ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗೆ ವಂಚನೆ ಮಹಿಳೆ ವಿರುದ್ಧ ಪ್ರಕರಣ ದಾಖಲು
ಮೈಸೂರು

ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗೆ ವಂಚನೆ ಮಹಿಳೆ ವಿರುದ್ಧ ಪ್ರಕರಣ ದಾಖಲು

December 21, 2019

ಮೈಸೂರು,ಡಿ.20(ಎಸ್‍ಬಿಡಿ)-ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೊಂದು ವಸ್ತು ಡೆಲವರಿ ಆಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಮಹಿಳೆಯೊಬ್ಬರು ಡೆಲವರಿ ಆದ ವಸ್ತುವನ್ನು ತಾವಿಟ್ಟುಕೊಂಡು ಬೇರೊಂದು ವಸ್ತುವನ್ನು ಕಂಪನಿಗೆ ವಾಪಸ್ಸು ಕಳುಹಿಸಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಯಲಕ್ಷ್ಮೀಪುರಂ ನಿವಾಸಿ ಅಶ್ವಿನಿ, ಅಮೆಜಾನ್ ಕಂಪನಿಗೆ ವಂಚಿಸಿ, ಸಿಕ್ಕಿಬಿದ್ದಿದ್ದಾರೆ. ಇವರು ಡಿ.9ರಂದು ಮನೋರಮಾ ಹೆಸರಿನಲ್ಲಿ ಆರ್ಡರ್ ಮಾಡಿದ್ದ ಜೀನ್ಸ್ ಪ್ಯಾಂಟ್ ಡಿ.18ರಂದು ಡೆಲವರಿ ಆಗಿತ್ತು. ಬಳಿಕ ಪ್ಯಾಂಟ್ ಸರಿಯಾಗಿಲ್ಲ ಎಂದು ಕೆಲವೇ ಗಂಟೆಗಳಲ್ಲಿ ಕಂಪನಿಗೆ ವಾಪಸ್ಸು ಕಳುಹಿಸಿದ್ದರು. ಈ ಬಗ್ಗೆ ಅಮೆಜಾನ್ ಕಂಪನಿಯ ತನಿಖಾ ತಂಡದ ಮ್ಯಾನೇಜರ್ ಎಸ್.ರಾಜಾರೆಡ್ಡಿ ಪರಿಶೀಲನೆ ನಡೆಸಿದಾಗ, ಮನೋರಮಾ ಹೆಸರಿನವರಿಗೆ ಡೆಲವರಿ ಆಗಿದ್ದ ಜೀನ್ಸ್ ಪ್ಯಾಂಟ್ ಬದಲಾಗಿ ಉಪಯೋಗಿಸಿದ್ದ ಬೇರೊಂದು ಕಂಪನಿ ಪ್ಯಾಂಟ್ ಅನ್ನು ವಾಪಸ್ಸು ಮಾಡಿರುವುದು ಸ್ಪಷ್ಟವಾಯಿತು. ಅಲ್ಲದೆ ಈ ಹಿಂದೆಯೂ ಹಲವು ಬಾರಿ ಪರಿಚಿತರ ಮೊಬೈಲ್ ಮೂಲಕ ಬೇರೆ ಬೇರೆ ಹೆಸರಿನಲ್ಲಿ 48ಕ್ಕೂ ಹೆಚ್ಚು ವಸ್ತುಗಳನ್ನು ಆರ್ಡರ್ ಮಾಡಿ ಪಡೆದುಕೊಂಡು, ಬೇರೆ ವಸ್ತುಗಳನ್ನು ಡೆಲವರಿ ಬಾಯ್ ಮೂಲಕ ಕಂಪನಿಗೆ ವಾಪಸ್ಸು ಮಾಡುವ ಮೂಲಕ ಸುಮಾರು 1.17 ಲಕ್ಷ ರೂ. ವಂಚಿಸಿರುವುದು ಬಯಲಾಗಿದೆ.

ಈ ಸಂಬಂಧ ಅಮೆಜಾನ್ ಕಂಪನಿಯ ತರುಣ್ ವರ್ಮಾ, ತಮ್ಮ ಕಚೇರಿ ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿರುವುದರಿಂದ ಆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »