ಏನೇ ಆದರೂ `ಅನರ್ಹ’ ಲೇಬಲ್ ಕಳಚದು: ಸಿದ್ದರಾಮಯ್ಯ ಲೇವಡಿ
ಮೈಸೂರು

ಏನೇ ಆದರೂ `ಅನರ್ಹ’ ಲೇಬಲ್ ಕಳಚದು: ಸಿದ್ದರಾಮಯ್ಯ ಲೇವಡಿ

November 17, 2019

ಮೈಸೂರು,ನ.16(ಎಂಟಿವೈ)- ಅನರ್ಹರು ಎಂದಿಗೂ ಅನರ್ಹರೇ ಹೊರತು ತ್ಯಾಗಿ, ಸ್ವಾತಂತ್ರ್ಯ ಹೋರಾಟ ಗಾರರಾಗಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಅರ್ಹ ರಾಗಲು ಚುನಾವಣೆಗೆ ನಿಲ್ಲುವಂತೆ ಅನರ್ಹರಿಗೆ ಅವ ಕಾಶ ನೀಡಿದೆ. ಈಗ ಕಳಂಕ ಹೊತ್ತುಕೊಂಡು ಜನರ ಮುಂದೆ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಸೀಕ್ರೆಟ್ ವಿಚಾರ ಈಗ ಒಂದೊಂ ದಾಗಿ ಹೊರ ಬರುತ್ತಿದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಲ್ಲ ಅಂತ ಹೇಳಿಕೊಂಡು ಸಾಚಾಗಳಂತೆ ಮಾತನಾಡುತ್ತಿದ್ದರು. ಈಗ ಅವರೇ (ಅನರ್ಹರು) ಹೇಳ್ತಾ ಇರೋದರಿಂದ ನಾವೇನು ಸಾಬೀತು ಮಾಡುವ ಅವಶ್ಯ ಕತೆ ಇಲ್ಲ. ಸ್ಪೀಕರ್ ಮಾಡಿದ್ದ ಅನರ್ಹತೆಯ ಆದೇಶ ವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು, ಅನರ್ಹರು ಅಂತ ಹೇಳಿದೆ. ಈಗ ಚುನಾವಣೆಗೆ ನಿಲ್ಲುವ ಅವಕಾಶ ಇದ್ದರೂ ಅನರ್ಹರಾಗಿಯೇ ಜನರ ಬಳಿಗೆ ಹೋಗ ಬೇಕು. ಅವರೇನೇ ಹೇಳಿದರೂ ಅನರ್ಹತೆಯ ಲೇಬಲ್ ತೆಗೆಯಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಸೈಡ್‍ಲೈನ್ ಆಗಿದ್ದರಿಂದ ನಾನು ಪಕ್ಷ ತೊರೆದೆ ಎಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಅನರ್ಹರಾಗಿರುವ ಅವರಿಗೆ ಏನು ಕಿಮ್ಮತ್ತು ಇದೆ. ಜನರಿಗೆ ಮೋಸ ಮಾಡಿ ಅವರನ್ನೇ ಮಾರಿಕೊಂಡಿರು ವವರಿಗೆ ಕಿಮ್ಮತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಇವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಆಸ್ತಿ ಪಾಸ್ತಿ ಕಳೆದುಕೊಂಡ್ರಾ. ದೇಶಕ್ಕಾಗಿ ಹೋರಾಟ ಮಾಡಿ, ತ್ಯಾಗ ಮಾಡಿದ್ದಾರಾ? ಇವರೆಲ್ಲರು ಮಾಡಿರೋದು ತ್ಯಾಗವಲ್ಲ, ಸ್ವಾರ್ಥ. ಇದಕ್ಕೆ ಜನರೇ ಉತ್ತರ ಕೊಡಲಿದ್ದಾರೆ ಎಂದರು.

ಸರ್ಕಾರಕ್ಕೆ ಸಂಕಷ್ಟ: ಉಪ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗೆಲ್ಲುವುದಿಲ್ಲ. ಚುನಾವಣೆ ಬಳಿಕ ಈ ಸರ್ಕಾರಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ಸಿಎಂ ಯಡಿಯೂರಪ್ಪ ಪಕ್ಷಕ್ಕೆ ಬಂದ ಎಲ್ಲರ ಭರವಸೆ ಈಡೇರಿಸುತ್ತೇನೆ ಎಂದು ಹೇಳಿದ್ದಾರೆ. ಎಂ.ಶಂಕರ್‍ಗೆ ಎಂಎಲ್‍ಸಿ ಮಾಡಿ ಮಂತ್ರಿ ಮಾಡುತ್ತೇನೆ ಎಂದು ಹೇಳಿರು ವುದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗಿದೆ. ಮುಖ್ಯಮಂತ್ರಿಯಾಗಿ ನೀತಿ ಸಂಹಿತೆ ಪಾಲಿಸುವ ನೈತಿಕತೆ ಇಲ್ಲವೇ? ಇಂತವರೆಲ್ಲ ರಾಜ್ಯದ ಮುಖ್ಯಮಂತ್ರಿ ಆದ್ರೆ ಅಭಿವೃದ್ಧಿ ಆಗುತ್ತದೆಯೇ ಎಂದು ಕುಟುಕಿದರು. ಜೆಡಿಎಸ್‍ನವರಿಗೆ ಬದ್ಧತೆ ಇಲ್ಲ ಎಂದರು.

Translate »