ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಮೈಸೂರು

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

January 30, 2019

ನವದೆಹಲಿ: ಮಾಜಿ ರಕ್ಷಣಾ ಸಚಿವ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟ ಗಾರ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಕೆಲ ದಿನಗಳಿಂದ ಅವರಿಗೆ ಹಂದಿ ಜ್ವರ ಕೂಡ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ 1998ರಿಂದ 2004ರವರೆಗೆ ರಕ್ಷಣಾ ಸಚಿವರಾಗಿದ್ದರು. 2010ರವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ ಅವರು 2009-10ರ ಅವಧಿಯಲ್ಲಿ ರಾಜ್ಯ ಸಭಾ ಸದಸ್ಯರಾಗಿದ್ದರು. ನಂತರ ಅನಾ ರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದರು. ವಿ.ಪಿ. ಸಿಂಗ್ ಸರಕಾರದಲ್ಲೂ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಪರ್ಕ ಮತ್ತು ಕೈಗಾರಿಕಾ ಸಚಿವ ಹುದ್ದೆಗಳನ್ನು ಕೂಡ ಅಲಂಕರಿಸಿದ್ದರು.

ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ತಮ್ಮ 19ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಸಮಾಜವಾದಿ ನಾಯಕ ಲೋಹಿಯಾ ಪರಿಚಯದಿಂದ ಹೋರಾಟ ಆರಂಭ ಮಾಡಿದ್ದರು. ಸರಳ ಜೀವಿ ಹಾಗೂ ಅಪ್ರತಿಮ ಹೋರಾಟಗಾರರಾಗಿದ್ದ ಅವರು ಕಾರ್ಮಿಕ ಚಳವಳಿಯಲ್ಲಿ ಅಗ್ರಗಣ್ಯ ನಾಯಕರಾಗಿ ರೂಪುಗೊಂಡು, ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಸೋಲಿಲ್ಲದ ಸರದಾರ ಎಸ್.ಕೆ. ಪಾಟೀಲ್ ಸೋಲಿಸುವಲ್ಲಿ ಯಶಸ್ವಿಯಾದರು ಸಮತಾ ಪಕ್ಷದ ಸಂಸ್ಥಾಪಕರು.

ಬಳಿಕ ಬಿಹಾರದ ಮುಜಾಫರ್‍ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಪಡೆದು, ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೈಗಾರಿಕೆ ಸಚಿವರಾದರು. ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆ ಆರಂಭ ಮಾಡಿದ್ದು, ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿದ್ದಾಗ ಬಿಜೆಪಿ ಜೊತೆ ಕೈಜೋಡಿಸಿದರು. ತುರ್ತು ಪರಿಸ್ಥಿತಿ ವಿರೋಧಿ ಮತ್ತು ನಾಗರಿಕ ಹಕ್ಕುಗಳ ಹೋರಾಟ, ಸಮಾಜ ಸೇವೆಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಜಾರ್ಜ್ ಫರ್ನಾಂಡಿಸ್ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ 1997ರಿಂದ 1980ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಕಾರ್ಗಿಲ್ ಕಾಫಿನ್ ಗೇಟ್ ಹಗರಣ ವಿಚಾರದಲ್ಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆಯೋಗದ ವಿಚಾರಣೆಯಿಂದ ಅವರು ಆರೋಪಮುಕ್ತರಾಗಿ ಹೊರಬಂದರು. ಅವರ ನಿಧನದಿಂದ ರಾಷ್ಟ್ರ ರಾಜಕಾರಣದಲ್ಲಿ ಹಿರಿಯ ಕೊಂಡಿಯೊಂದು ಕಳಚಿಕೊಂಡಿದೆ.

ಇಂದಿರಾ ಗಾಂಧಿ ಭಯ ಬೀಳುತ್ತಿದ್ದರಂತೆ!

