ಕುಡುಕರ ಆಶ್ರಯ ತಾಣವಾದ ಕ್ಯಾಂಪಸ್
ಮೈಸೂರು

ಕುಡುಕರ ಆಶ್ರಯ ತಾಣವಾದ ಕ್ಯಾಂಪಸ್

December 8, 2019

ಮೈಸೂರು, ಡಿ.7(ಆರ್‍ಕೆಬಿ)-ಲಕ್ಷಾಂತರ ಮಂದಿ ಪದ ವೀಧರರನ್ನು ದೇಶ, ವಿದೇಶಕ್ಕೆ, ವಿಶ್ವಕ್ಕೆ ಕೊಡುಗೆ ನೀಡಿದ ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಕ್ಯಾಂಪಸ್ ಇಂದು ಕುಡುಕರ ಹಾಗೂ ಇನ್ನಿತರೆ ಅವ್ಯವಸ್ಥೆಯ ತಾಣವಾಗಿ ಮಾರ್ಪಡುತ್ತಿದೆ.

ಬುದ್ಧ, ಗಾಂಧಿ, ಡಾ.ಅಂಬೇಡ್ಕರ್, ಕುವೆಂಪು ಅವ ರಂತಹ ಮಹಾನ್ ಚೇತನಗಳ ಪ್ರತಿಮೆ, ಪುತ್ಥಳಿಗಳಿರುವ ಮಾನಸಗಂಗೋತ್ರಿ ಕ್ಯಾಂಪಸ್ ಅನ್ನು ಕಿಡಿಗೇಡಿಗಳು ಕುಡಿತದ ತಾಣವಾಗಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ `ಮೈಸೂರು ಮಿತ್ರ’ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬಂದ ದೃಶ್ಯ ಕಸಿವಿಸಿಯನ್ನುಂಟು ಮಾಡಿತು. ಮೈಸೂರು ವಿವಿಯ ಘನತೆಗೆ ಕಿರೀಟಪ್ರಾಯ ವಾದ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಇಂಥ ಘಟನೆಗಳು ಕುವೆಂಪು ಅವರ ಕನಸಿನ ಮಾನಸ ಗಂಗೋತ್ರಿಯ ಘನತೆಯನ್ನು ಹಾಳು ಮಾಡುತ್ತಿದೆ.

ಮೈಸೂರು ವಿಶ್ವ ವಿದ್ಯಾನಿಲಯ 2016ರಲ್ಲಿ ಅದ್ಧೂರಿಯಾಗಿ ಶತಮಾನೋತ್ಸವ ಆಚರಿಸಿಕೊಂಡಿತು. ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು, ದೇ.ಜವರೇಗೌಡ ಸೇರಿದಂತೆ ನೂರಾರು ಮಂದಿಯನ್ನು ಸ್ಮರಿಸಿಕೊಳ್ಳಲಾಗಿತ್ತು.

ಶತಮಾನೋತ್ಸವದ ವೇಳೆ ಕುಲಪತಿಗಳಾಗಿದ್ದ ಪ್ರೊ.ಕೆ. ಎಸ್.ರಂಗಪ್ಪ ಅವರು ಶತಮಾನೋತ್ಸವದ ಸವಿ ನೆನಪಿಗಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಹಲವು ಹೊಸ, ವಿನೂತನ, ಸುಂದರ ಕಟ್ಟಡಗಳು ಹಾಗೂ ಸ್ಮಾರಕಗಳನ್ನು ನಿರ್ಮಿಸಿದ್ದರು. ಶತಮಾನೋತ್ಸವ ಮ್ಯೂಸಿಯಂ, ಅಣುಜೀವ ವಿಜ್ಞಾನ, ಸಾವ ಯವ ರಸಾಯನಶಾಸ್ತ್ರ ವಿಭಾಗ, ಮೌಲ್ಯ ಭವನ, ರೌಂಡ್ ಕ್ಯಾಂಟೀನ್ ಶಾಪಿಂಗ್ ಕಾಂಪ್ಲೆಕ್ಸ್, ಜೆನೆಟಿಕ್ಸ್ ಮತ್ತು ಜೆನೊ ಮಿಕ್ಸ್ ವಿಭಾಗ, ಮೈಸೂರ್ ಸ್ಕೂಲ್ ಆಫ್ ಲಾ, ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಸೇರಿದಂತೆ ಹತ್ತು ಹೊಸ ಕಟ್ಟಡಗಳು ತಲೆ ಎತ್ತಿದವು. ಒಂದಕ್ಕಿಂತ ಒಂದು ಸುಂದರ ವಿನ್ಯಾಸದಲ್ಲಿ ಅವು ರೂಪುಗೊಂಡವು. ಅವುಗಳಲ್ಲಿ ಕೆಲವೊಂ ದನ್ನು ಬಿಟ್ಟರೆ ಉಳಿದವು ಇನ್ನೂ ಕಾರ್ಯಾರಂಭ ಮಾಡದೆ ಧೂಳು ತುಂಬಿ ಕೊಂಪೆಯಂತೆ ಗೋಚರಿಸುತ್ತಿವೆ.

