ಮೈಸೂರು: ಮೈಸೂರು ಮಹಾನಗರ ಪಾಲಿಕೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಾಗಿ ಪಾಲಿಕೆ ಜೆಡಿಎಸ್ ಸದಸ್ಯ ಎಸ್‍ಬಿಎಂ ಮಂಜು ಆಯ್ಕೆಯಾದರು.
ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾ ಯಿತು. ಏಕೈಕ ಪ್ರತಿಸ್ಪರ್ಧಿ ಪಾಲಿಕೆ ಬಿಜೆಪಿ ಸದಸ್ಯ ಎಂ.ಯು. ಸುಬ್ಬಯ್ಯ ಅವರನ್ನು ಮಣಿಸಿ, ಎಸ್‍ಬಿಎಂ ಮಂಜು ಆಯ್ಕೆಯಾದರು.
ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರೊಬ್ಬರು ಮುಡಾಗೆ ಸದಸ್ಯರಾಗಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಸ್ವಪಕ್ಷ ಜೆಡಿಎಸ್ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ 35 ಮತಗಳನ್ನು ಪಡೆದು ಎಸ್‍ಬಿಎಂ ಮಂಜು ಆಯ್ಕೆಗೊಂಡರೆ, ಪ್ರತಿಸ್ಪರ್ಧಿ ಎಂ.ಯು.ಸುಬ್ಬಯ್ಯ 21 ಮತಗಳನ್ನು ಪಡೆದು ಪರಾ ಜಿತರಾದರು.
ಚುನಾವಣಾಧಿಕಾರಿಯಾಗಿದ್ದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಲ್ಲಿ ವಾರ್ಡ್ 6ರ ಪಾಲಿಕೆ ಜೆಡಿಎಸ್ ಸದಸ್ಯ ಎಸ್‍ಬಿಎಂ ಮಂಜು ಹಾಗೂ ವಾರ್ಡ್ 20ರ ಬಿಜೆಪಿ ಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ ಇಬ್ಬರು ಮಾತ್ರವೇ ನಿಗದಿತ ಅವಧಿಯಲ್ಲಿ ನಾಮ ಪತ್ರಗಳನ್ನು ಸಲ್ಲಿಸಿದರು. ನಾಮಪತ್ರಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿರುವುದನ್ನು ಪ್ರಕಟಿಸಿದ ಮೇಯರ್, ನಾಮಪತ್ರ ಹಿಂಪಡೆ ಯಲು 10 ನಿಮಿಷ ಕಾಲಾವಕಾಶ ನೀಡಿ ಉಮೇದುವಾರಿಕೆ ಹಿಂತೆಗೆಯದ ಹಿನ್ನೆಲೆ ಯಲ್ಲಿ ಮತದಾನ ಪ್ರಕ್ರಿಯೆ ನಡೆಸಿದರು.
ಎಸ್‍ಬಿಎಂ ಮಂಜು ಪರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಅದೇ ರೀತಿ ಎಂ.ಯು.ಸುಬ್ಬಯ್ಯ ಪರವಾಗಿ ಬಿಜೆಪಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಲು ಅವಕಾಶ ನೀಡಲಾ ಗಿತ್ತಾದರೂ ಯಾವುದೇ ವಿರೋಧ ಮತ ಚಲಾವಣೆ ಆಗಲಿಲ್ಲ. ಅಂತಿಮವಾಗಿ ಮತ ಎಣಿಕೆ ಪ್ರಕ್ರಿಯೆ ನಡೆದು ಎಸ್‍ಬಿಎಂ ಮಂಜು ಆಯ್ಕೆಯನ್ನು ಮೇಯರ್ ಘೋಷಿಸಿದರು. ಬಳಿಕ ಮಾತನಾಡಿದ ಎಸ್‍ಬಿಎಂ ಮಂಜು, ಸಿಎಂ ಕುಮಾರ ಸ್ವಾಮಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್-ಕಾಂಗ್ರೆಸ್ ನಾಯಕರ ಆಶೀರ್ವಾದದಿಂದ ಹಾಗೂ ಎರಡೂ ಪಕ್ಷಗಳ ಪಾಲಿಕೆ ಸದ ಸ್ಯರ ಬೆಂಬಲದಿಂದ ಮುಡಾಗೆ ಸದಸ್ಯ ನಾಗಿ ಆಯ್ಕೆಯಾಗಿದ್ದೇನೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಡಾ ಮತ್ತು ಪಾಲಿಕೆ ನಡುವೆ ಸೇತುವೆಯಾಗಿ ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸು ವುದಾಗಿ ತಿಳಿಸಿದರು. ಉಪಮೇಯರ್ ಷಫಿ ಅಹಮದ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಉಪಸ್ಥಿತರಿದ್ದರು.