ಸಂತಾನಹರಣ ಶಸ್ತ್ರಚಿಕಿತ್ಸೆ ನಂತರ  27 ಸಾವಿರವಿದ್ದ ಬೀದಿನಾಯಿ 40 ಸಾವಿರಕ್ಕೇರಿಕೆ!
ಮೈಸೂರು

ಸಂತಾನಹರಣ ಶಸ್ತ್ರಚಿಕಿತ್ಸೆ ನಂತರ  27 ಸಾವಿರವಿದ್ದ ಬೀದಿನಾಯಿ 40 ಸಾವಿರಕ್ಕೇರಿಕೆ!

February 14, 2019

ಮೈಸೂರು: ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ದಿಂದ ಬೀದಿ ನಾಯಿಗಳ ಉಪಟಳ ವೇನೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವನ್ನು ಗುರುವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಯಲ್ಲಿ ಅನೇಕ ಸದಸ್ಯರು ವ್ಯಕ್ತಪಡಿಸಿ, ಸದರಿ ಕಾರ್ಯಕ್ರಮಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪ್ರಯೋಜನ ವಾದರೂ ಏನು ಎಂದು ಪ್ರಶ್ನಿಸಿದರು.

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕೋಟ್ಯಾಂತರ ರೂ. ವೆಚ್ಚ ಮಾಡಿದರೂ ನಾಯಿಗಳ ಸಂತಾನ ಮಾತ್ರ ಹೆಚ್ಚುತ್ತಲೇ ಇದ್ದು, ಸದರಿ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂದು ಹಲವು ಸದಸ್ಯರು ಅನುಮಾನ ವ್ಯಕ್ತಪಡಿಸಿದರು.

ಬೀದಿ ಹಾಗೂ ಹುಚ್ಚು ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಯಾವ ಹಂತದ ಲ್ಲಿದೆ ಎಂಬ ಮಾಹಿತಿ ಬೇಕೆಂದು ಸದಸ್ಯ ನಾಗರಾಜ್ ಪ್ರಸ್ತಾಪಿಸಿದರು. ಈ ವೇಳೆ ಮಾ.ವಿ.ರಾಮ್‍ಪ್ರಸಾದ್ ಫ್ಯಾಮಿಲಿ ಪ್ಲಾನಿಂಗ್ (ಕುಟುಂಬ ಯೋಜನೆ) ಫೇಲ್ಯೂರ್ (ವಿಫಲ) ಆಗಿದೆ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯ ಕ್ರಮದ ಬಗ್ಗೆ ವ್ಯಂಗ್ಯವಾಡಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಅಯೂಬ್‍ಖಾನ್, ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೂ ನಾಯಿಗಳು ಮಾತ್ರ ಮರಿ ಹಾಕುತ್ತಲೇ ಇವೆ. ಈ ರೀತಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸದಸ್ಯ ಎಸ್‍ಬಿಎಂ ಮಂಜು ಮಾತನಾಡಿ, ಮಧ್ಯ ಪ್ರದೇಶದಲ್ಲಿ ಬೀದಿ ನಾಯಿಗಳು ಮಗುವನ್ನೇ ತಿಂದಿವೆ. ಈ ರೀತಿಯ ಪ್ರಕರಣಗಳು ಮೈಸೂರಿನಲ್ಲಿ ಆಗಕೂಡದು. ಹೀಗಾಗಿ ಬೀದಿ ನಾಯಿ ಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂಬಂಧ ಸಭೆಗೆ ಮಾಹಿತಿ ನೀಡಿದ ಪಾಲಿಕೆ ಪಶುವೈದ್ಯಾಧಿಕಾರಿ ಡಾ. ಸುರೇಶ್, ಪ್ರಾಣಿ ಜನನ ನಿಯಂತ್ರಣ ಕಾರ್ಯ ಕ್ರಮದಡಿ 2009ರಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮೈಸೂರು ನಗರದಲ್ಲಿ ನಡೆಯುತ್ತಿದೆ. ಈ ವೇಳೆ 6 ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸ ಲಾಗಿತ್ತು. ಈವರೆಗೆ 41,432 ಬೀದಿ ನಾಯಿ ಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2012 ಸಮೀಕ್ಷೆ ಪ್ರಕಾರ ನಗರದಲ್ಲಿ 27 ಸಾವಿರ ಬೀದಿ ನಾಯಿಗಳಿದ್ದವು. 2016ರಲ್ಲಿ ಕೇಂದ್ರ ಸರ್ಕಾರದ ಮೂಲಕ ನಡೆದ ಮಾದರಿ ಸಮೀಕ್ಷೆಯ ಪ್ರಕಾರ ಮೈಸೂರು ನಗರದಲ್ಲಿ 44 ಸಾವಿರ ಬೀದಿ ನಾಯಿ ಗಳಿವೆ ಎಂದು ವಿವರಿಸಿದರು.

