ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ
ಕೊಡಗು

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ

September 1, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಉಂಟಾದ ಅತಿವೃಷ್ಟಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮನೆ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವುದಲ್ಲದೆ ಸಾರ್ವಜನಿಕ ರಸ್ತೆ, ಸೇತುವೆಯ ಸಂಪರ್ಕ ವನ್ನು ಕಳೆದುಕೊಂಡಿದ್ದು, ಈ ಬಗ್ಗೆ ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 25 ಲಕ್ಷವನ್ನು ನೀಡುವಂತೆ, ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡ ಹಿನ್ನೆಲೆ ರಮೇಶ್ ಕುಮಾರ್ ಅವರು ಎಲ್ಲಾ ಶಾಸಕರುಗಳಿಗೆ ಪತ್ರ ಬರೆದು ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ. ನೀಡುವಂತೆ ಕೋರಿದ್ದಾರೆ.

ಈ ಸಂಬಂಧ ಹಣ ವ್ಯಯ ಮಾಡಲು ಅಗತ್ಯ ತಿದ್ದುಪಡಿ ಮಾಡುವಂತೆ ಮುಖ್ಯ ಮಂತ್ರಿಯವರಲ್ಲಿ ವಿಧಾನ ಸಭಾಧ್ಯಕ್ಷರು ಕೋರಿದ್ದಾರೆ. ಹಾಗೆಯೇ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆದಿದ್ದಾರೆ.

ಸ್ವಾತಂತ್ರ್ಯ ಭಾರತ ದೇಶಕ್ಕೆ ಎರಡು ಮಹಾನ್ ದಂಡ ನಾಯಕರನ್ನು ನೀಡಿದ ವೀರ ಭೂಮಿ ಕೊಡಗು ಜಿಲ್ಲೆ ಎಂದು ನಾವು ಸ್ಮರಿಸಬೇಕು. ಇದೇ ರಾಜ್ಯದಲ್ಲಿ ಇಂದಿಗೂ ಸಹ ಸ್ವ-ಪ್ರೇರಣೆಯಿಂದ ರಕ್ಷಣಾ ಪಡೆಗಳಿಗೆ ಅತ್ಯಂತ ಅಧಿಕ ಸಂಖ್ಯೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರುವ ಜಿಲ್ಲೆ ಇದು. ಇದೆಲ್ಲದರ ಜೊತೆಗೆ ಪ್ರಾಕೃತಿಕವಾಗಿ ನಮ್ಮ ಇಡೀ ರಾಜ್ಯದಲ್ಲಿ ಇದು ಅತ್ಯಂತ ರಮಣೀಯ ಪ್ರದೇಶವಾಗಿತ್ತು. ಕೊಡಗು ಜಿಲ್ಲೆಯಲ್ಲಿ ಆಗಿರುವಂತಹ ಅನಾಹುತಗಳನ್ನು ಗಮನಿಸಿದಾಗ ಒಂದು ಕ್ಷಣ ನಮ್ಮ ಮನಸ್ಸು ತಲ್ಲಣ ಗೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯೊಳಗೆ ಸಾಧ್ಯವಿರುವ ಎಲ್ಲಾ ಪರಿಹಾರಗಳನ್ನು ಕೊಡಗು ಜಿಲ್ಲೆಗೆ ಸ್ಪಂದಿಸುತ್ತಿದ್ದು, ಆ ನಿಟ್ಟಿನಲ್ಲಿ ವಿಧಾನಸಭೆಯ ಎಲ್ಲಾ ಶಾಸಕರು ಕೈಜೋಡಿಸುವಂತೆ ವಿಧಾನ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್ ಅವರು ಪತ್ರದಲ್ಲಿ ಕೋರಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿ ಪತ್ರ ಬರೆದಿರುವುದಕ್ಕೆ ವಿಧಾನ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Translate »