯಗಳನ್ನು ಒಟ್ಟಾಗಿಯೇ ಮಾಡಿದ್ದೇವೆ. ಅವರು ನನ್ನ ಕ್ಷೇತ್ರಕ್ಕೆ ಬಂದಾಗ ಗೈರಾಗಿಲ್ಲ ಎಂದು ಸಿದ್ದ ರಾಮಯ್ಯ ಅವರನ್ನು ಹೊಗಳಿದರು.

ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತ ನಾಡಿ, ರಾಜ್ಯ, ದೇಶವನ್ನು ಕೋಮುವಾದದಿಂದ ಬಿಡಿಸಿ ಸಂವಿಧಾನದ ರಕ್ಷಣೆ ಮಾಡಿ ಪ್ರಜಾಪ್ರಭುತ್ವ ವನ್ನು ಬಲವರ್ಧನೆಗೊಳಿಸಬೇಕಿದೆ. ಅದಕ್ಕಾಗಿ ಜಾತ್ಯಾತೀತ ಪಕ್ಷಗಳು ಒಂದಾಗಿದ್ದು, ನಾವೆಲ್ಲರೂ ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಪಣತೊಟ್ಟು ಮೈತ್ರಿ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ತನ್ವೀರ್ ಸೇಠ್, ಯತೀಂದ್ರ ಸಿದ್ದರಾಮಯ್ಯ, ಮಹ ದೇವ್, ಅಶ್ವಿನ್ ಕುಮಾರ್, ಮೇಯರ್ ಪುಷ್ಪಲತಾ ಜಗ ನ್ನಾಥ್, ವಿಧಾನಪರಿಷತ್ ಸದಸ್ಯ ಆರ್. ಧರ್ಮ ಸೇನಾ, ಕೆ.ಟಿ.ಶ್ರೀಕಂಠೇಗೌಡ, ಸಿ.ಎಂ. ಇಬ್ರಾಹಿಂ, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ವಾಸು, ಮಂಜುನಾಥ್, ವೆಂಕಟೇಶ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ ನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್, ಜೆಡಿಎಸ್ ಮುಖಂಡರಾದ ಕೆ.ವಿ. ಮಲ್ಲೇಶ್, ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Translate »