ಬಿಜೆಪಿ ನಡವಳಿಕೆಗೆ ಮಾಜಿ  ಸಚಿವ ಪಿ.ಜಿ.ಆರ್.ಸಿಂಧ್ಯಾ ಟೀಕೆ
ಮೈಸೂರು

ಬಿಜೆಪಿ ನಡವಳಿಕೆಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಟೀಕೆ

February 8, 2019

ಮೈಸೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಉತ್ತಮ ಬಜೆಟ್ ಮಂಡಿಸುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಗಾನಭಾರತಿಯಲ್ಲಿ ಡಾ.ದೊಡ್ಡ ರಂಗೇಗೌಡರ ಆಯ್ದ ಚುಟುಕುಗಳ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿಯ ಇತ್ತೀಚಿನ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು. ಕೇಂದ್ರ ಸರ್ಕಾರ ದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ಇಂತಹ ನಡೆ ಸರಿಯಾದುದಲ್ಲ. ರಾಜ್ಯಪಾಲ ವಜುಭಾಯ್ ವಾಲಾ ಅವರೂ ಬಿಜೆಪಿಯವರು. ಹಲವು ಬಾರಿ ಗುಜರಾತ್‍ನಲ್ಲಿ ಬಜೆಟ್ ಮಂಡಿಸಿದ್ದಾರೆ. ಅವರದ್ದೇ ಪಕ್ಷದ ರಾಜ್ಯಪಾಲರ ಮುಂದೆ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡಿಸಲಿದ್ದು, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆ ಇದೆ. ನಮ್ಮಲ್ಲಿ ನೂರಕ್ಕಿಂತ ಹೆಚ್ಚು ಶಾಸಕರಿದ್ದಾರೆ. ಬಜೆಟ್ ಮಂಡಿಸಲು ಬಿಡುವುದಿಲ್ಲ ಎನ್ನುವುದು ಸಾಮಾನ್ಯ ಎಂದು ತಿಳಿಸಿದರು. ಅತೃಪ್ತ ಶಾಸಕರು ಅವರ ವೈಯಕ್ತಿಕ ಕೆಲಸಗಳ ಮೇಲೆ ಹೋಗಿದ್ದಾರಷ್ಟೆ. ಅವರು ಎಲ್ಲಿಯೂ ಹೋಗಿಲ್ಲ. ಪಕ್ಷ ಬಿಡುವ ನಿರ್ಧಾರವನ್ನು ಮಾಡುವುದಿಲ್ಲ. ಯಾವ ಕಾರಣಕ್ಕೂ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Translate »