ಮೈಸೂರು

ಧ್ಯಾನ ರೋಗ ನಿರೋಧಕವಷ್ಟೆ, ಚಿಕಿತ್ಸೆ ಅಲ್ಲ

November 17, 2019

ಮೈಸೂರು,ನ.16(ಪಿಎಂ, ವೈಡಿಎಸ್)- ಯೋಗ ಮತ್ತು ಧ್ಯಾನ ದಿಂದ ರೋಗ ಬರದಂತೆ ತಡೆಯಬಹುದೇ ಹೊರತು ಎಲ್ಲಾ ರೋಗಗಳನ್ನು ಗುಣಪಡಿಸಬಹುದು ಎಂಬ ಅಭಿಪ್ರಾಯ ಸರಿಯಲ್ಲ ಎಂದು ಹೈದರಾಬಾದ್‍ನ ರಾಮಚಂದ್ರ ಮಿಷನ್ ಅಧ್ಯಕ್ಷ ಕಮಲೇಶ್ ಡಿ ಪಟೇಲ್ ಸ್ಪಷ್ಟಪಡಿಸಿದರು.

ಮುಕ್ತಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಘಟಿಕೋತ್ಸವ ಭವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ 2 ದಿನಗಳ ಕಾಲ ಆಯೋಜಿಸಿದ್ದ `ಹೃದಯದ ಆರೈಕೆಗಾಗಿ ಯೋಗ’ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಯೋಗ ಎಂಬುದು ಜೀವನದ ಕ್ರಮ. ಯೋಗ ಮತ್ತು ಧ್ಯಾನದಿಂದ ಖಿನ್ನತೆ ಮತ್ತಿತರೆ ರೋಗಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಧ್ಯಾನದಿಂದ ಖಿನ್ನತೆ ಬರದಂತೆ ತಡೆಯಬಹುದು ಎಂದು ಹೇಳಿದರು.

ಸೂಕ್ತ ವಯಸ್ಸಲ್ಲಿ ಮದುವೆಯಾಗಿ: ಯುವಕ-ಯುವತಿಯರು ಸೂಕ್ತ ವಯಸ್ಸಿನಲ್ಲಿ ಮದುವೆಯಾಗಬೇಕು. ಉದ್ದೇಶಪೂರ್ವಕ ವಾಗಿ ಮುಂದೂಡಬಾರದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಯುವತಿಯರು 30-35 ವರ್ಷಗಳ ನಂತರ ಮದುವೆಯಾಗಲು ಇಚ್ಛಿಸುತ್ತಾರೆ. ಇದರಿಂದ ಮಕ್ಕಳಾಗುವುದು ತಡವಾಗುತ್ತದೆ. ಮೊಮ್ಮಕ್ಕಳಾಗುವ ವೇಳೆಗೆ ಜೀವಿತಾವಧಿ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ಜ್ಞಾನ, ಅನುಭವ, ಮೌಲ್ಯಗಳನ್ನು ಅವರಿಗೆ ತಿಳಿಸಿಕೊಡಲು ಆಗುವುದಿಲ್ಲ ಎಂದು ಎಚ್ಚರಿಸಿದರು.

ಬೆಳಿಗ್ಗೆ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಪಟೇಲ್, ಮಕ್ಕಳಲ್ಲಿ ಆಲಿಸುವ ಹಾಗೂ ಸೂಕ್ತ ನಿರ್ಧಾರಕ್ಕೆ ಬರುವ ಗುಣವಿಶೇಷ ಬೆಳೆಸಲು ಧ್ಯಾನ ಸಹಕಾರಿ. ಹೃದಯವಿಲ್ಲದೆ ಯೋಗ ಹಾಗೂ ಧ್ಯಾನ ಇರಲಾರದು ಎಂಬುದನ್ನು ಅರಿಯಬೇಕು. ಮಕ್ಕಳು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಪೋಷಕರು ಉತ್ತೇಜನ ನೀಡಬೇಕು. ಆ ಮೂಲಕ ಮಕ್ಕಳಿಗೆ ಆಧ್ಯಾತ್ಮಿಕ ಉಡುಗೊರೆ ನೀಡಬೇಕು. ಯೋಗ, ಧ್ಯಾನ ಮತ್ತು ಪ್ರಾರ್ಥನೆಯ ಅಭ್ಯಾಸ ಸಂಪ್ರದಾಯದ ಮಾದರಿ ಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯಬೇಕಿದ್ದು, ಪೋಷಕರು ಮಹತ್ವದ ಪಾತ್ರ ವಹಿಸಬೇಕು ಎಂದು ಹೇಳಿದರು.

ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಮಾತನಾಡಿ, ಈ ಸಮ್ಮೇಳನದಲ್ಲಿ ಗಳಿಸಿದ ಜ್ಞಾನ, ವಿಚಾರ ಗಳನ್ನು ಇತರರಿಗೂ ತಿಳಿಸಬೇಕು. ಯೋಗದ ಮಹತ್ವವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಯುವಕರ ಮೇಲಿದೆ. ಯುವಕ-ಯುವತಿಯರು ಈ ನಿಟ್ಟಿನಲ್ಲಿ ಮತ್ತಷ್ಟು ಸಂಶೋಧನೆಯಲ್ಲಿ ತೊಡಗಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಮಾತನಾಡಿ, ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯೋಗಾಭ್ಯಾಸ ದಿಂದ ಮಾತ್ರ ಹೃದ್ರೋಗವನ್ನು ತಡೆಯಬಹುದು ಎಂಬುದನ್ನು ಅಧ್ಯಯನ ತಿಳಿಸಿದೆ. ಯೋಗವನ್ನು ಭಾರತವು ಜಗತ್ತಿಗೆ ನೀಡಿ ರುವ ಅತ್ಯಮೂಲ್ಯವಾದ ಬೆಲೆ ಕಟ್ಟಲಾಗದ ಉಡುಗೊರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಆಯುಷ್ ಇಲಾಖೆ ಕಾರ್ಯ ದರ್ಶಿ ವೈದ್ಯ ರಾಜೇಶ್ ಕಟೋಚ, ಹೆಚ್ಚುವರಿ ಕಾರ್ಯದರ್ಶಿ ಪಿ.ಕೆ.ಪಾಠಕ್, ದೆಹಲಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗ ನಿರ್ದೇಶಕ ಡಾ.ಐ.ವಿ. ಬಸವರಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಜಾವೇದ್ ಅಕ್ತರ್, ರಾಜ್ಯ ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ, ಬೆಂಗಳೂರಿನ ಆರೋಗ್ಯಧಾಮದ ಡೀನ್ ಡಾ.ಆರ್.ನಾಗರತ್ನ, ದೆಹಲಿಯ ಏಮ್ಸ್ ಆಸ್ಪತ್ರೆಯ ಡಾ.ಪಿಯೂಷ್ ರಂಜನ್ ಇತರರು ಉಪಸ್ಥಿತರಿದ್ದರು. 2 ದಿನಗಳ ಸಮ್ಮೇಳನದಲ್ಲಿ 8 ತಾಂತ್ರಿಕ ಅಧಿವೇಶನ-ಸಂವಾದ ನಡೆದವು. ದೇಶ-ವಿದೇಶಗಳ 12 ಮಂದಿ ಸಂಪನ್ಮೂಲ ವ್ಯಕ್ತಿಗಳು, ಅಮೆರಿಕಾ, ಇಟಲಿ, ನೆದರ್‍ಲೆಂಡ್, ಯುಕೆ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ 40ಕ್ಕೂ ಹೆಚ್ಚು ಜನಪ್ರತಿನಿಧಿಗಳು, 700 ಪ್ರತಿನಿಧಿಗಳು, ಯೋಗಾಸಕ್ತರು ಪಾಲ್ಗೊಂಡಿದ್ದರು.

ಎದೆನೋವು ನಿವಾರಿಸಿದ ಧ್ಯಾನ
ಎದೆನೋವಿನಿಂದ ಬಳಲುತ್ತಿದ್ದ ನಾನೀಗ ಧ್ಯಾನದ ಅಭ್ಯಾಸ ದಿಂದ ಆರೋಗ್ಯವಾಗಿದ್ದೇನೆ ಎಂದು ಮುಂಬೈ ಮೂಲದ ವೈದ್ಯ ಡಾ.ಹರೀಶ್ ಮೆಹ್ತಾ ತಿಳಿಸಿದರು. ಮುಕ್ತ ಗಂಗೋ ತ್ರಿಯ ಗಂಗಾ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ `ಹೃದಯರಕ್ತನಾಳದ ಆರೋಗ್ಯಕ್ಕಾಗಿ ಯೋಗ: ಸಾಕ್ಷ್ಯಾಧಾರಿತ ಯೋಗ ಶಿಷ್ಟಾಚಾರಗಳು ಹಾಗೂ ಅನುಭವ ಹಂಚಿಕೆ’ ಕುರಿತಂತೆ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಏಳುಬೀಳುಗಳ ಬಳಿಕ ಯಶಸ್ವಿ ವೈದ್ಯನಾದೆ ಎಂದುಕೊಳ್ಳುವಷ್ಟರಲ್ಲಿ ಎದೆನೋವು ಸಮಸ್ಯೆ ಕಾಣಿಸಿ ಕೊಂಡಿತು. ನಮ್ಮ ಆಸ್ಪತ್ರೆಯಲ್ಲಿಯೇ ಇಸಿಜಿ ಮಾಡಿಸಿದಾಗ ಹೃದಯಾಘಾತದ ಲಕ್ಷಣಗಳೂ ಕಂಡು ಬಂದವು.

ಬಳಿಕ ನಿತ್ಯ ಧ್ಯಾನದ ಅಭ್ಯಾಸದಲ್ಲಿ ತೊಡಗಿಕೊಂಡೆ. ಆದರೂ ಏನೂ ಪ್ರಯೋಜನ ಆಗಿಲ್ಲ ಎಂಬ ಭಾವನೆಯಲ್ಲೇ ಇದ್ದೆ. ಆದರೆ ನನ್ನ ಅರಿವಿಗೇ ಬಾರದೆ ನನ್ನಲ್ಲಿ ಒಂದು ಒಳ್ಳೆಯ ಬದ ಲಾವಣೆ ಉಂಟಾಗಿತ್ತು. ಅದನ್ನು ನನ್ನ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದ ರೋಗಿಗಳು ಕಂಡು ಹಿಡಿದಿದ್ದರು. `ನೀವು ಇತ್ತೀಚೆಗೆ ನಮ್ಮ ಅನಾರೋಗ್ಯ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸುತ್ತಿದ್ದೀರಿ. ಚಿಕಿತ್ಸೆ ಸಲಹೆಯನ್ನೂ ತಾಳ್ಮೆಯಿಂದ ಆಲೋಚಿಸಿ ನೀಡುತ್ತಿದ್ದೀರಿ’ ಎಂದು ನನ್ನನ್ನು ಕುರಿತು ತಿಳಿಸಿದಾಗಲೇ ಇದೆಲ್ಲಾ ಧ್ಯಾನದ ಪ್ರಭಾವ ಎಂದು ಅರಿವಾಯಿತು. ಕಳೆದ 9 ತಿಂಗಳಿಂದ ಎದೆ ನೋವು ಕಾಣಿಸಿಕೊಂಡಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

Translate »