ನವದೆಹಲಿ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಜಾರ್ಜ್ ಫರ್ನಾಂಡಿಸ್ ಅವರನ್ನು ಕಂಡರೆ ಭಯ ಬೀಳುತ್ತಿದ್ದರಂತೆ! ಈ ವಿಚಾರವನ್ನು ಜಾರ್ಜ್ ಗೆಳೆಯ, ಬಿಜೆಪಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ನೆನಪಿಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಜಾರ್ಜ್ ಫರ್ನಾಂಡಿಸ್‍ಗೆ ಇಂದಿರಾ ಹೆದರುತ್ತಿದ್ದರು. ನಂತರ ಜಾರ್ಜ್‍ರನ್ನು ಬಂಧನ ಮಾಡಲಾಯಿತು. ಈ ವೇಳೆ ಇಂದಿರಾ ನಿಟ್ಟುಸಿರು ಬಿಟ್ಟರು. ನಾವಿಬ್ಬರೂ ಉತ್ತಮ ಗೆಳೆಯರಾಗಿದ್ದೆವು. ತುರ್ತು ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸಿದ್ದೇವೆ. ನಾನು ಭೂಗತನಾಗಿ ಕಾರ್ಯನಿರ್ವಹಿಸಿದರೆ, ಜಾರ್ಜ್ ಎಲ್ಲರ ಎದುರಿದ್ದೇ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾದ ನಂತರ ಅವರು ಮತ್ತೆ ಎದ್ದೇಳಲೇ ಇಲ್ಲ ಎಂಬುದು ಬೇಸರದ ಸಂಗತಿ ಎಂದು ಹಳೆಯ ದಿನಗಳನ್ನು ನೆನೆದರು ಸ್ವಾಮಿ.

ಜಾರ್ಜ್ ಅವರದ್ದು ವಿಶಾಲ ಹೃದಯ, ಸಮಾಜವಾದಿ. ರಾಮ್ ಮನೋಹರ್ ಲೋಹಿಯಾ ಹಿಂಬಾಲಕರು. ನಾನು ಇದನ್ನು ವಿರೋಧಿಸಿದ್ದೆ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಇಂದಿರಾ ಗಾಂಧಿ ವಿರುದ್ಧ ಒಟ್ಟಾಗಿ ಹೋರಾಡ ಬಹುದು ಎಂದು ನನಗೆ ಮನವರಿಕೆ ಮಾಡಿಕೊಟ್ಟಿದ್ದರು ಎನ್ನುತ್ತಾರೆ ಸ್ವಾಮಿ. ಜಾರ್ಜ್ ನನ್ನ ಆಪ್ತ ಗೆಳೆಯ. ಅವರು ರಾಜಕೀಯಕ್ಕಿಂತ ಮೇಲಿರುತ್ತಿದ್ದರು. ಹಲವು ವಿಚಾರಗಳ ಕುರಿತು ನಾವಿಬ್ಬರೂ ಚರ್ಚೆ ನಡೆಸುತ್ತಿದ್ದೆವು. ಸಾಕಷ್ಟು ಸಮಾವೇಶಗಳನ್ನು ಅವರು ನಡೆಸಿದ್ದಾರೆ. ಇದರಿಂದ ಸರ್ಕಾರ ಆಡಳಿತಾರೂಢ ಪಕ್ಷದ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಸೈದ್ಧಾಂತಿಕವಾಗಿ ನಮ್ಮಿಬ್ಬರ ನಡುವೆ ಭಿನ್ನತೆ ಇದ್ದರೂ ಉತ್ತಮ ಗೆಳೆಯರಾಗೇ ಉಳಿದೆವು ಎಂದು ತಮ್ಮ ಗೆಳೆತನದ ಬಗ್ಗೆ ಮಾಧ್ಯಮಗಳಲ್ಲಿ ಹಂಚಿಕೊಂಡರು.