ಈ ವೇಳೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಆರೀಫ್ ಹುಸೇನ್, ಒಂದು ನಾಯಿಗೆ ತಗಲುವ ಶಸ್ತ್ರಚಿಕಿತ್ಸೆ ವೆಚ್ಚವೆಷ್ಟು? ಎಂದು ಪಶುವೈದ್ಯಾಧಿಕಾರಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ.ಸುರೇಶ್, 2009ರಲ್ಲಿ 515 ರೂ. ಇತ್ತು. ಇದೀಗ ಇದು 750 ರೂ.ಗೆ ಹೆಚ್ಚಳಗೊಂಡಿದೆ ಎಂದು ತಿಳಿಸಿದಾಗ, ಆಪರೇಷನ್ ಆಗುತ್ತಿಲ್ಲ, ಆದರೆ ಆಗಿದೆಯೆಂದು

ಬಿಲ್ ಮಾಡ ಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ದನಿಗೂಡಿಸಿದ ಮಾಜಿ ಮೇಯರ್ ಹಾಗೂ ಸದಸ್ಯ ಅಯೂಬ್‍ಖಾನ್, 2012ರಲ್ಲಿ 27 ಸಾವಿರ ಇದ್ದ ಬೀದಿ ನಾಯಿಗಳ ಸಂಖ್ಯೆ ಪ್ರಸ್ತುತ 40 ಸಾವಿರಕ್ಕೆ ಮುಟ್ಟಿರುವುದು ನಿಮ್ಮ ಮಾಹಿತಿ ಯಿಂದಲೇ ಗೊತ್ತಾಗುತ್ತಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಿಯೂ ಹೀಗೆ ಹೆಚ್ಚಳಗೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಜನರಿಗೆ ಜಾಗವಿಲ್ಲದ ಪರಿಸ್ಥಿತಿ ಇರುವಾಗ ಉದ್ದೇಶಿತ ಬೀದಿ ಹಾಗೂ ಹುಚ್ಚು ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಐದು ಎಕರೆ ಪ್ರದೇಶ ಏಕೆ ಬೇಕು? ಮೊದಲು ಇದಕ್ಕೆ ಸಂಬಂಧಿಸಿದ ಟೆಂಡರ್ ತಡೆಹಿಡಿದು, ಅದರ ಅಗತ್ಯತೆ ಬಗ್ಗೆ ಪರಿಶೀಲಿಸಿ ಮುಂದು ವರೆಯುವಂತೆ ಮೇಯರ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದು ಇತರೆ ವಿಷಯ ಗಳ ಚರ್ಚೆ ಅವಕಾಶ ಮಾಡಿಕೊಟ್ಟರು. ಉಪಮೇಯರ್ ಷಫಿ ಅಹಮದ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಹಾಗೂ ಪಾಲಿಕೆ ಸದಸ್ಯರು ಸೇರಿದಂತೆ ಅಧಿಕಾರಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೀದಿ ದೀಪ ಅಳವಡಿಕೆಗೆ ಅವಕಾಶ ಕೊಡಿ

ಮೈಸೂರು ನಗರಕ್ಕೆ ನಿರ್ವಾಹಿತ ಉತ್ತಮ ಇಂಧನ ಕ್ಷಮತೆಯ ಎಲ್‍ಇಡಿ ಬೀದಿ ದೀಪ ಅಳವಡಿಸುವ ರಾಜ್ಯ ಸರ್ಕಾರದ ಯೋಜನೆಯಿಂದಾಗಿ ಕೆಟ್ಟಿರುವ ಬೀದಿ ದೀಪಗಳನ್ನು ಬದಲಾಯಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಒಂದೂವರೆ ವರ್ಷಗಳಿಂದ ಬೀದಿ ದೀಪ ಅಳವಡಿಸ ಲಾಗದೇ ಅಪರಾಧಗಳ ಸಂಖ್ಯೆ ಹೆಚ್ಚಳವಾಗು ತ್ತಿವೆ. ನಿಮ್ಮದೇ ರಾಜ್ಯ ಸರ್ಕಾರ ಇದ್ದು, ಒಂದು ನಿಯೋಗದೊಂದಿಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಇದಕ್ಕೊಂದು ಪರಿಹಾರ ನೀಡಿ ಎಂದು ಮೇಯರ್ ಅವ ರಲ್ಲಿ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್ ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಶಿವಕು ಮಾರ್, ಈ ರೀತಿ ಮಾಡುವ ಮೂಲಕ ರಾಜ್ಯ ಸರ್ಕಾರ ಮೈಸೂರು ನಗರ ಪಾಲಿಕೆ ಅಧಿಕಾರವನ್ನು ಕಿತ್ತುಕೊಂಡಿದೆ ಎಂದು ಕಿಡಿಕಾರಿದರು. ಇದೇ ವಿಷಯದ ಹಿನ್ನೆಲೆಯಲ್ಲಿ ಮೈಸೂರು ಪೇಟಕ್ಕೆ ಬಲ್ಬ್ ಅಳವಡಿಸಿಕೊಂಡು ಸಭೆಗೆ ಬಂದಿದ್ದ ಮಾ.ವಿ.ರಾಮ್‍ಪ್ರಸಾದ್, ಒಂದು ಬೀದಿ ದೀಪ ಅಳವಡಿಸಿಕೊಡಲಾಗುತ್ತಿಲ್ಲ ಎಂದರೆ ನಮ್ಮದು ಎಂತಹ ಪರಿಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಪ್ತಿಗೆ ಒಳಗಾಗುವ ದುಸ್ಥಿತಿ ಪಾಲಿಕೆಗೆ ಬಂತೆ

