ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ
ಮೈಸೂರು

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ

January 2, 2020

ಮೈಸೂರು, ಜ. 1(ಆರ್‍ಕೆ)- ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿರುವ ವ್ಯಕ್ತಿಯೊಬ್ಬರ ವಿರುದ್ಧ ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಹೆಬ್ಬಾಳು 1ನೇ ಹಂತದ ಎಂಜಿ ಕೊಪ್ಪಲು ಮುಖ್ಯ ರಸ್ತೆಯ ಜೈನ್ ಎಂಟರ್‍ಪ್ರೈಸಸ್ ಮಾಲೀಕ ವಿಜಯ್ ವಂಚನೆ ಆರೋಪ ಎದುರಿಸು ತ್ತಿರುವವರು. ಈ ಸಂಬಂಧ ಹೆಬ್ಬಾಳಿನ ಸುಖೇಶ ಎಂಬುವರು ದೂರು ನೀಡಿದ್ದು, ತನಗೆ ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 80,000 ರೂ. ಹಣ, ಪಾಸ್ ಪೋರ್ಟ್ ಅನ್ನು ಪಡೆದಿರುವ ವಿಜಯ್, ನಂತರ ಕೆಲಸ ಕೊಡಿಸದೇ ವಂಚಿಸಿ ತನ್ನ ಕಚೇರಿ ಬಂದ್ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳು ಪೊಲೀಸರು, ಮಂಗಳವಾರ ಎಂಜಿ ಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ವಿಜಯ್‍ನ ಜೈನ್ ಎಂಟರ್‍ಪ್ರೈಸಸ್ ಬಳಿ ತೆರಳಿ ಮಹಜರು ನಡೆಸುತ್ತಿದ್ದಾಗ ಇತರರೂ ಬಂದು ತಮಗೂ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

 

Translate »