ಆದರೆ ಈ ನಡುವೆ ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಮಾನಸಗಂಗೋತ್ರಿಯ ಕ್ಯಾಂಪಸ್ ಅನ್ನು ಕುಡುಕರ ತಾಣವಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಅವಳಿ ಕಟ್ಟಡ MOLECULAR BIOLOGY (ಅಣುಜೀವ ವಿಜ್ಞಾನ) ಮತ್ತು ORGANIC CHEMISTRY BLOCK (ಸಾವ ಯವ ರಸಾಯನಶಾಸ್ತ್ರ ವಿಭಾಗ)ದ ಮುಂದಿನ ಅಂಗಳ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು, ಖಾರ ಇನ್ನಿತರೆ ಸ್ನ್ಯಾಕ್ಸ್ ತಿಂದ ಪ್ಲಾಸ್ಟಿಕ್ ಕವರ್‍ಗಳು, ಅಲ್ಲಿಯೇ ಊಟ ಮಾಡಿ ಬಿಸಾಡಿದ ಪ್ಲಾಸ್ಟಿಕ್, ಪೇಪರ್ ತಟ್ಟೆ, ಲೋಟಗಳು ಚೆಲ್ಲಾಡಿವೆ. ಇಲ್ಲಿ ಬಿಸಾಡಿರುವ ಬಿಯರ್ ಬಾಟಲಿಗಳು ನಿನ್ನೆ ಮೊನ್ನೆಯಷ್ಟೇ ಕುಡಿದು ಬಿಸಾಡಲಾಗಿದೆ. ಇದು ಕುವೆಂಪು, ಗಾಂಧಿ, ಅಂಬೇಡ್ಕರ್ ಅವರಿಗೆ ಅಗೌರವ ತರುವಂತಹ ಹೀನಕೃತ್ಯ.

ಗಂಗೋತ್ರಿಯ ಪೂರ್ವೋತ್ತರ ಭಾಗದಲ್ಲಿ ಶತಮಾನೋ ತ್ಸವ ಮ್ಯೂಸಿಯಂ ಕಟ್ಟಡದÀ ಪಕ್ಕದಲ್ಲಿನ ಅವಳಿ ಕಟ್ಟಡದ ಅಂಗಳದಲ್ಲಿ ಇಂತಹ ಕುಡಿದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿವೆ. ಈ ಮಧ್ಯೆ, ವಿಶ್ವವಿದ್ಯಾನಿಲಯವು ತನ್ನ ಶತಮಾನದ ಘಟಿಕೋತ್ಸವವನ್ನು ಫೆಬ್ರವರಿ ಅಥವಾ ಮಾರ್ಚ್ 2020ರಲ್ಲಿ ನಡೆಸಲು ಸಜ್ಜಾಗುತ್ತಿರುವಾಗಲೇ ಇಂಥ ಘಟನೆಗಳು ವಿಶ್ವವಿದ್ಯಾನಿಲಯದ ಘನತೆಗೆ ಕುಂದುಂಟು ಮಾಡುವಂತಿದೆ. ಕಟ್ಟಡದ ಹೊರಗೆ ಕಾಂಪೌಂಡ್ ಇಲ್ಲ, ರಕ್ಷಕರಿಲ್ಲ. ನಾಯಿಗಳ ಆವಾಸ ಸ್ಥಾನವಾಗಿ ಮಾರ್ಪ ಟ್ಟಿದ್ದು, ಕುಡುಕರಿಗೆ ಹೇಳಿ ಮಾಡಿಸಿದಂತಿದೆ. ಕೂಡಲೇ ಮೈಸೂರು ವಿವಿ ಆಡಳಿತ ಎಚ್ಚೆತ್ತು ಘನತೆಯುಳ್ಳ ಮಾನಸ ಗಂಗೋತ್ರಿಯ ಹಿರಿಮೆಯನ್ನು ಕಾಪಾಡಿಕೊಳ್ಳಬೇಕಿದೆ.

Translate »