ಮಾ.31, ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ
ಕೊಡಗು

ಮಾ.31, ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ

March 25, 2019

ಮಡಿಕೇರಿ: ಅಪ್ರತಿಮ ಸೇನಾನಿ ಜನರಲ್ ತಿಮ್ಮಯ್ಯ ಅವರ 112ನೇ ಜನ್ಮದಿನವನ್ನು ಮಾ.31ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ, ಜಿಲ್ಲಾಡಳಿತದ ಸಹಭಾಗಿತ್ವದೊಂದಿಗೆ ಆಚರಿಸುತ್ತದೆ ಎಂದು ಫೋರಂನ ಪ್ರಮುಖರು ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಸ್ ಅವರೊಂದಿಗೆ ಚರ್ಚಿಸಿದ ಫೋರಂನ ಪದಾಧಿಕಾರಿಗಳು, ಸರಕಾರಿ ಕಾರ್ಯಕ್ರಮವಾಗಿ ಜನರಲ್ ತಿಮ್ಮಯ್ಯ ಜನ್ಮದಿನವನ್ನು ಆಚರಿಸಬೇಕೆಂದು ಮನವಿ ಮಾಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನವನ್ನು ಸರಕಾರೀ ಪ್ರಾಯೋಜಕತ್ವದಲ್ಲಿ ಆಚರಿಸಲಾಗುತ್ತಿದೆ. ಜನರಲ್ ತಿಮ್ಮಯ್ಯ ಅವರ ಜನ್ಮದಿನವನ್ನು ಕೂಡ ಸರಕಾರದ ವತಿಯಿಂದ ಆಚರಿಸಬೇಕೆಂದು ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರಕಾರದಿಂದ ಸೂಕ್ತ ಸ್ಪಂದನೆ ದೊರಕಿಲ್ಲ ಎಂದು ಫೋರಂ ಪದಾಧಿಕಾರಿ ಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಮಾತ್ರವಲ್ಲದೇ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಮಾ.31ರಂದು ಬೆಳಿಗೆ 10.30 ಗಂಟೆಗೆ ಜನರಲ್ ತಿಮ್ಮಯ್ಯ ಅವರ ಹುಟ್ಟಿದ ಮನೆ ಸನ್ನಿಸೈಡ್‍ನಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಫೋರಂ ನೊಂದಿಗೆ ಜಿಲ್ಲಾಡಳಿತ ಕೂಡ ಕೈಜೋಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕರ್ನಲ್ ಸುಬ್ಬಯ್ಯ ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಮಾಜಿ ಸೈನಿಕರು ತಮ್ಮ ಸೇನಾ ಮೆಡಲ್‍ಗಳನ್ನು ಧರಿಸಿಕೊಂಡು ಬರುವಂತೆ ಕರ್ನಲ್ ಸುಬ್ಬಯ್ಯ ಮನವಿ ಮಾಡಿದರು. ಫೋರಂ ಸಂಚಾಲಕ ಮೇಜರ್ ನಂಜಪ್ಪ ಮಾತನಾಡಿ, ಸನ್ನಿಸೈಡ್ ನಿವಾಸವನ್ನು ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ ಆಗಿ ಮಾರ್ಪಡಿಸುವ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ದೇಶದ ವಿವಿಧ ರೆಜಿಮೆಂಟ್‍ಗಳಲ್ಲಿದ್ದ 24 ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬೋಫೋರ್ಸ್ ಅಥವಾ ಫೀಲ್ಡ್ ಗನ್ ಮತ್ತು ಯುದ್ದ ವಿಮಾನ ಕೂಡ ಮ್ಯೂಸಿಯಂಗೆ ಬರಲಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಸನ್ನಿಸೈಡ್ ನಿವಾಸವನ್ನು ಅಭಿವೃದ್ದಿಪಡಿಸಲಾಗಿದ್ದು, ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲು 1.75 ಕೋಟಿ ರೂ.ಗಳ ಅಗತ್ಯವಿದೆ ಎಂದು ನಂಜಪ್ಪ ಮಾಹಿತಿ ನೀಡಿದರು. ಜನರಲ್ ತಿಮ್ಮಯ್ಯ ಅವರ ಹೆಸರಲ್ಲಿ ಮ್ಯೂಸಿಯಂ ನಿರ್ಮಿಸಿ ಆ ಮೂಲಕ ಯುವ ಪೀಳಿಗೆಗೆ ಸೈನ್ಯ ಸೇರಲು ಪ್ರೇರಣೆ ನೀಡುವ ಉದ್ದೇಶವೂ ಇದೆ. ಕೊಡಗು ಜಿಲ್ಲೆಯಿಂದ ಮತ್ತಷ್ಟು ಸೇನಾ ಜನರಲ್‍ಗಳು ಆ ಮೂಲಕ ರೂಪುಗೊಳ್ಳಬೇಕು ಎಂಬ ಆಶಯ ಫೋರಂನದು ಎಂದು ತಿಳಿಸಿದರು. ಈ ಸಂದರ್ಭ ಫೋರಂನ ಪ್ರಧಾನ ಕಾರ್ಯದರ್ಶಿ ಉಳ್ಳಿಯಡ ಪೂವಯ್ಯ, ಪ್ರಮುಖರಾದ ರಾಜ್ ಮಾದಪ್ಪ, ನವೀನ್ ಬೆಳ್ಯಪ್ಪ ಹಾಜರಿದ್ದರು.

Translate »