ಮುಡಾ ನಿವೇಶನ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮಹಿಳೆ ವಿರುದ್ಧ ಕೇಸ್ ದಾಖಲು
ಮೈಸೂರು

ಮುಡಾ ನಿವೇಶನ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮಹಿಳೆ ವಿರುದ್ಧ ಕೇಸ್ ದಾಖಲು

October 6, 2019

ಮೈಸೂರು,ಅ.5(ಎಸ್‍ಪಿಎನ್)-ಮಹಿಳೆಯೊಬ್ಬರು ಮುಡಾ ನಿವೇಶನ ಕೊಡಿಸುವು ದಾಗಿ ಪನ್ಸಾರಿ ಅಂಗಡಿ ಮಾಲೀಕನಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಲಕ್ಷ್ಮೀ ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವರಾಜ ಮಾರುಕಟ್ಟೆಯ ಪನ್ಸಾರಿ ಅಂಗಡಿ ಮಾಲೀಕ ಸಂಜಯ್ ವಂಚನೆಗೊಳಗಾದವರು. ಮೈಸೂರು ಶ್ರೀರಾಂಪುರ ನಿವಾಸಿ ಬಿ.ಎಂ.ಅನಿತಾ ಮೋಸ ಮಾಡಿದವರು. ಸಂಜಯ್, ದೇವರಾಜ ಮಾರುಕಟ್ಟೆ ಯಲ್ಲಿ ಹಲವು ವರ್ಷಗಳಿಂದ ಪನ್ಸಾರಿ ವ್ಯಾಪಾರ ಮಾಡುತ್ತಿದ್ದರು. ಈ ಅಂಗಡಿಗೆ ಅನಿತಾ ತಂದೆ ಪಿ.ವಿ.ಶ್ರೀಧರ್, ಪೂಜಾ ಸಾಮಗ್ರಿ ಕೊಳ್ಳಲು ವಾರಕ್ಕೆರಡು ಬಾರಿ ಹೋಗುತ್ತಿದ್ದರು. ಈ ವೇಳೆ ಸಂಜಯ್‍ಗೆ, ಅನಿತಾ(ಶ್ರೀಧರ್ ಪುತ್ರಿ) 2009ರಿಂದಲೂ ಪರಿಚಯವಿತ್ತು. ಈ ಪರಿಚಯದ ಮೇರೆಗೆ ಅನಿತಾ, ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಪುಂಖಾನುಪುಂಖವಾಗಿ ಸಂಜಯ್‍ಗೆ ಭರವಸೆ ನೀಡಿದ್ದರು. ಅಲ್ಲದೆ, ನಮ್ಮ ತಂದೆ ಪಿ.ವಿ.ಶ್ರೀಧರ್ ಅನೇಕರಿಗೆ ನಿವೇಶನ ಕೊಡಿಸಿದ್ದಾರೆ. ನಿಮಗೂ ನಿವೇಶನ ಬೇಕಿದ್ದರೆ, ನಮ್ಮ ತಂದೆಯ ಮೂಲಕ ನಿವೇಶನ ಖರೀದಿ ಮಾಡುವಂತೆ ಪುಸಲಾಯಿಸಿ, ನಿವೇಶನವೊಂದರ ನಕಲಿ ದಾಖಲಾತಿ ನೀಡಿ, ಹಣ ಪಡೆದಿದ್ದಾರೆ. ಸಂಜಯ್ ತನಗೆ ಅನಿತಾ ನೀಡಿದ್ದ ದಾಖಲಾತಿ ಬಗ್ಗೆ ಮುಡಾದಲ್ಲಿ ಪರಿಶೀಲಿಸಿದಾಗ ಈ ದಾಖಲಾತಿಗಳು ನಕಲಿ ಎಂದು ತಿಳಿದು ಬಂದಿದೆ. ಅಲ್ಲದೆ, ಈ ವಿಚಾರದ ಬಗ್ಗೆ ಪ್ರಶ್ನಿಸಲು ಅನಿತಾ ಮನೆಗೆ ತೆರಳಿದ್ದಾಗ, ಅನಿತಾ ಇದ್ದ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗಿರುವುದು ಬೆಳಕಿಗೆ ಬಂದಿದೆ.

Translate »