ನೆರೆ ರಾಷ್ಟ್ರಗಳ ಹಿಂದೂಗಳಿಗೆ ಆಸರೆಯಾಗಲು ಅಂದೇ ಗಾಂಧಿ ಹೇಳಿದ್ದರು
ಮೈಸೂರು

ನೆರೆ ರಾಷ್ಟ್ರಗಳ ಹಿಂದೂಗಳಿಗೆ ಆಸರೆಯಾಗಲು ಅಂದೇ ಗಾಂಧಿ ಹೇಳಿದ್ದರು

December 24, 2019

`ಸಿಎಎ’, `ಎನ್‍ಆರ್‍ಸಿ’ ಸಮರ್ಥಿಸಿಕೊಂಡ ಗೋ.ಮಧುಸೂದನ್
ಮೈಸೂರು, ಡಿ.23(ಪಿಎಂ)- ನೆರೆ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಾರತಕ್ಕೆ ಬಂದರೆ ಅವರಿಗೆ ಆಸರೆಯಾಗಲು ಭಾರತ ಸರ್ಕಾರ ಪ್ರಥಮ ಆದ್ಯತೆ ಕೊಡಬೇಕು ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಕೇಂದ್ರ ಸರ್ಕಾರದ `ಸಿಎಎ’ ಹಾಗೂ `ಎನ್‍ಆರ್‍ಸಿ’ಯನ್ನು ಸಮರ್ಥಿಸಿಕೊಂಡರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಇಬ್ಭಾಗ ವಾಗಿದ್ದು ಧರ್ಮದ ಆಧಾರದ ಮೇಲೆಯೇ. ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದರೋ ಅಂತಹ ಪ್ರದೇಶವನ್ನು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎಂದು ಘೋಷಣೆ ಮಾಡಲಾಯಿತು. ಆ ಸಂದರ್ಭದಲ್ಲೇ ಬಾಬು ರಾಜೇಂದ್ರ ಪ್ರಸಾದ್, ನೆಹರು ಅವರು `ನಿಮ್ಮ ಧಾರ್ಮಿಕ ಆಚರಣೆ ಉಳಿಸಿಕೊಳ್ಳಲು ಕಷ್ಟವಾದರೆ, ಕಿರುಕುಳ ಉಂಟಾದರೆ ಯಾವತ್ತು ಬೇಕಾದರೂ ಭಾರತಕ್ಕೆ ಬರಬಹುದು’ ಎಂದು ಹಿಂದೂಗಳಿಗೆ ಆಶ್ವಾಸನೆ ನೀಡುತ್ತಾರೆ ಎಂದು ವಿವರಿಸಿದರು.

ಜೊತೆಗೆ ಗಾಂಧಿಯವರು ಇಂತಹವರಿಗೆ ಪ್ರಥಮ ಆದ್ಯತೆ ನೀಡುವುದು ಭಾರತ ಸರ್ಕಾರದ ಕರ್ತವ್ಯ ಎಂದು ಅಂದೇ ಹೇಳಿದ್ದಾರೆ. ಆಫ್ಘಾನಿಸ್ತಾನ್, ಪಾಕಿಸ್ತಾನ್ ಹಾಗೂ ಬಾಂಗ್ಲಾ ದೇಶಗಳು ತಮ್ಮದು ಇಸ್ಲಾಂ ಧರ್ಮದ ರಾಷ್ಟ್ರವೆಂದು ಘೋಷಣೆ ಮಾಡಿಕೊಂಡಿವೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಹಲವು ಅಲ್ಪಸಂಖ್ಯಾತ ಹಿಂದೂಗಳು ಬೇರೆ ಬೇರೆ ದೇಶಗಳಲ್ಲಿ ವಲಸೆ ಹೋಗಿ ನೆಲೆ ಕಂಡುಕೊಂಡಿದ್ದಾರೆ. ಬಹುತೇಕರು ಭಾರತಕ್ಕೂ ಬಂದಿದ್ದಾರೆ. ಹೀಗೆ ಬಂದು ಇಲ್ಲಿ ಕೂಲಿನಾಲಿ ಮಾಡಿ ಬದುಕು ದೂಡುತ್ತಿದ್ದಾರೆ ಎಂದರು.

ಪೌರತ್ವ ಕಾಯ್ದೆ ಬಿಜೆಪಿ ಸರ್ಕಾರ ಮಾಡಿದ್ದಲ್ಲ. ಈ ಹಿಂದೆಯೇ ಇದ್ದ ಕಾಯ್ದೆಯಲ್ಲಿ ವಲಸಿಗರು 12 ವರ್ಷ ದೇಶದಲ್ಲಿ ನೆಲೆಸಿದರೆ ಪೌರತ್ವ ನೀಡಬಹುದು ಎಂದು ಇತ್ತು. ಈಗ ತಿದ್ದುಪಡಿ ಮೂಲಕ 5 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಕಾಂಗ್ರೆಸ್‍ನವರು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಗಲಭೆ ಏಳಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಇದನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಎ ವಿರುದ್ಧ ಪ್ರತಿಭಟನೆ ಮಾಡುವವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಗೋ.ಮಧುಸೂದನ್, ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದರೋ ಗೊತ್ತಿಲ್ಲ. ಪ್ರತಿಭಟನೆ ಮಾಡುವವರಿಗೆ ಆ ಕಾನೂನಿನ ಬಗ್ಗೆ ಅರಿವಿಲ್ಲ ಎಂಬ ಅರ್ಥದಲ್ಲಿ ಹೇಳಿರಬೇಕು ಎಂದರು.

Translate »