ನಾಲ್ವರು ಖದೀಮರ ಸೆರೆ: ಬೈಕ್, 32 ಸಾವಿರ ನಗದು ವಶ
ಕೊಡಗು

ನಾಲ್ವರು ಖದೀಮರ ಸೆರೆ: ಬೈಕ್, 32 ಸಾವಿರ ನಗದು ವಶ

July 25, 2018

ಮಡಿಕೇರಿ:  ನಗರದ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಈ ಹಿಂದೆ ಹಲವಾರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಗಳಾಗಿದ್ದು, ಅನೇಕ ವರ್ಷಗಳ ಕಾಲ ಸೆರೆ ವಾಸವನ್ನು ಅನುಭವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಂಟಿಕೊಪ್ಪ ಹಾಲೇರಿಯ ಸುರೇಶ್, ಕೇರಳ ಕಂಜಿಗೋಡ್‍ನ ಸುಭಾಷ್, ಹುಣಸೂರಿನ ಸುರೇಶ್ ನಾರಾಯಣ್, ಹಾಸನದ ದೊಡ್ಡಮಗ್ಗೆ ಹೋಬಳಿಯ ಕುಮಾರ್ ಅವರುಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿಗಳು ಜು,21ರ ರಾತ್ರಿ ಆಂಜನೇಯ ದೇವಾಲಯದ ಬೀಗ ಮುರಿದು ಹುಂಡಿಯ ಹಣವನ್ನು ಕಳವು ಮಾಡಿದ್ದರು. ಅಲ್ಲದೆ ಶಾಪಿಂಗ್ ಮಳಿಗೆ ಮುಂದೆ ನಿಲ್ಲಿಸಿದ್ದ ಪ್ಯಾಷನ್ ಬೈಕನ್ನು ಕದ್ದು ಪರಾರಿಯಾಗಿದ್ದರು. ದೇವಾಲಯ ಹುಂಡಿ ಕಳವು ಕುರಿತು ದೇವಾಲ ಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು. ಮಡಿಕೇರಿ ನಗರ ಪೊಲೀಸರು ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದು, ನಾಲ್ವರು ಆರೋಪಿಗಳಿಂದ ಆಂಜನೇಯ ದೇವಾಲಯದಿಂದ ಕಳವಾಗಿದ್ದ ರೂ.32 ಸಾವಿರ ಹಣ ಮತ್ತು ಕಳುವಾಗಿದ್ದ ಬೈಕನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಎಸ್ಪಿ ಡಾ.ಸುಮನ್ ಪೆಣ್ಣೇಕರ್ ಅವರ ನಿರ್ದೇಶನದ ಮೇರೆಗೆ ಡಿವೈಎಸ್‍ಪಿ ಸುಂದರಾಜ್, ವೃತ್ತ ನಿರೀಕ್ಷಕ ಮೇದಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ಠಾಣಾಧಿಕಾರಿ ಷಣ್ಮುಗಂ, ಎಎಸ್‍ಐ ಸುಬ್ಬಯ್ಯ, ಸಿಬ್ಬಂದಿಗಳಾದ ರಾಯ್, ಸಿದ್ದಾರ್ಥ, ದಿನೇಶ್ ಹಾಗೂ ಮಧು ಕಾರ್ಯಾಚರಣೆಯಲ್ಲಿ ಪಾಲೊಂಡಿದ್ದರು.

Translate »