ಅರಸುಗೆ ಮೋದಿ, ಸಿದ್ದರಾಮಯ್ಯ ಸರಿಸಾಟಿ ಅಲ್ಲ
ಮೈಸೂರು

ಅರಸುಗೆ ಮೋದಿ, ಸಿದ್ದರಾಮಯ್ಯ ಸರಿಸಾಟಿ ಅಲ್ಲ

November 17, 2019

ಮೈಸೂರು,ನ.16(ಎಂಟಿವೈ)- ಹಿಂದುಳಿದ ವರ್ಗದ ನಾಯಕ ಡಿ.ದೇವರಾಜ ಅರಸು ಅವ ರಿಗೆ ಅವರೇ ಸರಿಸಾಟಿ ಹೊರತು ಪ್ರಧಾನಿ ನರೇಂದ್ರಮೋದಿ ಅಲ್ಲ ಎಂದು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಮಾಜಿ ಸಚಿವ ಎ.ಹೆಚ್.ವಿಶ್ವನಾಥ್‍ಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಮುಂದೆ ಮೋದಿ ನಿಲ್ಲಲ್ಲ. ಸಿದ್ದರಾಮಯ್ಯ ಸಹ ಸಾಟಿಯಲ್ಲ. ಅರಸು ಹೆಸರಿನಲ್ಲಿ ಅವರು ಅಂಬೆಗಾಲು ಇಡುತ್ತಿದ್ದಾರೆ. ಧ್ವನಿಯಿಲ್ಲದ ವ್ಯಕ್ತಿ ಗಳನ್ನು ವಿಧಾನಸೌಧಕ್ಕೆ ಏರಿಸಿದವರು ದೇವರಾಜ ಅರಸು, ಮೋದಿ ಅವರನ್ನು ದೇಶದ ಜನರು ಐದೇ ವರ್ಷದಲ್ಲಿ ಮರೆತು ಬಿಡುತ್ತಾರೆ. ಅವರು ಮಾಡಿರುವ ಯಡವಟ್ಟು ಗಳು ಮುಂದೆ ಗೊತ್ತಾಗುತ್ತದೆ ಎಂದು ಟೀಕಿಸಿದರು.

ಅನೈತಿಕ ರಾಜಕಾರಣದ ದಾರಿ: ಅನೈತಿಕ ಸರ್ಕಾರ ವಿರುದ್ಧ ರಾಜೀನಾಮೆ ಕೊಟ್ಟೆ ಎಂಬ ವಿಶ್ವನಾಥ್ ಹೇಳಿಕೆ ನೀಡುತ್ತಿದ್ದಾರೆ. ಬೆಣ್ಣೆ ಮಾತನಾಡಿ ಜನರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಜನರ ಮೇಲೆ ದ್ವೇಷ ಇಟ್ಟುಕೊಂಡೇ ಹುಣಸೂರನ್ನು ನಾಶ ಮಾಡಿದ್ದಾರೆ. ಡಿ.ದೇವರಾಜ ಅರಸು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅನೈತಿಕ ರಾಜಕಾರಣವನ್ನು ವಿಶ್ವನಾಥ್ ಅವರೇ ಪ್ರದರ್ಶಿಸಿದ್ದಾರೆ. ಸುಪ್ರೀಂಕೋರ್ಟ್ ಇವರನ್ನು ಅನರ್ಹ ರರು ಎಂದು ಹೇಳಿರುವುದನ್ನು ಕ್ಷೇತ್ರದ ಮತದಾರರು ಮರೆಯುವುದಿಲ್ಲ ಎಂದರು. ಶಾಸಕರಾಗಿ ಹುಣಸೂರನ್ನು ವಿಶ್ವನಾಥ್ ಅಧೋಗತಿಗೆ ತಂದಿದ್ದಾರೆ. ಜನರಿಗೆ ಮೋಸ ಮಾಡಿದ್ದಾರೆ. ಮತ್ತೆ ಗೆದ್ದು ಮಂತ್ರಿಯಾಗಿ ಅದೇನು ಮಾಡ ಬೇಕು ಅಂತಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ವಾಮ ಮಾರ್ಗದಲ್ಲಿ ಬಿಜೆಪಿ: ಉಪಚುನಾವಣೆಯಿಂದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಬೀಳುತ್ತೆ ಎಂಬುದು ಸಾಬೀತಾಗಿದೆ. ಈಗ ಸೀರೆಗಳು ಸಿಕ್ಕಿರುವುದೇ ಅದಕ್ಕೆ ಸಾಕ್ಷಿ. ಅದು ಬರೀ ಸಿ.ಪಿ. ಯೋಗೇ ಶ್ವರ್ ಅಷ್ಟೆ ಅಲ್ಲ. ಈಗ ಅದಕ್ಕೆ ಎ.ಹೆಚ್.ವಿಶ್ವನಾಥ್ ಲೇಬಲ್ ಅಂಟಿಸಿ ಜನರಿಗೆ ಕೊಡುತ್ತಿದ್ದಾರೆ. ಉಪ ಚುನಾವಣೆಗೆ ಬಿಜೆಪಿ ಯಾವ ರೀತಿ ಸಿದ್ಧವಾಗಿದೆ ಎನ್ನುವುದು ತಿಳಿದಿದೆ. ಬಿಜೆಪಿ ವಾಮಮಾರ್ಗದಿಂದ ಗೆಲ್ಲಲು ಹೊರಟಿದೆ. ನಾವು ಕಾನೂನು ಹೋರಾಟಕ್ಕೆ ಸಿದ್ಧವಾಗುತ್ತಿದ್ದೇವೆ. ಕ್ಷೇತ್ರದ ಮತದಾರರು ಈ ರೀತಿಯ ಆಸೆ, ಆಮಿಷಗಳಿಗೆ ಒಳಗಾಗಬಾರದು. ಅನೈತಿಕ, ಅಕ್ರಮವಾಗಿ ಬಂದಿರುವ ಈ ಉಪ ಚುನಾ ವಣೆ ಮಾರಕವಾಗಿದೆ ಎಂದು ಕಿಡಿಕಾರಿದರು.

Translate »