ಯೋಜನಾ ನಿರಾಶ್ರಿತರಿಗೆ ಸಮರ್ಪಕ ಭೂ ಪರಿಹಾರ ನೀಡಿಲ್ಲವೆಂದು ಪಾಲಿಕೆ ಆಯುಕ್ತರ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಗಿದೆ ಎಂಬ ಸುದ್ದಿಯನ್ನು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು.

ಪಾಲಿಕೆ ಈ ದುಸ್ಥಿತಿಗೆ ಬಂದಿದೆಯೇ? ಎಂದು ಬಿ.ವಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರಲ್ಲದೆ, ಈ ಸಂಬಂಧ ಪಾಲಿಕೆ ಆಸ್ತಿ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ವರದಿ ಕೊಡಿಸಿ ಎಂದು ಒತ್ತಾಯಿಸಿದರು. ಈ ಸಂಬಂಧ 8 ಕೋಟಿ ರೂ. ಪರಿಹಾರ ಎಂದರೆ ದೊಡ್ಡ ಮೊತ್ತವಾಗುತ್ತದೆ. ಇದನ್ನು ರಾಜ್ಯ ಸರ್ಕಾರ ಭರಿಸ ಬೇಕು. ಇದಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಆರೀಫ್ ಹುಸೇನ್, ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಕ್ಕೆ 15 ಸಾವಿರ ರೂ. ಬಡ್ಡಿ ಪಾವತಿ ಮಾಡಬೇಕಿರುತ್ತದೆ. ಹೀಗಾಗಿ ಇದರ ಬಗ್ಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶೀಘ್ರ ಪಾಲಿಕೆ ಬಜೆಟ್ ಮಂಡಿಸಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸಿ ಆಗಿದೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ವೇಳಾ ಪಟ್ಟಿ ಪ್ರಕಟಗೊಳ್ಳಲಿದೆ. ಅಷ್ಟರೊಳಗೆ ಬಜೆಟ್ ಮಂಡನೆ ಮಾಡದಿದ್ದರೆ, ಬಳಿಕ ಚುನಾವಣಾ ನೀತಿ ಸಂಹಿತೆ ಎದುರಾಗುತ್ತದೆ. ಹೀಗಾಗಿ ಶೀಘ್ರದಲ್ಲಿ ಕೌನ್ಸಿಲ್ ಸಭೆ ಕರೆದು ಬಜೆಟ್ ಮಂಡಿಸಿ ಅನುಮೋದನೆ ಪಡೆಯುವಂತೆ ಮೇಯರ್ ಅವರಿಗೆ ಸದಸ್ಯ ಕೆ.ವಿ.ಶೀಧರ್ ಸಲಹೆ ನೀಡಿದರು.

ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಅಕ್ರಮ ಆರೋಪ ಸಂಬಂಧ ಎಸಿ-ಡಿಓ ಅವರನ್ನು ಹೊಣೆಗಾರರನ್ನಾಗಿ ಮಾಡಿ
ಮೈಸೂರಿನ ಎಂಜಿ ರಸ್ತೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ಸಂಬಂಧ ಸತ್ಯಶೋಧನಾ ಸಮಿತಿಗೆ ನಿಯೋಜಿಸಿರುವ ಸದಸ್ಯರ ಜೊತೆಗೆ ಇನ್ನಷ್ಟು ವಿಷಯ ಪರಿಣಿತರನ್ನು ಸಮಿತಿಗೆ ನಿಯೋಜಿಸುವಂತೆ ಸಲಹೆ ನೀಡಿದ ಸದಸ್ಯ ಕೆ.ವಿ.ಶ್ರೀಧರ್, ಪ್ರಕರಣ ಸಂಬಂಧ ವಲಯ ಆಯುಕ್ತರು ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದಕ್ಕೂ ಮುನ್ನ ಮಾತನಾಡಿದ ಸದರಿ ಪ್ರಕರಣದ ದೂರುದಾರರೂ ಆದ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಮೇಯರ್ ಅವರನ್ನು ಉದ್ದೇಶಿಸಿ ಅಕ್ರಮ ಸಂಬಂಧ ಸತ್ಯ ಸಂಶೋಧನಾ ಸಮಿತಿ ರಚಿಸಿ ದ್ದೀರಾ? ಈ ಬಗ್ಗೆ ಪಾದರ್ಶಕ ತನಿಖೆ ಆಗುವ ವಿಶ್ವಾಸವಿದೆ ಎಂದು ನುಡಿದರಲ್ಲದೆ, ನಗರ ಪಾಲಿಕೆ ಆಸ್ತಿ ಒತ್ತುವರಿ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

Translate »