ಕಾಂಗ್ರೆಸ್ ವಿರೋಧಿ ಗುಣ: ಕಾಂಗ್ರೆಸ್ ವಿರೋಧಿಸುವುದು ಜಾರ್ಜ್ ಡಿಎನ್‍ಎಯಲ್ಲೇ ಇತ್ತೆಂದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ ಎನ್ನುವ ಸ್ವಾಮಿ, ಗಾಂಧಿ ಕುಟುಂಬವನ್ನು ಜಾರ್ಜ್ ತೀವ್ರವಾಗಿ ವಿರೋಧಿಸುತ್ತಿದ್ದರು. ಗಾಂಧಿ ಕುಟುಂಬ ದೇಶಕ್ಕೆ ಒಳಿತು ಮಾಡುವುದಿಲ್ಲ ಎಂಬುದನ್ನು ಅವರ ನಂಬಿಕೆ. ಈ ವಿಚಾರದಲ್ಲಿ ಅವರು ಒಮ್ಮೆಯೂ ರಾಜೀ ಆಗಲಿಲ್ಲ. ಸೋನಿಯಾ ಗಾಂಧಿ ಪ್ರಧಾನಿಯಾಗಿರುವುದನ್ನು ನಾಗರಿಕ ಕಾಯ್ದೆ ಅಡಿಯಲ್ಲಿ ನಾನು ಪ್ರಶ್ನಿಸಲು ಮುಂದಾಗಿದ್ದೆ. ಈ ವೇಳೆ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಎಲ್.ಕೆ.ಅಡ್ವಾಣಿ ಇದನ್ನು ವಿರೋಧಿಸುತ್ತಾರೆ ಎಂದುಕೊಂಡಿದ್ದೆ. ಅಚ್ಚರಿ ಎಂದರೆ ಅವರು ಸಂಪೂರ್ಣ ಬೆಂಬಲ ನೀಡಿದರು ಎಂದು ತಿಳಿಸಿದರು. ಭೋಫೆÇೀರ್ಸ್ ಪ್ರಕರಣಕ್ಕೆ ಅಂದೇ ಅಂತ್ಯ ಹಾಡುವುದಕ್ಕೆ ಜಾರ್ಜ್ ಸಿದ್ಧರಾಗಿದ್ದರಂತೆ. ಆದರೆ, ವಾಜಪೇಯಿ ಅವರಿಗೆ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನ ಕಾಡಿತ್ತು. ಹಾಗಾಗಿ, ವಾಜಪೇಯಿ ಈ ಧೈರ್ಯಕ್ಕೆ ಮುಂದಾಗಿರಲಿಲ್ಲ ಎನ್ನುತ್ತಾರೆ ಸುಬ್ರಮಣಿಯನ್. ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವರ ಪೈಕಿ ಜಾರ್ಜ್ ಫರ್ನಾಂಡಿಸ್ ಮೊದಲಿಗರು ಎಂಬುದು ಸ್ವಾಮಿ ಅಭಿಪ್ರಾಯ. ಸಿಯಾಚಿನ್ ಪ್ರದೇಶದಲ್ಲಿ ಸೈನಿಕರು ವಾಸಿಸಲು ಅನುಕೂಲವಾಗುವ ಪರಿಸ್ಥಿತಿ ನಿರ್ಮಾಣ ಮಾಡಿಕೊಟ್ಟ ಹಿರಿಮೆ ಜಾರ್ಜ್ ಅವರದ್ದು. ಅವರು ಅಲ್ಲಿಗೆ ಆಗಾಗ ಭೇಟಿಯನ್ನೂ ನೀಡುತ್ತಿದ್ದರು. ಸೈನಿಕರ ಬಗ್ಗೆ ಅಷ್ಟು ಕಾಳಜಿಯನ್ನು ಯಾರೊಬ್ಬರೂ ತೋರಿಸುತ್ತಿರಲಿಲ್ಲ. ಅಂತಹವರು ಸಿಗುವುದು ತೀರಾ ಅಪರೂಪ ಎನ್ನುತ್ತಾರೆ ಅವರು.

Translate »